Advertisement
ಕಾಂಗ್ರೆಸ್ ಮುಖಂಡ ಬಿ. ವೈಕುಂಠ ಬಾಳಿಗಾ 1962ರಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಅಂದಿನ ಮೈಸೂರು ವಿಧಾನಸಭೆಯ ಸ್ಪೀಕರ್ ಆಗಿದ್ದರು. 1967ರಲ್ಲಿ ಮತ್ತೆ ಚುನಾಯಿತರಾಗಿ ಸ್ಪೀಕರ್ ಹುದ್ದೆಯಲ್ಲಿ ಮುಂದುವರಿದಿದ್ದರು. ಬಳಿಕ ಈ ಬಾರಿ ಸ್ಪೀಕರ್ ಸ್ಥಾನ ಕರಾವಳಿಗೆ ಒಲಿದಿದೆ.
ಕರಾವಳಿಗೆ ಸಭಾಪತಿ
ಕಾಂಗ್ರೆಸ್ ನಾಯಕ ಕೆ.ಕೆ. ಶೆಟ್ಟಿ 1957ರಿಂದ 1958ರ ವರೆಗೆ ಮೈಸೂರು ವಿಧಾನ ಪರಿಷತ್‌ನ ಉಪ ಸಭಾಪತಿಯಾಗಿದ್ದರು. 1968ರಿಂದ 1970ರ ವರೆಗೆ ಸಭಾಪತಿಯಾಗಿದ್ದರು. ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಚಂದ್ರ ಶೆಟ್ಟಿ ಅವರು 2018ರಿಂದ 2021ರವರೆಗೆ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು.
Related Articles
ಲೋಕಸಭೆ ಸ್ಪೀಕರ್
1977ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಕೆ.ಎಸ್. ಹೆಗ್ಡೆ ಅವರು ಲೋಕಸಭೆಯ ಸ್ಪೀಕರ್ ಆಗಿದ್ದರು.
Advertisement
ಸಚಿವಾಕಾಂಕ್ಷಿಗಳಲ್ಲಿ ಗರಿಗೆದರಿದ ನಿರೀಕ್ಷೆಶಾಸಕ ಯು.ಟಿ. ಖಾದರ್ ಸಚಿವರಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದ ಬದಲಾವಣೆಯಿಂದಾಗಿ ಸಚಿವ ಹುದ್ದೆ ಕೈ ತಪ್ಪಿ “ಸ್ಪೀಕರ್’ ಸ್ಥಾನಕ್ಕೆ ಖಾದರ್ ಸಮಾಧಾನ ಪಡುವಂತಾಗಿದೆ. ಇದರಿಂದಾಗಿ ಕರಾವಳಿಯಲ್ಲಿ ಯಾರಿಗೆ ಸಚಿವ ಗಿರಿ ಸಿಗಬಹುದು? ಎಂಬ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮೊದಲ ಬಾರಿಗೆ ಶಾಸಕ ಸ್ಥಾನ ಪಡೆದಿದ್ದು, ಸಚಿವ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಮೂಲತಃ ಕರಾವಳಿಯವರಾದ ವಿಧಾನ ಪರಿಷತ್‌ನ ಬಿ.ಕೆ. ಹರಿಪ್ರಸಾದ್, ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಅವರು ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಇದರ ಜತೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ವಿ. ಪರಿಷತ್ ಮೂಲಕ ಕರೆತಂದು ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜತೆಗೆ ಇತರರ ಹೆಸರು ಕೂಡ ಪ್ರಸ್ತಾವದಲ್ಲಿದೆ. ಖಾದರ್ ನಡೆದು ಬಂದ ಹಾದಿ
ಮಂಗಳೂರು: ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿರುವ ಯು.ಟಿ. ಖಾದರ್ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದವರು. ಅಂದಿನ “ಉಳ್ಳಾಲ’ ಅರ್ಥಾತ್ ಇಂದಿನ “ಮಂಗಳೂರು ವಿಧಾನಸಭಾ ಕ್ಷೇತ್ರ’ದಲ್ಲಿ ಯು.ಟಿ. ಫರೀದ್ ಅವರು 1972-1978- 1999-2004ರಲ್ಲಿ ಜಯಿಸಿದ್ದರು. ಅವರ ನಿಧನಾನಂತರ ಪುತ್ರ ಯು.ಟಿ. ಖಾದರ್ ಈ ಕ್ಷೇತ್ರವನ್ನು 2007, 2008, 2013, 2018 ಹಾಗೂ 2023ರಲ್ಲಿ ಜಯಿಸಿದ್ದಾರೆ. ಖಾದರ್ ಅವರು ಬಿಎ ಎಲ್‌ಎಲ್‌ಬಿ ಪದವೀಧರ.
2008ರಿಂದ 2013ರ ಅವಧಿಯ ವಿಧಾನಸಭೆಯ ಅತ್ಯುತ್ತಮ ಕಾರ್ಯ ವೈಖರಿಗಾಗಿ “ಸದನ ವೀರ’ ಹಾಗೂ “ಶೈನಿಂಗ್ ಇಂಡಿಯಾ’ ಅವಾರ್ಡ್ ಪ್ರಶಸ್ತಿ ಗಳಿಸಿದ್ದರು. 2021ರಲ್ಲಿ ಕರ್ನಾಟಕ ವಿಧಾನಸಭೆಯ ವಿಪಕ್ಷದ ಉಪ ನಾಯಕನಾಗಿ ಆಯ್ಕೆಯಾಗಿ 2023ರ ವರೆಗೆ ಕಾರ್ಯ ನಿರ್ವಹಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿ 2016ರ ತನಕ ಕಾರ್ಯನಿರ್ವಹಿಸಿದರು. ಬೈಕ್ ಆ್ಯಂಬುಲೆನ್ಸ್, 108, ಆರೋಗ್ಯಶ್ರೀ, ದಂತ ಭಾಗ್ಯ, ಸರಕಾರೀ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಹರೀಶ್ ಸಾಂತ್ವನ ಯೋಜನೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದರು. ಕೇಂದ್ರ ಸರಕಾರ ನೀಡುವ “ಉತ್ತಮ ಆರೋಗ್ಯ ಸಚಿವ’ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿದ್ದರು. 2016ರಿಂದ 2018ರ ತನಕ ಆಹಾರ ಸಚಿವರಾಗಿ ಪಡಿತರ ಚೀಟಿಗಾಗಿ ಸಲ್ಲಿಸಬೇಕಾಗಿದ್ದ 10ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸಲು ಶ್ರಮಿಸಿದ್ದರು. 2018ರಲ್ಲಿ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಮಂಗಳೂರು ಸ್ಮಾರ್ಟ್‌ಸಿಟಿ ಸಹಿತ ಹಲವು ಯೋಜನೆಗೆ ವೇಗ ನೀಡಿದ್ದರು. ಜನಪರ ಕೆಲಸ ಕಾರ್ಯಗಳ ಜತೆಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದು, ಜಾತಿ-ಧರ್ಮ ಹೊರತಾಗಿ ಎಲ್ಲರೊಂದಿಗೆ ನಿಕಟ ಜನಸಂಪರ್ಕ ಪಡೆದಿರುವುದು ಹಾಗೂ ಜಾತ್ಯತೀತ ನಿಲುವು ಪ್ರದರ್ಶಿಸಿ ಅದರಂತೆ ನಡೆದುಕೊಳ್ಳುತ್ತಿರುವುದು ಖಾದರ್ ಹೆಗ್ಗಳಿಕೆ.