Advertisement

ಸುಧಾಕರ್‌ಗೆ ಕಾಂಗ್ರೆಸ್‌ ಬಾಗಿಲು ಬಂದ್‌

09:36 PM Jul 24, 2019 | Lakshmi GovindaRaj |

ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ನ 14 ತಿಂಗಳ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಎರಡೂ ಪಕ್ಷಗಳ ಅತೃಪ್ತ ಶಾಸಕರ ಮುಂದಿನ ರಾಜಕೀಯ ನಡೆ ಸಾಕಷ್ಟು ನಿಗೂಢವಾಗಿದ್ದು, ಸರ್ಕಾರ ಬೀಳಿಸಿದ ಅಪವಾದಕ್ಕೆ ಗುರಿಯಾಗಿರುವ ಅತೃಪ್ತ ಶಾಸಕರನ್ನು ಮತ್ತೆ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲವೆಂದು ಉಭಯ ಪಕ್ಷಗಳ ನಾಯಕರು ಶಪಥ ಮಾಡಿದ್ದಾರೆ. ಅಲ್ಲದೇ ಅವರನ್ನು ಅನರ್ಹಗೊಳಿಸುವ ತಂತ್ರಕ್ಕೆ ಕಾಂಗ್ರೆಸ್‌ ಹಾಗೂ ದಳಪತಿಗಳು ಮುಂದಾಗಿದ್ದಾರೆ. ಒಂದು ವೇಳೆ ಶಾಸಕರ ರಾಜೀನಾಮೆ ಅಂಗೀಕಾರ ಆದರೆ ತೆರವಾಗುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತದೆ. ಅನರ್ಹರಾದರೆ ಶಾಸಕರ ರಾಜಕೀಯ ಸ್ಥಿತಿ ತ್ರಿಶಂಕು ಸ್ಥಿತಿ ತಲುಪುತ್ತದೆ. ಹೀಗಾಗಿ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡವರ ಪೈಕಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಕೂಡ ಪ್ರಮುಖರು. ಹೀಗಾಗಿ ಕ್ಷೇತ್ರದಲ್ಲಿ ಮುಂದಾಗುವ ರಾಜಕೀಯ ಪರಿಸ್ಥಿತಿಗಳ ಚಿತ್ರಣ ಕುರಿತು “ಉದಯವಾಣಿ’ಯ ವಿಶ್ಲೇಷಣೆ ವರದಿ.

Advertisement

ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ಗುರಿಯಾದ ಅತೃಪ್ತ ಶಾಸಕರ ಪೈಕಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಪ್ರಮುಖರು. ಸದ್ಯ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುಧಾಕರ್‌ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಒಂದು ವೇಳೆ ರಾಜೀನಾಮೆ ಅಂಗೀಕಾರವಾದರೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಾ? ನಡೆದರೆ ಯಾರೆಲ್ಲಾ ಯಾವ್ಯಾವ ಪಕ್ಷದಿಂದ ಅಭ್ಯರ್ಥಿಗಳಾಗುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರ ಈಗಾಗಲೇ ಬಿರುಸಿನಿಂದ ಶುರುವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯ ಕ್ಷೇತ್ರ ಬಳಿಕ ರೋಚಕ: ಹೇಳಿ ಕೇಳಿ ಚಿಕ್ಕಬಳ್ಳಾಪುರ ಒಂದು ಕಾಲಕ್ಕೆ ಮೀಸಲು ವಿಧಾನಸಭಾ ಕ್ಷೇತ್ರ. ಕಳೆದ 2008ರ ವಿಧಾನಸಭಾ ಚುನಾವಣೆಯಿಂದ ಸಾಮಾನ್ಯ ಕ್ಷೇತ್ರವಾದ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರದ ರಾಜಕಾರಣಕ್ಕೆ ಖದರ್‌ ಬಂದಿದೆ. ಅದರಲ್ಲೂ ಉದ್ಯಮಿಗಳು, ರಿಯಲ್‌ ಎಸ್ಟೇಟ್‌ ಕುಳಗಳು, ಹೋಟೆಲ್‌, ಲಿಕ್ಕರ್‌ ಧಣಿಗಳು ಜಿಲ್ಲೆಯ ರಾಜಕಾರಣಕ್ಕೆ ಪ್ರವೇಶಿಸಿದ ಬಳಿಕ ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಾರ್ವತ್ರಿಕ ಚುನಾವಣೆಗಳು ಸಾಕಷ್ಟು ರೋಚಕತೆ ಪಡೆದುಕೊಳ್ಳುತ್ತಿವೆ. ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್‌ಗೆ ಭದ್ರಕೋಟೆ. ದಳ ಬಿಟ್ಟರೆ ಹೆಚ್ಚು ಗೆದ್ದು ಬೀಗಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮಾತ್ರ. ಆದರೆ ಶಾಸಕ ಸುಧಾಕರ್‌ ರಾಜೀನಾಮೆಯಿಂದ ಉಪ ಚುನಾವಣೆ ಎದುರಾಗುವ ಸ್ಥಿತಿ ಕ್ಷೇತ್ರಕ್ಕೆ ಆವರಿಸಿದೆ.

