Advertisement

ಕಾಂಗ್ರೆಸ್‌ ಮುಖಂಡರೇ ಬಿಜೆಪಿ ಸೇರಲಿದ್ದಾರೆ : ನಳಿನ್‌ 

11:08 AM Apr 12, 2018 | Team Udayavani |

ಸುಳ್ಯ: ಬಿಜೆಪಿಯ ಕಾರ್ಯಕರ್ತರು ಅಥವಾ ಮುಖಂಡರು ಕಾಂಗ್ರೆಸ್‌ ಪಕ್ಷದತ್ತ ಹೋಗುವ ಪ್ರಶ್ನೆಯೇ ಉದ್ಭವಿಸಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದ ನೀತಿಯಿಂದ ಬೇಸತ್ತು, ಕೆಲವೇ ದಿನಗಳಲ್ಲಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳುವುದು ನಿಶ್ಚಿತ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಸಚಿವ ರಮಾನಾಥ ರೈ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಮುಖಂಡರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದು ಶೀಘ್ರ ಪಕ್ಷವನ್ನು ಸೇರಲಿದ್ದಾರೆ ಎಂಬ ಸಚಿವ ರಮಾನಾಥ ರೈ ಅವರ ಹೇಳಿಕೆಯನ್ನು ಅಲ್ಲಗಳೆದರು. ರೈಗಳದ್ದು ಹಾಸ್ಯಾಸ್ಪದ ಹೇಳಿಕೆ. ಸಚಿವರು ಹಗಲು ಕನಸು ಕಾಣುತ್ತಿರಬಹುದು. ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಲು ಹಲವರು ಮುಂದಾಗಿದ್ದು, ಕೆಲ ದಿನಗಳಲ್ಲಿಯೇ ಯಾವ ಪಕ್ಷದಿಂದ ಯಾರು ಪಕ್ಷ ಬಿಡುತ್ತಾರೆ ಅನ್ನುವುದು ರಮನಾಥ ರೈ ಅವರಿಗೆ ಗೊತ್ತಾಗಲಿದೆ ಎಂದರು.

ಆಕಾಂಕ್ಷಿಗಳು ಹೆಚ್ಚಿರಬಹುದು
ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್‌ಗೆ ಪೈಪೋಟಿಯಿದ್ದು, ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಳಿನ್‌ ಕುಮಾರ್‌, ಒಂದು ಕಾಲದಲ್ಲಿ ಬಿಜೆಪಿಗೆ ಅಭ್ಯರ್ಥಿಯನ್ನು ಹುಡುಕುವುದೇ ಸವಾಲಾಗಿತ್ತು. ಅಂತಹ ಪಕ್ಷದಲ್ಲಿ ಆಕಾಂಕ್ಷಿತರ ದಂಡೇ ಇರುವುದು ಪಕ್ಷದ ಬಲವರ್ಧನೆಯ ಸಂಕೇತ. ಆಕಾಂಕ್ಷೆ ಸಹಜ. ಅದರಿಂದ ಪಕ್ಷಕ್ಕೆ ಧಕ್ಕೆ ಆಗದಂತೆ ತಡೆಯಲು ಬಿಜೆಪಿ ಸನ್ನದ್ಧವಾಗಿದೆ ಎಂದರು.

ಮೂರು ದಿನದಲ್ಲಿ ಎರಡನೇ ಪಟ್ಟಿ
ಉಳಿದ ಕ್ಷೇತ್ರಗಳ ಅಭ್ಯರ್ಥಿ ಘೋಷಣೆಗೆ ದಿನಾಂಕ ನಿಗದಿ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು, ರಾಷ್ಟ್ರೀಯ ಅಧ್ಯಕ್ಷರು ಮುಂದಿನ ಎರಡು ಮೂರು ದಿನಗಳಲ್ಲಿ ಪಟ್ಟಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ್‌ ಕಣೆಮರಡ್ಕ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್‌ ವಳಲಂಬೆ, ಪ್ರಧಾನ ಕಾರ್ಯದರ್ಶಿ ಸುಬೋಧ ಶೆಟ್ಟಿ ಮೇನಾಲ, ಉಮೇಶ್‌ ವಾಗ್ಲೆ, ಎನ್‌.ಎ. ರಾಮಚಂದ್ರ, ಶೀನಪ್ಪ ಬಯಂಬು, ವಿನಯ ಕುಮಾರ್‌ ಕಂದಡ್ಕ ಉಪಸ್ಥಿತರಿದ್ದರು.

ಭಟ್‌ ಹೇಳಿಕೆ ಗಮನಿಸಿಲ್ಲ
ಕಲ್ಲಡ್ಕ ಪ್ರಭಾಕರ ಭಟ್‌ ಅವರು ಭಾಷಣವೊಂದರಲ್ಲಿ ತುಳುನಾಡಿನ ದೈವದ ಅಸ್ತಿತ್ವವನ್ನು ಪ್ರಶ್ನಿಸಿ, ಜನರ ನಂಬಿಕೆಯ ಮೇಲೆ ಘಾಸಿ ಮಾಡಿದ್ದಾರೆ ಎಂಬ ಸಚಿವ ರಮಾನಾಥ ರೈ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ನಳಿನ್‌ ಕುಮಾರ್‌ ಕಟೀಲು, ನಾನು ಕಲ್ಲಡ್ಕ ಪ್ರಭಾಕರ ಭಟ್‌ ಅವರ ಭಾಷಣವನ್ನು ಆಲಿಸಿಲ್ಲ, ನೋಡಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ತತ್‌ಕ್ಷಣ ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next