ಲಕ್ನೋ : 80 ಲೋಕಸಭಾ ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವನ್ನು ತಡೆಯಲು ಕಾಂಗ್ರೆಸ್ ಇನ್ನಿಲ್ಲದ ರಣತಂತ್ರಗಳನ್ನು ಹಣೆಯುತ್ತಿದ್ದು, 7 ಸ್ಥಾನಗಳನ್ನು ಎಸ್‌ಪಿ,ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿ ಕೂಟಕ್ಕೆ ಬಿಟ್ಟು ಕೊಟ್ಟಿದೆ.
ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾವು ಏಳು ಸ್ಥಾನಗಳನ್ನು ಮೈತ್ರಿಕೂಟಕ್ಕೆ ಬಿಟ್ಟುಕೊಟ್ಟಿದ್ದೇವೆ.ಅವುಗಳಲ್ಲಿ ಮೈನ್‌ಪುರಿ, ಕನೌಜ್, ಫಿರೋಜಾಬಾದ್ ಸೇರಿದ್ದು ಮಾಯಾವತಿ, ಜಯಂತ್ ಸಿಂಗ್ ಮತ್ತು ಅಜಿತ್ ಸಿಂಗ್ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದರು.
ಗೊಂಡಾ ಮತ್ತು ಪಿಲಿಭೀತ್ ಕ್ಷೇತ್ರಗಳನ್ನು ಅಪ್ನಾದಳಕ್ಕೆ ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಅಪ್ನಾದಳದ ಮೊಹನ್ ದಾಲ್ ಅವರು ಕಾಂಗ್ರೆಸ್ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ.
ಎಸ್‌ಪಿ 37, ಬಿಎಸ್‌ಪಿ 38 ಮತ್ತು ಆರ್‌ಎಲ್‌ಡಿ 3 ಸೀಟುಗಳನ್ನು ಹಂಚಿಕೊಂಡಿದ್ದು,ರಾಹುಲ್ ಮತ್ತು ಸೋನಿಯಾ ಅವರಿಗಾಗಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ.
ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ.ಮೊದಲ ಹಂತ ಎಪ್ರಿಲ್ 11 ರಂದು ನಡೆದರೆ ಮೇ 19 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರ ಬೀಳಲಿದೆ.