ಸತತ ಎರಡು ಬಾರಿ ಗೆಲುವು: ಕಳೆದ 2013ರ ರ ಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಕಾಂಗ್ರೆಸ್‌ ಬಿ.ಪಾರಂ ಪಡೆದು ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ 15 ಸಾವಿರ ಮತಗಳ ಅಂತರದಿಂದ ವಿಧಾನಸಭೆ ಪ್ರವೇಶಿಸಿದವರು ಶಾಸಕ ಸುಧಾಕರ್‌. ತಮ್ಮ ಸಮಾಜ ಸೇವಾ ಕಾರ್ಯಗಳ ಮೂಲಕ ಜನಪ್ರಿಯತೆ ಪಡೆದುಕೊಂಡು 2018ರ ಚುನಾವಣೆಯಲ್ಲೂ ಸಹ ಮೊದಲ ಬಾರಿ ಪಡೆದ ಮತಗಳ ಎರಡು ಪಟ್ಟು ಅಂತರದಿಂದ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಗೆಲುವು ದಾಖಲಿಸಿದರು.

ಸಚಿವ ಸ್ಥಾನಕ್ಕೆ ಕಸರತ್ತು: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣದ ನಂತರ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೊಂಡಿತು. ಆದರೆ ಆರಂಭದಿಂದಲೂ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದು ಸೋತಿದ್ದ ಸುಧಾಕರ್‌ರನ್ನು ತೃಪ್ತಿಪಡಿಸಲೆಂದೇ ಇತ್ತೀಚೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಕ ಮಾಡಲಾಗಿತ್ತು. ಆದರೆ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿಯಾಗಿ ಎದ್ದ ಕಾಂಗ್ರೆಸ್‌, ಜೆಡಿಎಸ್‌ ಅತೃಪ್ತ ಶಾಸಕರ ರಾಜೀನಾಮೆ ಪರ್ವದಿಂದ ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ, ಸೃಷ್ಟಿಯಾಯಿತು.

Advertisement

ಅತೃಪ್ತರ ಸಾಲಿಗೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ ಸಹ ಕೈ ಜೋಡಿಸಿ ರಾಜಿನಾಮೆ ಸಲ್ಲಿಸಿ ಸರ್ಕಾರದ ಪತನಕ್ಕೆ ಸಾಕ್ಷಿಯಾಗಿರುವುದು ಈಗ ಇತಿಹಾಸವಾದರೂ ಕ್ಷೇತ್ರದ ಮುಂದಿನ ರಾಜಕೀಯ ವಲಯದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದರ ಬಗ್ಗೆ ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಶಾಸಕ ಡಾ.ಕೆ.ಸುಧಾಕರ್‌, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅದು ಅಂಗೀಕಾರವಾಗುತ್ತಾ? ಇಲ್ಲ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಹಲವು ತಿರುವು ನಿಶ್ಚಿತ: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಅತೃಪ್ತರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿರುವುದರಿಂದ ಕ್ಷೇತ್ರದ ರಾಜಕೀಯ ಪರಿಸ್ಥಿತಿ ಹಲವು ತಿರುವುಗಳು ಪಡೆದುಕೊಳ್ಳುವ ಸಾಧ್ಯತೆ ನಿಶ್ಚಿತ. ಶಾಸಕರ ರಾಜೀನಾಮೆ ಅಂಗೀಕಾರವಾದರೂ ಅಥವಾ ಅನರ್ಹಗೊಂಡರೂ ಮತ್ತೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು ಖಚಿತವಾಗಿರುವುದರಿಂದ ಚಿಕ್ಕಬಳ್ಳಾಪುರ ಕ್ಷೇತ್ರ ತನ್ನ ಇತಿಹಾಸದಲ್ಲಿಯೇ ಉಪ ಚುನಾವಣೆಗೆ ಸಾಕ್ಷಿಯಾಗಲಿದೆ.

