ಚಿಕ್ಕೋಡಿ: ಲೋಕಸಭೆ ಚುನಾವಣೆ ಮುಕ್ತಾಯವಾಗಿದೆ. ತಂತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆಂಬ ಬಿಸಿ ಬಿಸಿ ಚರ್ಚೆ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದ ಗಲ್ಲಿ ಗಲ್ಲಿಯಲ್ಲಿ ಕೇಳಿ ಬರುತ್ತಿದೆ. ಚಿಕ್ಕೋಡಿ-ಸದಲಗಾ ಮೊದಲಿನಿಂದಲೂ ಕಾಂಗ್ರೆಸ್‌ಗೆ ಮುನ್ನಡೆ ತಂದು ಕೊಡುವ ಕ್ಷೇತ್ರ. ರಾಜಕೀಯ ಶಕ್ತಿ ಕೇಂದ್ರವಾಗಿ ಗುರ್ತಿಸಿಕೊಂಡ ಈ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಮತದಾನವಾಗಿದ್ದರಿಂದ ತಾವೇ ಮುನ್ನಡೆ ಸಾಧಿಸುತ್ತೇವೆಂದು ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ತಮ್ಮದೇ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ.
ಬಸ್ ಪ್ರಯಾಣ ಮಾಡುವಾಗ, ಚಹಾ ಅಂಗಡಿ, ಮದ್ಯದ ಅಂಗಡಿ, ಆಟದ ಮೈದಾನ ಮುಂತಾದ ಕಡೆಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂಬುದೇ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್ ಮುನ್ನಡೆ ಸಾಧಿಸುತ್ತದೆ ಎನ್ನುವುದು ಕೆಲವರ ವಾದ. ಈ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ 80.79 ರಷ್ಟು ಆಗಿದ್ದರಿಂದ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದೆ. ಬಿಜೆಪಿ ಮುನ್ನಡೆ ಪಡೆಯುತ್ತದೆ. ಇಲ್ಲವಾದರೆ ಕಾಂಗ್ರೆಸ್‌ನ ಸಮಕ್ಕಾದರೂ ಮತಗಳಿಸುತ್ತದೆ ಎನ್ನುವುದು ಬಿಜೆಪಿ ಕಾರ್ಯಕರ್ತರ ಮಾತಾಗಿದೆ.
ಅಭಿವೃದ್ಧಿಗೆ ಮೊದಲ ಆದ್ಯತೆ: ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಸರ್ಕಾರಿ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ಅಭಿವೃದ್ಧಿಗೆ ಸಾಕಷ್ಟು ಮಹತ್ವ ನೀಡಿ ಇಡೀ ಕ್ಷೇತ್ರದಲ್ಲಿ ನೂರಾರು ಕೋಟಿಯಷ್ಟು ಅನುದಾನ ತಂದು ನೀರಾವರಿ, ಕೆರೆಗಳಿಗೆ ನೀರು ತುಂಬಿಸುವುದು, ಸಮುದಾಯ ಭವನ, ರೈತರ ವೈಯಕ್ತಿಕ ಏತ ನೀರಾವರಿ ಯೋಜನೆ ಅನುಷ್ಠಾನ, ಕೃಷ್ಣಾ ನದಿಗೆ ಸೇತುವೆ ಕಂ ಬಾಂದಾರ ನಿರ್ಮಾಣ, ಗುಣಮಟ್ಟದ ರಸ್ತೆ, ಪೇವರ್ ಹೀಗೆ ಹತ್ತು ಹಲವಾರು ರೀತಿಯ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಮತ್ತು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲೆ ಹಾಗೂ ಪ್ರಕಾಶ ಹುಕ್ಕೇರಿ ವೈಯಕ್ತಿಕ ವರ್ಚಸ್ಸು ಇರುವ ಕಾರಣ ಮತಗಳಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತದೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.
ಯುವ ಪಡೆ ಮೋದಿ ಕಡೆಗೆ: ಪ್ರಧಾನಿ ನರೇಂದ್ರ ಮೋದಿ ಅಲೆಗೆ ಯುವಕರು ಆಕರ್ಷಿತರಾಗಿದ್ದಾರೆ. ಪುಲ್ವಾಮಾ, ಬಾಲಾಕೋಟ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ವಿಷಯಗಳು ಯುವಕರು ಮೋದಿಗೆ ಹೆಚ್ಚಿನ ಬೆಂಬಲ ನೀಡಲು ಕಾರಣವಾಗಿವೆ.. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರ ಪಡೆ ಇರುವುದರಿಂದ 18 ರಿಂದ 35 ವರ್ಷ ತುಂಬಿದ ಯುವಕರ ಪಡೆ ದೇಶದ ಸುರಕ್ಷತೆಗಾಗಿ ನರೇಂದ್ರ ಮೋದಿಯೇ ಅತ್ಯುತ್ತಮ ಆಯ್ಕೆ ಎಂದು ಅವರೆಲ್ಲ ಬಿಜೆಪಿ ಬೆಂಬಲಿಸಿದ್ದಾರೆ ಎನ್ನುವುದು ಬಿಜೆಪಿ ಕಾರ್ಯಕರ್ತರ ವಿಶ್ವಾಸ.
ಸ್ಥಳೀಯ ಯುವಕರಿಗೆ ಉದ್ಯೋಗ: ಲೋಕಸಭೆ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ತಮ್ಮ ಸಂಸ್ಥೆಯಾದ ಜೊಲ್ಲೆ ಉದ್ಯೋಗ ಸಮೂಹದ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸಿಗುವುದು ಸರ್ವೇ ಸಾಮಾನ್ಯವಾಗಿದೆ. ಕೇಂದ್ರದ ನರೇಂದ್ರ ಮೋದಿ ಅಲೆ ಮತ್ತು ಅಣ್ಣಾಸಾಹೇಬ ಜೊಲ್ಲೆ ಮಾಡಿರುವ ಸಾಮಾಜಿಕ ಕಾರ್ಯಗಳಿಂದ ಬಿಜೆಪಿಗೆ ಮುನ್ನಡೆ ಬರಬಹುದು ಎಂಬ ಬಿಜೆಪಿ ಲೆಕ್ಕಾಚಾರವಾಗಿದೆ.
ಕಾಂಗ್ರೆಸ್-ಬಿಜೆಪಿ ಇಬ್ಬರೂ ಅಭ್ಯರ್ಥಿಗಳು ಆರ್ಥಿಕ, ಸಾಮಾಜಿಕ ಮತ್ತು ಜನ ಬೆಂಬಲದಿಂದ ಸದೃಢವಾಗಿದ್ದಾರೆ, ಕ್ಷೇತ್ರದಲ್ಲಿ ಇಬ್ಬರೂ ಒಂದೊಂದು ಕ್ಷೇತ್ರದಲ್ಲಿ ಬಲಾಡ್ಯರಾಗಿದ್ದಾರೆ. ಯಾರು ಮುನ್ನಡೆ ಸಾಧಿಸುತ್ತಾರೆ ಎಂದು ನಿಖರವಾಗಿ ಹೇಳುವುದು ಕಷ್ಟಕರವಾಗುತ್ತದೆ. ಯಾರೇ ಮುನ್ನಡೆ ಸಾಧಿಸಿದ್ದರೂ ಅದು ಕಡಿಮೆ ಮತಗಳ ಅಂತರ ಎನ್ನುವುದು ಪ್ರಜ್ಞಾವಂತರ ವಾದವಾಗಿದೆ.
•ಮಹಾದೇವ ಪೂಜೇರಿ