Advertisement

ಕಾಂಗ್ರೆಸ್‌-ಜೆಡಿಎಸ್‌ ವಾಗ್ಯುದ್ಧದಲ್ಲಿ ಅಧ್ಯಕ್ಷೆ ಸುಸ್ತು!

12:38 PM Dec 20, 2017 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಜಿಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಜೆಡಿಎಸ್‌ ಸದಸ್ಯರೊಬ್ಬರು ಆಡಿದ ಮಾತಿನಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಘಟನೆ ಮೈಸೂರು ಜಿಪಂನಲ್ಲಿ ನಡೆಯಿತು.

Advertisement

 2018-19ನೇ ಸಾಲಿನ ಕರಡು ವಾರ್ಷಿಕ ಯೋಜನೆ ಸಿದ್ಧಪಡಿಸುವ ಸಂಬಂಧ ಮಂಗಳವಾರ ಜಿಪಂ ವಿಶೇಷ ಸಭೆ ಕರೆಯಲಾಗಿತ್ತು. ಕೋರಂ ಅಭಾವದಿಂದ ಬೆಳಗ್ಗೆ 11ಗಂಟೆಗೆ ಕರೆಯಲಾಗಿದ್ದ ಸಭೆ ಆರಂಭವಾದಾಗ 11.40 ಆಗಿತ್ತು.

ಸಭೆಯ ಆರಂಭದಲ್ಲೇ ಜೆಡಿಎಸ್‌ನ ಸಾ.ರಾ.ನಂದೀಶ್‌, ಸರ್ಕಾರ ಚುನಾವಣೆ ಪೂರ್ವದಲ್ಲಿ ಜಿಪಂಗೆ ಹೆಚ್ಚಿನ ಮಾನ್ಯತೆ, ಅಧಿಕಾರ ಕೊಡುವುದಾಗಿ ಹೇಳಿತ್ತು. ಆದರೆ, ಯಾವುದೇ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ತನ್ನ ಗೌರವ ಧನವನ್ನು ತನ್ನ ಖಾತೆಗೆ ಜಮೆ ಮಾಡಬೇಡಿ, ಜತೆಗೆ ಖಾಲಿ ಚೆಕ್‌ ನೀಡುತ್ತೇನೆ. ಈವರೆಗೆ ಎಷ್ಟು ಗೌರವ ಧನ ನೀಡಿದ್ದೀರಿ ಅದನ್ನು ಹಿಂಪಡೆಯಿರಿ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಅದೇ ದಿನ ಜಿಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ, ಅಧ್ಯಕ್ಷರ ಪೀಠಕ್ಕೆ ಬಂದು ಚೆಕ್‌ ನೀಡಿ ಹೋದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಡಿ.ರವಿಶಂಕರ್‌, ಡಾ.ಪುಷ್ಪ ಅಮರನಾಥ್‌, ಅಧ್ಯಕ್ಷೆ ನಯಿಮಾ ಸುಲ್ತಾನ ವಿರುದ್ಧ ತಿರುಗಿ ಬಿದ್ದರು. ಸಭೆಯಲ್ಲಿ ರಾಜಕೀಯ ಮಾತುಗಳಿಗೆ, ಸಿಎಂ ವಿಚಾರ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಟ್ಟು ಸಭೆ ಗಂಭೀರತೆ ಹಾಳು ಮಾಡಿದ್ದೀರಿ. ಇದನ್ನು ಧಿಕ್ಕರಿಸಿ ನಾವು ಹೊರಹೋಗುತ್ತೇವೆ ಎಂದರು.

Advertisement

ಈ ಹಂತದಲ್ಲಿ ಸಭೆ ನಿಯಂತ್ರಿಸಲು ಅಧ್ಯಕ್ಷೆ ನಯಿಮಾ ಸುಲ್ತಾನ ಭಾರೀ ಪ್ರಯಾಸಪಟ್ಟರೂ ತಹಬಂದಿಗೆ ತರಲಾಗಲಿಲ್ಲ. ಬಿಜೆಪಿಯ ವೆಂಕಟಸ್ವಾಮಿ, ರಾಜಕೀಯ ಮಾತುಗಳನ್ನು ಕಡತದಿಂದ ತೆಗೆಸಿ ಸಭೆ ನಡೆಯಲು ಅನುವು ಮಾಡಿಕೊಡಿ ಎಂದು ಅಧ್ಯಕ್ಷರಿಗೆ ಸಲಹೆ ನೀಡಿದರು.

ಇದನ್ನು ಒಪ್ಪದ ಡಾ.ಪುಷ್ಪ ಅಮರನಾಥ್‌, ಪ್ರತಿ ಸಭೆಯಲ್ಲೂ ಇದೇ ಕಥೆನಾ ಎಂದು ಪ್ರಶ್ನಿಸಿ, ರವಿಶಂಕರ್‌ ಜತೆಗೆ ಅಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದರು. ಅಲ್ಲಿಗೆ ಜೆಡಿಎಸ್‌ನ ಎಂ.ಪಿ.ನಾಗರಾಜ್‌, ಮಾದೇಗೌಡ, ಸಾ.ರಾ.ನಂದೀಶ್‌, ಬಿಜೆಪಿ ವೆಂಕಟಸ್ವಾಮಿ ಕೂಡ ಬಂದಿದ್ದರಿಂದ ತೀವ್ರ ಮಾತಿನ ಚಕಮಕಿ ನಡೆಯಿತು.  ಮಧ್ಯಾಹ್ನ 12.55ಕ್ಕೆ ಮತ್ತೆ ಸಭೆ ಸೇರಿದಾಗ ಮಾತನಾಡಿದ ಸಿಇಒ ಶಿವಶಂಕರ್‌, ಘಟನಾವಳಿಯನ್ನು ಕಡತದಿಂದ ಕೈಬಿಡಲಾಗಿದೆ ಎಂದರು.