ಗರಿಗೆದರಿಗೆ ರಾಜಕೀಯ ಚಟುವಟಿಕೆ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ರಾಜಕೀಯ ಚಟುವಟಿಕೆಗಳು ಸಾಕಷ್ಟು ಗರಿಗೆದರಿವೆ. ಶಾಸಕರ ರಾಜೀನಾಮೆ ಅಂಗೀಕಾರವಾದರೆ ಮತ್ತೆ ಅಖಾಡಕ್ಕೆ ಇಳಿಯಲು ಪಕ್ಷೇತರರು ಸೇರಿದಂತೆ ಕಾಂಗ್ರೆಸ್‌, ದಳ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ. 2018ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸುಧಾಕರ್‌, ಜೆಡಿಎಸ್‌ನಿಂದ ಕೆ.ಪಿ.ಬಚ್ಚೇಗೌಡ, ಬಿಜೆಪಿಯಿಂದ ಡಾ.ಜಿ.ವಿ.ಮಂಜುನಾಥ ಹಾಗೂ ಬಂಡಾಯ ಕಾಂಗ್ರೆಸ್‌ನಿಂದ ಕೆ.ವಿ.ನವೀನ್‌ ಕಿರಣ್‌ ಪ್ರಮುಖ ಸ್ಪರ್ಧಿಗಳಾಗಿದ್ದರು.

ಆದರೆ ಈಗ ಉಪ ಚುನಾವಣೆ ಎದುರಾದರೆ ಮತ್ತೆ ದಳದಿಂದ ಬಚ್ಚೇಗೌಡ ಸ್ಪರ್ಧಿಸುವುದು ಖಚಿತವಾದರೂ ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ನವೀನ್‌ ಕಿರಣ್‌ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅನುಮಾನವಾಗಿದೆ. ಆದರೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟು ನವೀನ್‌ ಕಿರಣ್‌ರನ್ನು ಕಣಕ್ಕೆ ಇಳಿಸಿದರೂ ಆಶ್ಚರ್ಯ ಪಡಬೇಕಿದೆ. ಇನ್ನೂ ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಡಾ.ಜಿ.ವಿ.ಮಂಜುನಾಥ, ಒಂದು ವೇಳೆ ಸುಧಾಕರ್‌ ಬಿಜೆಪಿಯಿಂದ ಸ್ಪರ್ಧಿಸಿದರೆ ಬಿಟ್ಟು ಕೊಡಬೇಕಾಗುತ್ತದೆ. ಕಳೆದ ಬಾರಿ ಸ್ಪರ್ಧಿಸಲು ತಯಾರಿ ನಡೆಸಿ ಕೊನೆ ಗಳಿಗೆಯಲ್ಲಿ ಸುಧಾಕರ್‌ ಮನವೊಲಿಕೆಯಿಂದ ದೂರ ಉಳಿದಿದ್ದ ಜಿಪಂ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ಯಾರು ತಳ್ಳಿ ಹಾಕಲಿಕ್ಕೆ ಆಗಲ್ಲ.

ಅನರ್ಹಗೊಂಡರೆ ಪತ್ನಿ ಸ್ಪರ್ಧೆ ಸಾಧ್ಯತೆ: ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಪಕ್ಷದ ದೂರಿನ ಹಿನ್ನೆಲೆಯಲ್ಲಿ ಶಾಸಕ ಸುಧಾಕರ್‌ ಶಾಸಕ ಸ್ಥಾನದಿಂದ ಅನರ್ಹಗೊಂಡರೆ ಪತ್ನಿ ಸ್ವಪ್ನ ಅವರನ್ನು ಕ್ಷೇತ್ರದಲ್ಲಿ ಕಣಕ್ಕೆ ಇಳಿಸುವ ಚಿಂತನೆಯನ್ನು ಶಾಸಕ ಡಾ.ಕೆ.ಸುಧಾಕರ್‌ ನಡೆಸಿದ್ದಾರೆಂಬ ವಿಷಯ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಬಿಜೆಪಿ ಸರ್ಕಾರ ರಚನೆಗೆ ಅನುಕೂಲವಾಗುವಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸುಧಾಕರ್‌ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ತಮ್ಮ ಆಪ್ತ ವಲಯದಲ್ಲಿ ಚರ್ಚಿಸಿದ್ದಾರೆಂಬ ಸಂಗತಿ ತಿಳಿದು ಬಂದಿದೆ.

