ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ-ಸವಣೂರು ಕ್ಷೇತ್ರ ಹಲವು ಕಾರಣಗಳಿಂದ ರಾಜ್ಯದ ಗಮನ ಸೆಳೆದಿದೆ. ಈ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬೊಮ್ಮಾಯಿ ಮತ್ತೂಮ್ಮೆ ಕಣಕ್ಕಿಳಿದಿದ್ದು, ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕಸರತ್ತು ನಡೆಸುತ್ತಿರುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.
ಶಿಗ್ಗಾವಿ ಕ್ಷೇತ್ರಕ್ಕೆ ಇಬ್ಬರು ಸಿಎಂಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. ಈ ಕ್ಷೇತ್ರದಿಂದ ಎಸ್.ನಿಜಲಿಂಗಪ್ಪ ಅವಿರೋಧ ವಾಗಿ ಆಯ್ಕೆಯಾಗಿ ಸಿಎಂ ಆಗಿದ್ದರು. ಈಗ ಈ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದಾರೆ.
ಬೊಮ್ಮಾಯಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಈ ಸಲ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಜನರ ಮುಂದಿಟ್ಟು ಮತಯಾಚನೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ತಮ್ಮ ಪ್ರಭಾವದಿಂದಲೇ ಸಿಎಂ ಹುದ್ದೆ ಅಲಂಕರಿಸಿರುವ ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ಈ ಬಾರಿ ಹೊಸಮುಖವಾಗಿ ಯಾಸೀರ್‌ಖಾನ್ ಪಠಾಣ ಕಣಕ್ಕಿಳಿಸಿದ್ದು, ಕಾಂಗ್ರೆಸ್‌ನ ತಂತ್ರಗಾರಿಕೆ ಫಲ ಕೊಡುವುದೇ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿದೆ. ಈ ನಡುವೆ ಯಾಸೀರ್‌ಖಾನ್ ಪಠಾಣಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದ್ದರಿಂದ ಕ್ಷೇತ್ರ ದಲ್ಲಿ ತನ್ನದೇ ಆದ ಪ್ರಬಲ ಮತ ಬ್ಯಾಂಕ್ ಹೊಂದಿ ರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮುನಿಸಿ ಕೊಂಡಿದ್ದು, ಅವರ ನಿಗೂಢ ನಡೆ ತಲೆನೋವಾಗಿದೆ.
ಕ್ಷೇತ್ರದಲ್ಲಿ ಪಂಚಮಸಾಲಿ, ಮುಸ್ಲಿಂ ಸಮುದಾಯ ಪ್ರಾಬಲ್ಯ ಹೊಂದಿದ್ದು, ಚುನಾವಣೆಯಲ್ಲಿ ನಿರ್ಣಾ ಯಕ ಪಾತ್ರ ವಹಿಸಲಿವೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಪಂಚಮಸಾಲಿ ಸಮು ದಾಯದ ಶಶಿಧರ ಯಲಿಗಾರ ಎಷ್ಟು ಮತಗಳನ್ನು ಸೆಳೆಯುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.
ಇನ್ನೂ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡು ಮೊದಲ ಬಾರಿ ಚುನಾವಣೆಗೆ ಧುಮುಕಿರುವ ರಿಯಲ್ ಎಸ್ಟೇಟ್ ಉದ್ಯಮಿ ಯಾಸೀರ್‌ಖಾನ್ ಪಠಾಣ ಕ್ಷೇತ್ರದ ಜನರಿಗೆ ಹೊಸಮುಖವಾಗಿದ್ದು, ರಾಜಕಾರಣದಲ್ಲಿ ಅಷ್ಟು ಪಳಗಿಲ್ಲ. ಅಲ್ಪಸಂಖ್ಯಾಕ ಮತಗಳನ್ನೇ ನೆಚ್ಚಿಕೊಂಡಿರುವ ಯಾಸೀರ್‌ಖಾನ್ ಪಠಾಣಗೆ ತಮ್ಮದೇ ಸಮುದಾಯದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮುನಿಸಿ ಕೊಂಡಿರುವುದು ಬಹಳ ಆತಂಕ ಉಂಟು ಮಾಡಿದೆ.
ಯಲಿಗಾರ ಸ್ಪರ್ಧೆಯಿಂದ ಸಂಚಲನ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಲಿಂಗಾಯತ ಸಮುದಾಯದ ಶಶಿಧರ ಯಲಿಗಾರ ಜೆಡಿಎಸ್‌ನಿಂದ ಕಣಕ್ಕಿಳಿ ದಿದ್ದಾರೆ. ರಾಜಕೀಯ ಅನುಭವ ಇಲ್ಲದಿದ್ದರೂ ಸಮಾಜ ಸೇವಾ ಕಾರ್ಯ ಗಳಿಂದ ಗುರುತಿಸಿ ಕೊಂಡಿರುವ ಯಲಿಗಾರ ಸಿಎಂ ಬೊಮ್ಮಾಯಿ ಅವರನ್ನು ಎದುರಿಸಬೇಕಿದೆ. ಈ ಇಬ್ಬರು ಲಿಂಗಾಯತ ಸಮುದಾಯದ ಅಭ್ಯರ್ಥಿ ಗಳಾಗಿದ್ದು, ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಯಲಿಗಾರ, ಎಷ್ಟರ ಮಟ್ಟಿಗೆ ಪೈಪೋಟಿ ನೀಡುತ್ತಾರೆ ಎಂಬ ಕುತೂಹಲ ಕೆರಳಿಸಿದೆ.
~ ವೀರೇಶ ಮಡ್ಲೂರ