Advertisement

ಕಾಂಗ್ರೆಸ್‌ಗೆ ಹತ್ತಿರವಾದ ಜೆಡಿಎಸ್‌ನ 7 ಶಾಸಕರು 

03:50 AM Jan 28, 2017 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಏಳು ಶಾಸಕರು ಕಾಂಗ್ರೆಸ್‌ ಸೇರಲು ಉತ್ಸುಕರಾಗಿದ್ದು, ಮುಂದಿನ ತಿಂಗಳು ಇಲ್ಲವೇ ಉತ್ತರ ಪ್ರದೇಶ ಚುನಾವಣೆ ಮುಗಿದ ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ಗಾಂಧಿ ಭೇಟಿ ಮಾಡುವ ಸಾಧ್ಯತೆಯಿದೆ.

Advertisement

ಜೆಡಿಎಸ್‌ ವರಿಷ್ಠರು ತಮ್ಮ ಬಗ್ಗೆ ಕಟು ನಿಲುವು ಹೊಂದಿರುವ ಹಿನ್ನೆಲೆಯಲ್ಲಿ ತಮ್ಮ ದಾರಿ ನೋಡಿಕೊಳ್ಳಲು ಮುಂದಾಗಿರುವ ಏಳು ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಕಾಂಗ್ರೆಸ್‌ ಸೇರಿದರೆ ಏಳು ಶಾಸಕರಿಗೂ ಟಿಕೆಟ್‌ ನೀಡಬೇಕು ಎಂಬುದು ಇವರ ಬೇಡಿಕೆ. ಆದರೆ, ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಸಮಸ್ಯೆ ಇಲ್ಲವಾದರೂ ಎರಡು ಕ್ಷೇತ್ರಗಳಲ್ಲಿ ಕಷ್ಟವಾಗಬಹುದು. ಅಂತಿಮವಾಗಿ ಆ ಬಗ್ಗೆ ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ. ನೀವು ಸೋನಿಯಾಗಾಂಧಿ-ರಾಹುಲ್‌ಗಾಂಧಿ ಅವರನ್ನೇ ಖುದ್ದು ಭೇಟಿ ಮಾಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್‌ ಭಿನ್ನಮತೀಯರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಭರವಸೆಯೂ ದೊರೆತಿದೆ ಹೇಳಲಾಗಿದೆ.

ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದರಿಂದ ಮುಂದೆ ನಿಮ್ಮ ಹಿತಾಸಕ್ತಿ ಕಾಪಾಡಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್‌ ಅಭಯ ನೀಡಿರುವುದರಿಂದ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಸಮಸ್ಯೆಯಾಗದು ಎಂಬುದು ಜೆಡಿಎಸ್‌ ಭಿನ್ನರ ಭರವಸೆ. ಕಾಂಗ್ರೆಸ್‌ ಸೇರ್ಪಡೆ ಪ್ರಯತ್ನಗಳ ಹಿನ್ನೆಲೆಯಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್‌ಪವಾರ್‌ ಜತೆಗಿನ ಮಾತುಕತೆಯನ್ನು ಜೆಡಿಎಸ್‌ ಭಿನ್ನರು ಮುಂದೂಡಿದ್ದಾರೆ.

ಈ ಮಧ್ಯೆ, ಕ್ಷೇತ ಶುಕ್ರವಾರವೂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಚೆಲುವರಾಯಸ್ವಾಮಿ, ಜಮೀರ್‌ ಅಹಮದ್‌, ಬಾಲಕೃಷ್ಣ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಸಮಾಲೋಚನೆ ನಡೆಸಿದರು.

Advertisement

ಯಾರ ಮನೆಗೂ ಹೋಗಿಲ್ಲ
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಚೆಲುವರಾಯಸ್ವಾಮಿ,  ಟಿಕೆಟ್‌ಗಾಗಿ ಯಾರ ಬಳಿಗೂ ನಾವು ಹೋಗಿಲ್ಲ. ಪಕ್ಷ ನೀಡುವ ಟಿಕೆಟ್‌ಗಿಂತಲೂ ಜನ ನೀಡುವ ಟಿಕೆಟ್ಟೆ ಮುಖ್ಯ. ಅದು ಇದ್ದರೆ ವಿಧಾನಸಭೆ ಪ್ರವೇಶ ಮಾಡಬಹುದು ಹೇಳಿದರು.

ಕ್ಷೇತ್ರಕ್ಕೆ ಸಂಬಂಧಪಟ್ಟ ಕೆಲಸ ಕಾರ್ಯಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಯಿತು. ರಾಜಕೀಯ ಚರ್ಚಿಸಿಲ್ಲ. ರಾಜಕೀಯ ತೀರ್ಮಾನ ಕೈಗೊಳ್ಳಲು ಇದು ಸಕಾಲವಲ್ಲ ಎಂದು ತಿಳಿಸಿದರು.

ಎನ್‌ಸಿಪಿ ಸೇರಿದಂತೆ ಬೇರೆ ಪಕ್ಷ ಸೇರಬೇಕೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಇದು ಸೂಕ್ತ ಕಾಲವಲ್ಲ. ಜನ ಆಯ್ಕೆ ಮಾಡಿದ್ದು, ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಎನ್‌ಸಿಪಿ  ಮುಖಂಡ ಶರದ್‌ ಪವಾರ್‌ ಅವರು ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇನ್ನೂ ಸಭೆ ನಡೆಸುವ ಬಗ್ಗೆ ಯಾವುದೂ ನಿಗದಿಯಾಗಿಲ್ಲ ಎಂದು ಹೇಳಿದರು.

2018ರ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಸಿದ್ಧಪಡಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರಿದ್ದಂತಿಲ್ಲವಲ್ಲ ಎಂಬ ಪ್ರಶ್ನೆಗೆ,  “ಅದು ಅವರ ಪಕ್ಷ. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಎಲ್ಲ ಹಕ್ಕು, ಅಧಿಕಾರ ಅವರಿಗೇ ಇದೆ. ನಾವೇನು ಟಿಕೆಟ್‌ ಕೇಳುವುದಿಲ್ಲ. ನಾವು ಏಳು ಮಂದಿ ಒಟ್ಟಿಗೆ ಇದ್ದು, ಒಟ್ಟಾಗಿಯೇ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next