ಹಾಸನ: ಹಾಸನ ನಗರಸಭಾ ವ್ಯಾಪ್ತಿಗೆ ಸೇರಿರುವ 10 ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳು ನಗರಸಭೆಗೆ ಸೇರಿ ಅತಂತ್ರ ಸ್ಥಿತಿಯಲ್ಲಿವೆ. ಹೀಗಾಗಿ ಆ ಪಂಚಾಯ್ತಿಗಳನ್ನು ಪುನರ್ ವಿಂಗಡಣೆ ಮಾಡಿ, ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, ಹಾಸನ ನಗರಸಭೆ ವ್ಯಾಪ್ತಿಗೆ ಸೇರಿರುವ 10 ಗ್ರಾಪಂಗಳ ಪೈಕಿ ಸತ್ಯಮಂಗಲ, ಹರಳಹಳ್ಳಿ ಗ್ರಾಪಂ ಪೂರ್ಣ ಪ್ರಮಾಣದಲ್ಲಿ, ಉಳಿದ ಪಂಚಾಯ್ತಿಯ ಕೆಲವು ಗ್ರಾಮಗಳು ಹಾಸನ ನಗರಸಭೆಗೆ ಸೇರುತ್ತವೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ನಗರಸಭೆಗೆ ಸೇರದ ಗ್ರಾಮಗಳನ್ನು ಪುನರ್ ವಿಂಗಡಿಸಿ ಹೊಸದಾಗಿ ಗ್ರಾಪಂ ರಚನೆ ಮಾಡಬೇಕು ಎಂದು ಹೇಳಿದರು.
ಗ್ರಾಪಂಗಳು ಅತಂತ್ರ: ನಗರಸಭೆಗೆ ಸೇರುವ ಗ್ರಾಮಗಳನ್ನು ನಗರಸಭೆ ವಾರ್ಡ್‌ಗಳಾಗಿ ಪುನರ್ ರಚನೆ ಮಾಡಬೇಕು. ಪುನರ್ರಚನೆಯ ಹೊಸ ಗ್ರಾಪಂ, ನಗರಸಭೆಯ ಹೊಸ ವಾರ್ಡ್ ಗಳಿಗೆ ಚುನಾವಣೆ ನಡೆಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆದರೆ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಈ ಗ್ರಾಪಂಗಳು ಆತಂತ್ರವಾಗಿವೆ ಎಂದು ಆರೋಪಿಸಿದರು.
ಇದನ್ನೂ ಓದಿ :“ಸುಷ್ಮಾ ಹೆಸರಲ್ಲಿ ಮೋಸ ಮಾಡಿದ ಹಾಸನದ “ವ್ಯಕ್ತಿ’ ವರ್ಷದ ಬಳಿಕ ಸೆರೆ
ಆಯೋಗಕ್ಕೆ ದೂರು: ತೇಜೂರು, ಬಿ. ಕಾಟೀಹಳ್ಳಿ, ಬೂವನಹಳ್ಳಿ, ಕಂದಲಿ, ಮಣಚನಹಳ್ಳಿ, ತಟ್ಟೆಕೆರೆ, ಹನುಮಂತಪುರ ಗ್ರಾಪಂಅನ್ನು ಪುನರ್ರಚಿಸಿ ಗ್ರಾಪಂ ಹಾಗೂ ನಗರಸಭೆ ಹೊಸ ವಾರ್ಡ್‌ಗಳ ಜನಪ್ರತಿನಿಧಿಗಳ ಆಯ್ಕೆಗೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.