ಬೆಂಗಳೂರು: ವಿಶ್ವಾಸ ಮತ ಯಾಚನೆ ಗುರುವಾರಕ್ಕೆ ಮುಂದೂಡಿದ್ದರಿಂದ ಹೆಚ್ಚಿನ ಕಾಂಗ್ರೆಸ್ ಶಾಸಕರು ಹೊಟೇಲ್‌ನಲ್ಲಿ ಉಳಿದುಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹೊಟೇಲ್‌ನಲ್ಲಿಯೇ ನಾಲ್ಕು ದಿನ ಕಳೆದಿದ್ದು ಇನ್ನೂ ಮೂರು ದಿನ ಹೊಟೇಲ್‌ನಲ್ಲಿಯೇ ಉಳಿದರೆ, ಕ್ಷೇತ್ರದ ಜನತೆಯ ಮುಂದೆ ಹೋಗುವುದು ಕಷ್ಟವಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ನಾಯಕರ ಎದುರು ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.
ಅಲ್ಲದೇ ಇಷ್ಟೊಂದು ಗೊಂದಲದಲ್ಲಿ ಮೈತ್ರಿ ಸರ್ಕಾರ ಮುಂದುವರಿಸುವುದಕ್ಕಿಂತ ರಾಜೀನಾಮೆ ಸಲ್ಲಿಸಿ ಪ್ರತಿಪಕ್ಷದಲ್ಲಿಯೇ ಕೂರುವುದು ಸೂಕ್ತ ಎಂಬ ಅಭಿಪ್ರಾಯವನ್ನು ಬಹುತೇಕ ಶಾಸಕರು ಹೊರ ಹಾಕಿದ್ದಾರೆ ಎನ್ನಲಾಗಿದೆ. ಶಾಸಕರ ಮುನಿಸಿನಿಂದ ಕಂಗಾಲಾಗಿರುವ ಕಾಂಗ್ರೆಸ್ ನಾಯಕರು ಮೇಲಿಂದ ಮೇಲೆ ಸಭೆ ನಡೆಸಿ ಶಾಸಕರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕರ ಮುನಿಸು ಕಡಿಮೆ ಮಾಡಲು ಹೊಟೇಲ್‌ನಿಂದ ರೆಸಾರ್ಟ್‌ಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪ್ರಕೃತಿ ರೆಸಾರ್ಟ್‌ಗೆ ಸ್ಥಳಾಂತರಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಬೆಳಿಗ್ಗೆಯಷ್ಟೇ ಶಾಸಕಾಂಗ ಸಭೆ ನಡೆಸಿದ್ದ ನಾಯಕರು ಸಂಜೆ ಹೊಟೇಲ್‌ನಲ್ಲಿ ಮತ್ತೂಂದು ಬಾರಿ ಅನೌಪಚಾರಿಕ ಶಾಸಕಾಂಗ ಪಕ್ಷದ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಶಾಸಕರು ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಭರವಸೆ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಕೆಲವು ಶಾಸಕರು ವಿಶ್ವಾಸದ ಮೇಲೆ ತಮ್ಮ ಕ್ಷೇತ್ರಗಳಿಗೆ ಹೋಗಲು ಅವಕಾಶವನ್ನೂ ಕಲ್ಪಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.
ಸಂಜೆಯ ಸಭೆಯ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಗುರುವಾರ ವಿಶ್ವಾಸ ಮತ ಮಂಡನೆಯ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರ ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಆದರೂ. ವಿಶ್ವಾಸ ಮತ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.