ರಾಮನಗರ: ಬಿಜೆಪಿ-ಜೆಡಿಎಸ್ ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರಂಭಿಸುತ್ತಿರುವ ಪಾದಯಾತ್ರೆಗೆ ಸೆಡ್ಡು ಹೊಡೆಯಲು ಕೈ ಪಾಳಯ ಸಜ್ಜುಗೊಂಡಿದ್ದು, ಪಾದಯಾತ್ರೆ ಸಾಗುವ ಪ್ರಮುಖ ಪಟ್ಟಣಗಳಲ್ಲಿ ಒಂದು ದಿನ ಮೊದಲು ಜನಾಂದೋಲನ ಸಮಾವೇಶ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.
ಆ. 2ರಂದು ಬಿಡದಿಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದು ತರಾತುರಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಬಳಿಕ ಬೆಂಗಳೂರಿ ನಿಂದ ಮೈಸೂರು ವರೆಗಿನ ಪ್ರತೀ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ.
ಎನ್‌ಡಿಎ ಪಾದಯಾತ್ರೆಯು ಆ. 3ಕ್ಕೆ ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿಯನ್ನು ಪ್ರವೇಶಿಸಲಿದೆ. ಕಾಂಗ್ರೆಸ್ ಅದರ ಹಿಂದಿನ ದಿನವೇ (ಆ. 2) ಅಲ್ಲಿ ಸಮಾವೇಶದ ಮೂಲಕ ಶಕ್ತಿಪ್ರದರ್ಶನಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಬಳಿಕ ಆ. 3ರಂದು ರಾಮನಗರದಲ್ಲಿ, ಆ. 4ರಂದು ಚನ್ನಪಟ್ಟಣದಲ್ಲಿ ನಡೆಯಲಿದ್ದು, ಪಾದಯಾತ್ರೆ ಆಗಮಿಸುವ ಒಂದು ದಿನ ಮುಂಚಿತವಾಗಿ ಅಲ್ಲೆಲ್ಲ ಸಭೆ ನಡೆಸಲಿದ್ದು, ಕೊನೆಯ ಹಂತವಾಗಿ ಮೈಸೂರಿನಲ್ಲಿ ಕಾಂಗ್ರೆಸ್ ಸಹ ಬೃಹತ್ ಸಭೆ ನಡೆಸಲಿದೆ.
ಎಲ್ಲೆಲ್ಲಿ ಕೈ’ ಸಭೆ?
ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಮತ್ತು ಮೈಸೂರು