Advertisement
ಒಂದು ತಿಂಗಳ ಕಾಲ ನಡೆಯುವ ಹೋರಾಟ, ಪ್ರತಿಭಟನೆಯ ರೂಪುರೇಷೆಗಳನ್ನು ಚರ್ಚಿಸಿ, ಮಂಗಳವಾರ ಈ ಕುರಿತ ಸುತ್ತೋಲೆಯನ್ನೂ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಅದರಲ್ಲಿ ಇಡೀ ತಿಂಗಳಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಹೇಗೆ ಹೋರಾಟಗಳನ್ನು ನಡೆಸಬೇಕು ಎಂಬ ವಿವರಣೆಯನ್ನೂ ನೀಡಲಾಗಿದೆ.
ಈ ಕಾರ್ಯತಂತ್ರದ ಭಾಗವಾಗಿ, ಮಂಗಳವಾರ ರಾತ್ರಿ 7 ಗಂಟೆಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ದೆಹಲಿಯ ಕೆಂಪುಕೋಟೆಯಿಂದ ಟೌನ್‌ಹಾಲ್‌ವರೆಗೆ ಪಂಜಿನ ಮೆರವಣಿಗೆ ನಡೆಸಿದ್ದಾರೆ. ಬುಧವಾರ ದೇಶದ 35 ಪ್ರಮುಖ ನಗರಗಳಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಜತೆಗೆ, ಪಕ್ಷದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಘಟಕಗಳು ಜಿಲ್ಲಾ ಪ್ರಧಾನ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ರಾಹುಲ್ ಅನರ್ಹತೆ ಖಂಡಿಸಿ ಮಾ.29ರಿಂದ ಏ.8ರವರೆಗೆ ಬ್ಲಾಕ್, ಮಂಡಲ ಮಟ್ಟದಲ್ಲಿ “ಜೈ ಭಾರತ್ ಸತ್ಯಾಗ್ರಹ’, ಪೋಸ್ಟ್ ಕಾರ್ಡ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೊನೆಗೆ ರಾಷ್ಟ್ರೀಯ ಮಟ್ಟದ ಜೈಭಾರತ್ ಮಹಾ ಸತ್ಯಾಗ್ರಹವನ್ನು ನಡೆಸಲೂ ಕಾಂಗ್ರೆಸ್ ಯೋಜಿಸಿದೆ.
Related Articles
ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಲೋಕಸಭಾ ಕಾರ್ಯಾಲಯ ಕಳುಹಿಸಿದ್ದ ನೋಟಿಸ್‌ಗೆ ಮಂಗಳವಾರ ಉತ್ತರಿಸಿರುವ ರಾಹುಲ್, “ಈ ಸೂಚನೆಯನ್ನು ನಾನು ಶಿರಸಾವಹಿಸಿ ಪಾಲಿಸುತ್ತೇನೆ’ ಎಂದಿದ್ದಾರೆ. “ಕಳೆದ 4 ಅವಧಿಯಿಂದಲೂ ಸಂಸತ್ ಸದಸ್ಯನಾಗಿ ಈ ಬಂಗಲೆಯಲ್ಲಿ ನಾನಿದ್ದೇನೆ. ಇಲ್ಲಿ ನಾನು ಕಳೆದಿರುವ ಪ್ರತಿಯೊಂದು ಖುಷಿಯ ಕ್ಷಣವೂ ಸ್ಮರಣೀಯವಾದದ್ದು’ ಎಂದೂ ಬರೆದಿದ್ದಾರೆ.
