ತೀರ್ಥಹಳ್ಳಿ: ಜನ ಕೊಟ್ಟ ತೆರಿಗೆ ಹಣವನ್ನು ಕಾಂಗ್ರೆಸ್ ರಾಜ್ಯ ಸರ್ಕಾರ ಏನು ಮಾಡಿದೆ ಎಂಬುದನ್ನು ಲೆಕ್ಕ ಕೊಡಬೇಕು. ಎಂಟು ತಿಂಗಳಲ್ಲಿ ಒಂದು ಕಾಸನ್ನು ಕೂಡ ಅಭಿವೃದ್ಧಿ ಕಾಮಗಾರಿ ಮಾಡದೇ ದಾನ ಕೊಡುತ್ತೀನಿ, ಧರ್ಮ ಕೊಡುತ್ತೀನಿ ಎಂದು ಹೇಳಿ ಅಧಿಕಾರಕ್ಕೋಸ್ಕರ ಕೇಂದ್ರ ಸರ್ಕಾರದ ಜೊತೆಗೆ ಕುಸ್ತಿ ಮಾಡುವಂತಹದ್ದು ಜನರ ಹಾದಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಫೆ. 7ರ ಬುಧವಾರ ತಾಲೂಕಿನ ಗುಡ್ಡೆಕೊಪ್ಪದಲ್ಲಿ ಸ್ಥಳೀಯ ಮಾಧ್ಯಮದ ಜೊತೆಗೆ ಮಾತನಾಡಿ, ಖಂಡಿತವಾಗಿ ಕಾಂಗ್ರೆಸ್ ನವರು ಅಸಹಾಯಕರಾಗಿದ್ದಾರೆ. ರಾಜ್ಯ ಸರ್ಕಾರ ನಡೆಯಲಿಕ್ಕೆ ಆರ್ಥಿಕವಾದ ಯಾವುದೇ ಬೆಂಬಲ ಸರ್ಕಾರದ ಖಜಾನೆಯಲ್ಲಿ ಇಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಮೇಲೆ ಆಪಾದನೆ ಮಾಡಿ ಜನರ ದಿಕ್ಕನ್ನು ತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದರು.
ಕಾಂಗ್ರೆಸ್ ಸರ್ಕಾರ ಇಂದು ದೆಹಲಿಯ ಜಂತರ್ ಮಂತರ್ ನಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ತೆರಿಗೆ ಹಣವನ್ನು ರಾಜ್ಯಗಳಿಗೆ ನೀಡಲಿಲ್ಲ ಎಂಬ ಆಪಾದನೆ ಮಾಡಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಇಂದು ಚರ್ಚೆಗಳು ಬಹಳ ಚೆನ್ನಾಗಿ ಆಗುತ್ತಿವೆ. ಯಾರ ಕಾಲದಲ್ಲಿ ಎಷ್ಟು ರಾಜ್ಯಕ್ಕೆ ಬಂದಿತ್ತು, ಕೇಂದ್ರ ಎಷ್ಟು ಇಟ್ಟುಕೊಂಡಿತ್ತು. ಎಷ್ಟು ಕಲೆಕ್ಷನ್ ಆಗುತಿತ್ತು ಎಂದು ಪ್ರಶ್ನೆ ಮಾಡಿದರು.
ಈ ಚರ್ಚೆಗಳನ್ನು ಹುಟ್ಟುಹಾಕಿದ್ದು ತುಂಬಾ ಒಳ್ಳೆಯದಾಯಿತು. ಮೋದಿ ಸರ್ಕಾರ ಬಂದ ಮೇಲೆ ಎಷ್ಟೋ ಲಕ್ಷ ಕೋಟಿಗಳನ್ನು ಕರ್ನಾಟಕಕ್ಕೆ ಕೊಟ್ಟಿದ್ದೇನು ಎಂಬುದು ಎಲ್ಲರಿಗೂ ಗೊತ್ತಾಗಲಿದೆ ಎಂದರು ಹೇಳಿದರು.
ಕೇಂದ್ರದ ಮೋದಿ ಸರ್ಕಾರ ಈಗ ಒಟ್ಟಾಗಿರುವ ಒಕ್ಕೂಟದ ಹಣವನ್ನು ಮೋದಿ ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಅದಕ್ಕೂ ಸೂತ್ರಗಳಿವೆ. ಒಟ್ಟಾಗಿರುವ ತೆರಿಗೆ ಹಣವನ್ನು ಯಾವ ರೀತಿ ಹಂಚಬೇಕು. ಯಾವ ರಾಜ್ಯಕ್ಕೆ ಕಡಿಮೆ ಹೆಚ್ಚು ಕೊಡುವಂತಹದಲ್ಲ. ರಾಜ್ಯದ ಪಾಲಿಗೆ ಬಂದಿದ್ದನ್ನು ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಅದನ್ನು ತೆಗೆದುಕೊಂಡು ಹೋಗಿ ದಾನ ಕೊಡುತ್ತೀವಿ, ಕೇಂದ್ರದವರು ಹಣ ಕೊಡಿ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಒಳ್ಕೆಯದಾಗುವುದಿಲ್ಲ. ದೇಶ ಗಟ್ಟಿಯಾಗಬೇಕು ಎಂದರೆ ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗುವ ಅವಶ್ಯಕತೆ ಇದೆ. ಜನರ ಮನಸ್ಸನ್ನು ಲೋಕಸಭಾ ಚುನಾವಣೆಗಾಗಿ ಬೇರೆ ಕಡೆ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದರು.