Advertisement

ಕಾಂಗ್ರೆಸ್‌ ಅಂಬೇಡ್ಕರ್‌ ವಿರೋಧಿ

12:22 PM Dec 07, 2017 | Team Udayavani |

ಬೆಂಗಳೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬದುಕಿದ್ದಾಗ ಮತ್ತು ಮೃತಪಟ್ಟ ನಂತರ ಅವರಿಗೆ ಅವಮಾನ ಮಾಡಿದ್ದು, ಅವರು ರಚಿಸಿದ ಸಂವಿಧಾನ ಧಿಕ್ಕರಿಸಿ ತುರ್ತು ಪರಿಸ್ಥಿತಿ ಹೇರಿದ್ದು ಬಿಟ್ಟರೆ ಅಂಬೇಡ್ಕರ್‌ ವಿಚಾರದಲ್ಲಿ ಕಾಂಗ್ರೆಸ್‌ ಮಾಡಿದ್ದಾದರೂ ಏನು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಪ್ರಶ್ನಿಸಿದ್ದಾರೆ.

Advertisement

ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಮಲ್ಲೇಶ್ವರದಲ್ಲಿನ ಪಕ್ಷದ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 61ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಜವಹರಲಾಲ್‌ ನೆಹರು ಕಾಲದಿಂದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರವರೆಗೂ ಅಂಬೇಡ್ಕರ್‌ ವಿರೋಧಿ ನೀತಿ ಕಾಂಗ್ರೆಸ್‌ ರಕ್ತದಲ್ಲಿ ಹರಿಯುತ್ತಲೇ ಇದೆ ಎಂದು ಆರೋಪಿಸಿದರು.

ತಾವು ಪ್ರತಿಪಾದಿಸಿದ ಮಹಿಳಾ ಸ್ವಾತಂತ್ರ ಮತ್ತು ಸಮಾನತೆಗೆ ಅವಕಾಶ ನೀಡಲಿಲ್ಲ ಎಂಬ ಕಾರಣದಿಂದ ಜವಹರಲಾಲ್‌ ನೆಹರೂ ಸಂಪುಟದಿಂದ ಡಾ.ಅಂಬೇಡ್ಕರ್‌ ಅವರು ಹೊರನಡೆದರು ಎಂಬ ಏಕೈಕ ಕಾರಣಕ್ಕೆ ಅಂಬೇಡ್ಕರ್‌ ಅವರು ಜೀವಂತ ಇದ್ದಾಗ ಮತ್ತು ಮೃತಪಟ್ಟ ಮೇಲೂ ಕಾಂಗ್ರೆಸ್‌ ಅವರನ್ನು ಅವಮಾನಿಸುತ್ತಲೇ ಬಂತು. ಸಂಸತ್‌ ಪ್ರವೇಶಿಸಲು ಅಡ್ಡಗಾಲು ಹಾಕಿತು.

ಮೃತಪಟ್ಟಾಗ ದೆಹಲಿಯಲ್ಲಿ ಅಂತ್ಯ ಸಂಸ್ಕಾರಕ್ಕೂ ಅವಕಾಶ ಮಾಡಿಕೊಡಲಿಲ್ಲ. ಇಂದಿರಾ ಗಾಂಧಿ ಅವರಿಗೆ ಭಾರತ ರತ್ನ ನೀಡಿದ ಕಾಂಗ್ರೆಸ್‌, ಅಂಬೇಡ್ಕರ್‌ ಅವರಿಗೆ ನೀಡದೆ ಅಗೌರವ ತೋರಿಸಿತು. ತುರ್ತು ಪರಿಸ್ಥಿತಿ ಹೇರುವ ಮೂಲಕ ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನೇ ಕಾಂಗ್ರೆಸ್‌ ಧಿಕ್ಕರಿಸಿತು ಎಂದು ಆರೋಪಿಸಿದರು.

ಅಂಬೇಡ್ಕರ್‌ ಬಗ್ಗೆ ಕಾಂಗ್ರೆಸ್‌ ತೋರುವ ಈ ಅಗೌರವ ಸಂಸ್ಕೃತಿ ಅಲ್ಲಿಗೇ ನಿಂತಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅದನ್ನು ಮುಂದುವರಿಸಿದ್ದಾರೆ. ಸಂವಿಧಾನ ದಿನದ ಅಂಗವಾಗಿ ನೀಡಿದ ಜಾಹೀರಾತಿನಲ್ಲಿ ಅಂಬೇಡ್ಕರ್‌ ಭಾವಚಿತ್ರ ಹಾಕದೆ ತಮ್ಮ ಭಾವಚಿತ್ರ ಮಾತ್ರ ಹಾಕಿಸಿಕೊಂಡ ಸಿಎಂ, ಸಂವಿಧಾನ ಶಿಲ್ಪಗೆ ಅವಮಾನ ಮಾಡಿದ್ದಾರೆ. ಈ ವಿಚಾರದಲ್ಲಿ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