ಬಿಜೆಪಿಗೆ ಹೋದರೆ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗ ಕೈ ಕೊಡಬಹುದೆಂಬ ಲೆಕ್ಕಾಚಾರದಲ್ಲಿ ಸುಧಾಕರ್‌ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆಗಳು ಇವೆ. ಒಂದು ವೇಳೆ ಅನರ್ಹಗೊಂಡರೆ ಪತ್ನಿಯನ್ನು ಉಪ ಚುನಾವಣೆಯಲ್ಲಿ ಕಣಕ್ಕೆ ಇಳಿಸುವುದು ಬಹುತೇಕ ಖಚಿತ. ಒಟ್ಟಿನಲ್ಲಿ ಸುಧಾಕರ್‌ ಮುಂದಿನ ರಾಜಕೀಯ ನಡೆ ಇಂದಿಗೂ ನಿಗೂಢವಾಗಿದ್ದು, ಸ್ಪೀಕರ್‌ ನಿರ್ಧಾರದ ಮೇಲೆ ಅವರ ರಾಜಕೀಯ ಭವಿಷ್ಯ ಅಡಗಿರುವುದಂತೂ ಸ್ಪಷ್ಟ.

ನಾನು ಆರ್‌ಎಸ್‌ಎಸ್‌ನಿಂದ ಬೆಳೆದು ಬಂದವನು, ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ನಿಜ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುಧಾಕರ್‌, ಬಿಜೆಪಿಗೆ ಬಂದರೆ ಸ್ವಾಗತ. ಪಕ್ಷ ಅವರಿಗೆ ಟಿಕೆಟ್‌ ಕೊಟ್ಟರೆ ಅವರ ಪರವಾಗಿ ಕೆಲಸ ಮಾಡುತ್ತೇವೆ. ಅವರು ಸ್ವತಂತ್ರವಾಗಿ ಸ್ಪರ್ಧಿಸಿದರೆ ಪಕ್ಷದಿಂದ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ. ಅಂತಿಮ ನಿರ್ಧಾರ ಪಕ್ಷದ ನಾಯಕರಿಗೆ ಬಿಟ್ಟದ್ದು.
-ಡಾ.ಜಿ.ವಿ.ಮಂಜುನಾಥ, ಬಿಜೆಪಿ ಪರಾಜಿತ ಅಭ್ಯರ್ಥಿ

ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುತ್ತಿರುವ ಬಿಜೆಪಿಗೆ ಉಪ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸುತ್ತೇವೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕಿಳಿಸುತ್ತೇವೆ. ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕೆ ದ್ರೋಹ ಬಗೆದಿರುವ ಸುಧಾಕರ್‌ಗೆ ಗೆಲುವು ಆಗದಂತೆ ನೋಡಿಕೊಂಡು ಕಾಂಗ್ರೆಸ್‌ ಪಕ್ಷದ ಶಕ್ತಿಯನ್ನು ತೋರಿಸುತ್ತೇವೆ.
-ಎನ್‌.ಎಚ್‌.ಶಿವಶಂಕರರೆಡ್ಡಿ, ಶಾಸಕರು, ಗೌರಿಬಿದನೂರು

ಸದ್ಯಕ್ಕೆ ಅತೃಪ್ತ ಶಾಸಕರ ಅನರ್ಹ ಪ್ರಕರಣ ಸ್ಪೀಕರ್‌ ಅಂಗಳದಲ್ಲಿದೆ. ರಾಜೀನಾಮೆ ಅಂಗೀಕಾರವಾದರೆ ಮಾತ್ರ ಉಪ ಚುನಾವಣೆ ಎದುರಾಗಲಿದೆ. ಪಕ್ಷದಿಂದ ವಜಾ ಆದರೆ ಶಾಸಕ ಸ್ಥಾನ ಉಳಿಯಲಿದೆ. ಸ್ಪೀಕರ್‌ ನಿರ್ಧಾರಕ್ಕಾಗಿ ಕಾದು ನೋಡುತ್ತೇವೆ. ಉಪ ಚುನಾವಣೆ ಎದುರಾದರೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ.
-ಕೆ.ಪಿ.ಬಚ್ಚೇಗೌಡ, ಜೆಡಿಎಸ್‌ನ ಮಾಜಿ ಶಾಸಕರು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next