Advertisement
ಮೊದಲ ಕ್ಯಾಬಿನೆಟ್‌ನಲ್ಲೇ ಒಪ್ಪಿಗೆರಾಜ್ಯ ವಿಧಾನಸಭಾ ಚುನಾವಣ ಪೂರ್ವದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಮತದಾರರ ಮುಂದೆ ಇಟ್ಟಿತ್ತು. ಕೊಟ್ಟ ಮಾತಿನ ಪ್ರಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಇವುಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಸಾರಿಗೆ ಸಂಸ್ಥೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ “ಶಕ್ತಿ’, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರದಾರರಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ಬದಲು ಅಷ್ಟೇ ಮೊತ್ತದ ಹಣವನ್ನು ಖಾತೆಗೆ ಹಾಕುವ “ಅನ್ನಭಾಗ್ಯ”, 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ “ಗೃಹಜ್ಯೋತಿ’ ಹಾಗೂ ಮೈಸೂರಿನಲ್ಲಿ ಚಾಲನೆ ಪಡೆದ “ಗೃಹಲಕ್ಷ್ಮಿ’ ಯೋಜನೆಯನ್ನು ಸರಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದೆಲ್ಲವೂ ಸಾರ್ವಜನಿಕರಲ್ಲಿ ಕಾಂಗ್ರೆಸ್ ಪರವಾಗಿ ಸಕಾರಾತ್ಮಕ ಭಾವನೆಯನ್ನು ಸೃಷ್ಟಿಸುತ್ತಿವೆ.
ನಗರ ಪ್ರದೇಶದ ಬಡವರು ಹಾಗೂ ದುಡಿಯುವ ವರ್ಗವನ್ನು ಲಕ್ಷ್ಯದಲ್ಲಿಟ್ಟುಕೊಂಡು “ಇಂದಿರಾ ಕ್ಯಾಂಟೀನ್’ ಯೋಜನೆಯನ್ನು ಮರಳಿ ಜಾರಿಗೆ ತರಲಾಗಿದೆ. ಸರಕಾರದ ಮೂಲಗಳ ಪ್ರಕಾರ ಪದವೀಧರ ಹಾಗೂ ಡಿಪ್ಲೋಮಾ ಪಾಸ್ ಮಾಡಿದ ನಿರುದ್ಯೋಗಿ ಯುವಕರಿಗಾಗಿ ರೂಪಿಸಿರುವ “ಯುವನಿಧಿ’ ಯೋಜನೆ ಡಿಸೆಂಬರ್ ತಿಂಗಳಿನಲ್ಲಿ ಜಾರಿಯಾಗಲಿದೆ. ಅಲ್ಲಿಗೆ ಸರಕಾರ ನೀಡಿದ ಪ್ರಮುಖ ಭರವಸೆಗಳೆಲ್ಲವೂ ವರ್ಷ ಕಳೆಯುವಷ್ಟರಲ್ಲಿ ಪೂರ್ಣಗೊಂಡಂತಾಗುತ್ತದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ನುಡಿದಂತೆ ನಡೆದಿದ್ದೇವೆ ಎಂಬುದು ಜಾಹಿರಾತಿಗೆ ಸೀಮಿತವಾದ ಘೋಷವಾಕ್ಯವಲ್ಲ. ಅಕ್ಷರಶಃ ಅದಕ್ಕೆ ಪೂರಕವಾಗಿ ನಡೆದುಕೊಂಡಿದ್ದೇವೆ ಎಂದು ಹೇಳುವುದಕ್ಕೆ ಪಂಚ ಗ್ಯಾರಂಟಿಗಳ ಜಾರಿಯನ್ನೇ ಸಾಕ್ಷಿಯಾಗಿ ಬಳಸಿಕೊಳ್ಳಬೇಕೆಂಬುದು ಕಾಂಗ್ರೆಸ್ ಚಿಂತಕರ ಚಾವಡಿಯ ಲೆಕ್ಕಾಚಾರವಾಗಿದೆ.