Advertisement
ಇದೇ ವೇಳೆ, ಮಂಗಳವಾರ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ರಾಹುಲ್ ಗಾಂಧಿ ಅವರಿಗೆ ಬೆದರಿಕೆಯೊಡ್ಡುವ, ಹೆದರಿಸುವ ಮತ್ತು ಅವಮಾನಿಸುವ ಸರ್ಕಾರದ ವರ್ತನೆಯನ್ನು ನಾವು ಖಂಡಿಸುತ್ತೇವೆ’ ಎಂದಿದ್ದಾರೆ. ಬಂಗಲೆ ಖಾಲಿ ಮಾಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, “ಇದು ಸಣ್ಣತನದ ಮನುಷ್ಯನ ಸಣ್ಣತನದ ರಾಜಕೀಯ’ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು, ರಾಹುಲ್ ಅನರ್ಹತೆಯು ಪ್ರಜಾಸತ್ತೆಯ ಮೇಲಿನ ದಾಳಿ ಎಂದು ಕರೆದಿರುವ ದೇಶದ ಸಾವಿರಕ್ಕೂ ಅಧಿಕ ಕಲಾವಿದರು, ಹೋರಾಟಗಾರರು, ಶೈಕ್ಷಣಿಕ ತಜ್ಞರು, ವಿಜ್ಞಾನಿಗಳು ಹಾಗೂ ನಾಗರಿಕ ಸಮಾಜದ ಸದಸ್ಯರು, “ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಕ್ಕಾಗಿ ಉದ್ದೇಶಪೂರ್ವಕವಾಗಿ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಆರೋಪಿಸಿ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.
ಜನ ಮೋದಿ ಜತೆಗಿದ್ದಾರೆ: ಸ್ಮತಿರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ವರ್ಚಸ್ಸನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ದೇಶದ ಜನ ಮೋದಿ ಅವರ ಜತೆಗಿದ್ದಾರೆ. ಹೀಗಾಗಿ, ರಾಹುಲ್ ಅವರ ಯತ್ನ ಸಫಲವಾಗದು ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ. ಒಬಿಸಿ ಸಮುದಾಯಕ್ಕೆ ಅವಮಾನ ಮಾಡಿರುವ ರಾಹುಲ್ ಇನ್ನೂ ಕ್ಷಮೆ ಕೇಳಿಲ್ಲ. ಈ ಮೂಲಕ ಗಾಂಧಿ ಕುಟುಂಬ ತನ್ನ ರಾಜಕೀಯ ಅಹಂಕಾರವನ್ನು ಪ್ರದರ್ಶಿಸಿದೆ ಎಂದೂ ಆರೋಪಿಸಿದ್ದಾರೆ. ಈ ನಡುವೆ ಮಾತನಾಡಿರುವ ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್, “ವಿದೇಶಿ ಮಹಿಳೆಗೆ ಹುಟ್ಟಿದ ವ್ಯಕ್ತಿ ಎಂದೂ ದೇಶಭಕ್ತನಾಗಲು ಸಾಧ್ಯವಿಲ್ಲ’ ಎಂಬ ವಿವಾದಿತ ಹೇಳಿಕೆ ನೀಡಿದ್ದಾರೆ. ಬಿಜೆಪಿಯಿಂದಲೂ ಪ್ರತಿಭಟನೆ ತೀವ್ರ
ಕಾಂಗ್ರೆಸ್ ಹೋರಾಟಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಪ್ರತಿಭಟನೆಯ ಹಾದಿ ಹಿಡಿದಿದೆ. ರಾಹುಲ್ ಒಬಿಸಿ ಸಮುದಾಯಕ್ಕೆ ಅವಮಾನ ಮಾಡಿದ್ದು, ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಬಿಜೆಪಿಯ ಒಬಿಸಿ ಸಂಸದರು ಮಂಗಳವಾರ ಸಂಸತ್ ಭವನದಿಂದ ವಿಜಯ್ ಚೌಕ್‌ವರೆಗೆ ಪಾದಯಾತ್ರೆ ನಡೆಸಿದ್ದು, ರಾಹುಲ್ ಕ್ಷಮೆಗೆ ಪಟ್ಟುಹಿಡಿದಿದ್ದಾರೆ.