Advertisement

ಡಾ. ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಇಷ್ಟೆಲ್ಲಾ ಅವಮಾನ ಮಾಡಿರುವ, ಅಗೌರವ ತೋರಿರುವ ಕಾಂಗ್ರೆಸ್‌, ಈಗ ಬಿಜೆಪಿ ಪಕ್ಷಕ್ಕೆ “ದಲಿತ ವಿರೋಧಿ’ ಎಂಬ ಪಟ್ಟ ಕಟ್ಟುತ್ತಿದೆ. ಆದರೆ, ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲು ಕಾರಣರಾದವರು ಇದೇ ಬಿಜೆಪಿ ನಾಯಕರಾಗಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಆಡ್ವಾಣಿ ಅವರು. ಡಾ.ಅಂಬೇಡ್ಕರ್‌ ಅವರು ರಾಜ್ಯಸಭೆ ಪ್ರವೇಶಿಸಲು ಸಾಧ್ಯವಾದದ್ದು ಜನಸಂಘದ ಸಂಸ್ಥಾಪಕ ಶ್ಯಾಮ್‌ಪ್ರಸಾದ್‌ ಮುಖರ್ಜಿ ಅವರ ಒತ್ತಾಸೆಯಿಂದ.

ಡಾ.ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ ಐದು ಪ್ರಮುಖ ಸ್ಥಳಗಳನ್ನು ಪವಿತ್ರ ಸ್ಥಳಗಳನ್ನಾಗಿ ಅಭಿವೃದ್ಧಿ ಪಡಿಸಿರುವುದು, ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಎಂಬುದನ್ನು ಕಾಂಗ್ರೆಸ್‌ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು. ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್‌.ವೀರಯ್ಯ, ವಿಧಾನ ಪರಿಷತ್‌ ಸದಸ್ಯ ರಾಮಚಂದ್ರಗೌಡ ಮತ್ತಿತರರು ಇದ್ದರು.

ಮೀಸಲಾತಿ ಲಾಭ ಇತರರಿಗೆ ಬಿಟ್ಟುಕೊಡಿ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಮೂಲಕ ಲಭ್ಯವಾಗಿರುವ ರಾಜಕೀಯ ಮೀಸಲಾತಿಯ ಲಾಭ ಪಡೆದು ಜನಪ್ರತಿನಿಧಿಗಳಾದವರು ನಂತರದಲ್ಲಿ ಅದರ ಲಾಭವನ್ನು ಬೇರೆ ದಲಿತರಿಗೆ ಬಿಟ್ಟುಕೊಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದ್ದಾರೆ.

“ನನ್ನ ಈ ಮಾತಿಗೆ ಕೆಲವರು ಒಪ್ಪದಿರಬಹುದು ಅಥವಾ ವಿವಾದವಾಗಿ ಮಾಡಬಹುದು. ಆದರೆ, ಮೀಸಲಾತಿ ಲಾಭ ಪಡೆದವರು ಬಳಿಕ ಅದನ್ನು ಬೇರೆಯವರಿಗೆ ಬಿಟ್ಟುಕೊಟ್ಟರೆ ಮಾತ್ರ ಅದರ ಲಾಭ ಎಲ್ಲ ದಲಿತರಿಗೂ ಸಿಗುತ್ತದೆ. ಇಲ್ಲದಿದ್ದರೆ ಕೆಲವೇ ಕೆಲವರು ಮತ್ತೆ ಮತ್ತೆ ಅನುಕೂಲ ಪಡೆಯುತ್ತಾರೆ.

ಈ ನಿಟ್ಟನಲ್ಲಿ ಒಬ್ಬ ಸಂಸದ ಅಥವಾ ಶಾಸಕ ಮೀಸಲಾತಿ ಆಧಾರದ ಮೇಲೆ ಮೂರು ಅಥವಾ ನಾಲ್ಕು ಬಾರಿ ಮಾತ್ರ ಸ್ಪರ್ಧಿಸಿ ನಂತರದಲ್ಲಿ ಬೇಕಾದರೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಬೇಕು. ಮೀಸಲು ಸ್ಥಾನವನ್ನು ಇತರೆ ದಲಿತರಿಗೆ ಬಿಟ್ಟುಕೊಡಬೇಕು. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ,’ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next