ಬೆಳಗಾವಿ: ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಬಂದಿರುವುದರಿಂದ ಬೇರೆ ಶಾಸಕರ ಅವಶ್ಯಕತೆಯಿಲ್ಲ. ಅವರ ಪಕ್ಷದಲ್ಲಿ ಪತ್ರ ಸಮರ, ಶಾಸಕರ ಜಗಳ ಸೇರಿ ಏನೆನೋ ನಡೆಯುತ್ತಿದೆ. ತಮ್ಮ ಶಾಸಕರನ್ನು ಹೆದರಿಸಲು ಈ ರೀತಿ ಮಾಡುತ್ತಿರಬಹುದು. ನೀವು ಸುಮ್ಮನಿರದಿದ್ದರೆ ಬಿಜೆಪಿ, ಜೆಡಿಎಸ್ ಶಾಸಕರನ್ನು ಕರೆ ತರುತ್ತೇವೆಂದು ಹೆದರಿಸುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಶಾಸಕನ ಅವಶ್ಯಕತೆಯೂ ಇಲ್ಲ. ಅವರೊಳಗೆ ಅಸಮಾಧಾನ, ಪತ್ರ ಸಮರ ನಡೆದಿದೆ. ಕಳೆದ ಬಾರಿ ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ತಿಂಗಳಲ್ಲೇ ಆರಂಭವಾಗಿ ಒಂದು ವರ್ಷ ನಂತರ ಸ್ಫೋಟವಾಗಿತ್ತು. ಹೀಗಾಗಿ ಕಾಂಗ್ರೆಸ್ ಮುಖಂಡರು ಈಗಲೇ ಎಚ್ಚೆತ್ತುಕೊಂಡು ತಮ್ಮ ಶಾಸಕರನ್ನು ಹೆದರಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರನ್ನು ಕರೆತರುತ್ತೇವೆಂದು ಹೆದರಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:Ration Card: ಪಡಿತರ ಚೀಟಿ ತಿದ್ದುಪಡಿ ಅರ್ಜಿ ಸಲ್ಲಿಕೆಗೆ ಸೆ.01 ರಿಂದ ಹತ್ತು ದಿನದ ಅವಕಾಶ
ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಜನ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಅವರು ಒಳ್ಳೆಯ ರೀತಿ ಸರ್ಕಾರ ನಡೆಸಲಿ. ಅವರಿಗೆ ತೊಂದರೆ ಕೊಟ್ಟು ನಾವ್ಯಾಕೆ ಕೆಟ್ಟ ಹೆಸರು ತೆಗೆದುಕೊಳ್ಳಬೇಕು? ಕೊಟ್ಟ ಭರವಸೆಗಳನ್ನು ಅವರು ಈಡೇರಿಸುವ ಕೆಲಸ ಮಾಡಲಿ. ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುವಂತೆ ಜನ ನಮಗೆ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿ. ಐದು ವರ್ಷಕ್ಕೆ ಈ ಎಲ್ಲ ಗ್ಯಾರಂಟಿ ಯೋಜನೆಗಳಿಗೆ 3 ಲಕ್ಷ ಕೋಟಿ ಬೇಕು. ಒಂದು ಬಜೆಟ್ ಹಣ ಗ್ಯಾರಂಟಿಗಳಿಗೆ ಬಳಸಬೇಕಾಗುತ್ತದೆ. ಕಾಂಗ್ರೆಸ್ ನವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಬಿಜೆಪಿಯ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಆಪರೇಶನ್ ಹಸ್ತದ ಅವಶ್ಯಕತೆಯೇ ಇಲ್ಲ. ಸುಮ್ಮನೇ ಅವರ ಪಕ್ಷದ ಶಾಸಕರನ್ನು ಹೆದರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.