ಬೆಂಗಳೂರು: ದಿಂಗಾಲೇಶ್ವರ ಸ್ವಾಮೀಜಿ ಚುನಾವಣ ಕಣಕ್ಕಿಳಿಯು ವುದಾಗಿ ಅಧಿಕೃತವಾಗಿ ಪ್ರಕಟಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಈಗಾಗಲೇ ಘೋಷಿಸಿರುವ ಹಾಗೂ ಬಿ-ಫಾರಂ ಕೂಡ ನೀಡಿರುವ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮರುಪರಿಶೀಲನೆ ನಡೆಸಲಾಗುತ್ತಿದ್ದು, ಸ್ವಾಮೀಜಿಯನ್ನೇ ಕಾಂಗ್ರೆಸ್ ಅಭ್ಯರ್ಥಿಯಾಗಿಸುವ ಗಂಭೀರ ಚಿಂತನೆಯೂ ನಡೆದಿದೆ.
ಈಗಾಗಲೇ ಸ್ವಾಮೀಜಿ ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಈ ಸಂಬಂಧ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಬಾಹ್ಯಬೆಂಬಲ ನೀಡುವುದು ಸೂಕ್ತವೇ ಅಥವಾ ಅಧಿಕೃತ ಅಭ್ಯರ್ಥಿ ಯನ್ನು ಹಿಂಪಡೆದು, ಸ್ವಾಮೀಜಿಯನ್ನು ಕಣಕ್ಕಿಳಿಸುವುದು ಸೂಕ್ತವೋ ಎಂಬುದರ ಬಗ್ಗೆ ಚರ್ಚೆಗಳು ನಡೆದಿವೆ.
ಇವೆರಡರಲ್ಲಿ ಯಾವುದು ನಡೆದರೂ ಧಾರವಾಡ ಲೋಕಸಭಾ ಚುನಾವಣೆ ಹೊಸ ತಿರುವು ಪಡೆದುಕೊಳ್ಳುವುದಂತೂ ಖಚಿತ.
ಧಾರವಾಡಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ ಅಸೂಟಿ ಅವರನ್ನು ಕಣಕ್ಕಿಳಿಸಿದ್ದು, ಪಕ್ಷದ ಬಿ-ಫಾರಂ ಕೂಡ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮುದಾಯಕ್ಕೆ ಸೇರಿದ ಅಸೂಟಿ ಅವರನ್ನು ಈ ಹಂತದಲ್ಲಿ ಬದಲಾವಣೆ ಮಾಡುವುದು ಎಷ್ಟು ಸೂಕ್ತ ಎಂಬ ಚರ್ಚೆಗಳು ನಡೆದಿವೆ. ಇದಕ್ಕಾಗಿ ಮುಖ್ಯಮಂತ್ರಿ, ರಾಜ್ಯ ಉಸ್ತುವಾರಿ ಸಹಿತ ವರಿಷ್ಠರವರೆಗೆ ಮತ್ತೊಂದು ಸುತ್ತಿನ ಕಸರತ್ತು ನಡೆಸಬೇಕಾಗುತ್ತದೆ.ಇದಕ್ಕೆ ಪೂರಕವಾಗಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಬಗ್ಗೆ ಅನೇಕರು ನನಗೆ ಸಲಹೆ ನೀಡಿದ್ದಾರೆ. ಈ ಕುರಿತ ಪ್ರಸ್ತಾವನೆಯೂ ಇದೆ. ಈ ಬಗ್ಗೆ ಸದ್ಯದಲ್ಲೇ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಲಿದ್ದೇನೆ ಎಂದು ಎಂದರು.
ಚರ್ಚಿಸಿ ತೀರ್ಮಾನ
ಕಾಂಗ್ರೆಸ್‌ನಿಂದ ಆಫರ್ ಬಂದರೆ, ಅದನ್ನು ಮತದಾರರ ಮುಂದಿಟ್ಟು, ಅಭಿಪ್ರಾಯ ಸಂಗ್ರಹಿಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.