ಒಪ್ಪದ ಸಾ.ರಾ.ನಂದೀಶ್‌, ಬಾವಿಗಿಳಿದು ಧರಣಿ ಕುಳಿತರು. ಕಡೆಗೆ ಜೆಡಿಎಸ್‌ ಸದಸ್ಯರೇ ಆಗಮಿಸಿ ಕರೆದೊಯ್ದರು. ಈ ಹಂತದಲ್ಲಿ ಮಾತನಾಡಿದ ಅಮಿತ್‌ ದೇವರಹಟ್ಟಿ, ಬಾವಿಗಿಳಿಯುವ ಸದಸ್ಯರನ್ನು ಎರಡು ಸಭೆಗಳಿಗೆ ಅಮಾನತು ಮಾಡಿ ಎಂದರು. ಇನ್ನು ಪಶ್ಚಾತ್ತಾಪ ಪದವನ್ನು ವಾಪಸ್‌ ತೆಗೆದುಕೊಳ್ಳಿ ಎಂದು ಸಾ.ರಾ.ನಂದೀಶ್‌ ಆಗ್ರಹಿಸಿದರು.

ಗೌರವ ಸಂಭಾವನೆ ವಾಪಸ್‌ ಮಾಡಿದ್ದು ತಪ್ಪಲ್ಲ. ಆದರೆ, ವಿಶೇಷ ಸಭೆಯಲ್ಲಿ ಬೇಡ, ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ ಎಂದು ಬೀರಿಹುಂಡಿ ಬಸವಣ್ಣ ಸಲಹೆ ನೀಡಿದರೆ, ಅಮಿತ್‌ ದೇವರಹಟ್ಟಿ, ಬ್ಲಾಂಕ್‌ ಚೆಕ್‌ ಕೊಟ್ಟಿದ್ದೀರಿ, ವಾಪಸ್‌ ತೆಗೆದುಕೊಳ್ಳಿ, ಆ ಮೇಲೆ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು. 

“ಚೆಕ್‌’ ಕೊಡಲು ಬಡ್ಡಿ ವ್ಯವಹಾರ ಮಾಡಿಲ್ಲ…: ಅಧ್ಯಕ್ಷರು ಚೆಕ್‌ ಹೇಗೆ ಪಡೆದುಕೊಳ್ತಾರೆ? ನಿಮಗೆ ಜವಾಬ್ದಾರಿ ಇದೆಯಾ? ನೀವು ಸಭೆಯ ದಿಕ್ಕು ತಪ್ಪಿಸಿದ್ದೀರಿ, ಚೆಕ್‌ ವಾಪಸ್‌ ಕೊಡಿ, ಇಲ್ಲವಾದರೆ ಸಭೆ ನಡೆಯಲು ಬಿಡಲ್ಲ ಎಂದು ರವಿಶಂಕರ್‌, ಪುಷ್ಪಾ ಪಟ್ಟು ಹಿಡಿದರು. ಒಪ್ಪದ ಸಾ.ರಾ.ನಂದೀಶ್‌, ಸರ್ಕಾರಿ ಹಣವಾದ್ದರಿಂದ ಸಭೆಯಲ್ಲಿ ಚೆಕ್‌ ಕೊಟ್ಟಿದ್ದೇನೆ.

ಅಧ್ಯಕ್ಷರ ಮನೆಗೆ ಹೋಗಿ ಕೊಟ್ಟು ಬರಲು ನಾನು ಅವರ ಹತ್ತಿರ ಬಡ್ಡಿ ವ್ಯವಹಾರ ಮಾಡಿಲ್ಲ ಎಂದು ತಿರುಗೇಟು ನೀಡಿದರು. ಜೆಡಿಎಸ್‌ನ ಬೀರಿಹುಂಡಿ ಬಸವಣ್ಣ, ಬಾವಿಗೆ ಇಳಿಯುವುದು ಸರಿಯಲ್ಲ ಎಂದರು. ಈ ಹಂತದಲ್ಲಿ ಅಧ್ಯಕ್ಷೆ ನಯಿಮಾ ಸುಲ್ತಾನ ಅರ್ಧಗಂಟೆ ಸಭೆ ಮುಂದೂಡಿದರು. ಮಧ್ಯಾಹ್ನ 12.55ಕ್ಕೆ ಮತ್ತೆ ಸಭೆ ಸೇರಿದಾಗ ಮಾತನಾಡಿದ ಸಿಇಒ ಶಿವಶಂಕರ್‌, ಘಟನಾವಳಿಯನ್ನು ಕಡತದಿಂದ ಕೈಬಿಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next