ಚೆನ್ನೈ: ಬಹುಭಾಷಾ ನಟಿ, ತಮಿಳುನಾಡಿನ “ಸ್ಟಾರ್’ ರಾಜಕಾರಣಿ ಖುಷ್ಬೂ ಸುಂದರ್ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಚರ್ಚೆಯಲ್ಲಿದ್ದಾರೆ. ಡಿಎಂಕೆ ಯಿಂದ ಕಾಂಗ್ರೆಸ್ ಮನೆ ಸೇರಿದ್ದ ಖುಷ್ಬೂ, ಸೈದ್ಧಾಂತಿಕ ಚಿಂತನೆಗಳೊಂದಿಗೆ ದಿಢೀರನೆ ರಾಜಕೀಯ ಪಥ ಬದಲಿ ಸಿದ್ದಾರೆ. ಖುಷ್ಬೂ ತಮ್ಮ ನಿಲುವಿನ ಕುರಿತು “ಇಂಡಿಯನ್ ಎಕ್ಸ್‌ಪ್ರೆಸ್’ ಜತೆಗಿನ ಸಂದರ್ಶನದಲ್ಲಿ ಕೆಲವು ಅನಿಸಿಕೆ ಹಂಚಿಕೊಂಡಿದ್ದಾರೆ…
- ಗಾಂಧಿ ಕುಟುಂಬ ತಾವೇ ನಿರ್ಮಿಸಿಕೊಂಡ ಗುಳ್ಳೆಯಿಂದ ಹೊರಬರಬೇಕು. ಎಲ್ಲಿಯತನಕ ಆ ಗುಳ್ಳೆ ಒಡೆಯುವುದಿಲ್ಲವೋ, ಅಲ್ಲಿಯವರೆಗೆ ಅವರು ಸೋಲುತ್ತಲೇ ಇರುತ್ತಾರೆ.
- ದೇಶ ಆಳುವ ಆಲೋಚನೆ ಬಿಟ್ಟು, ಅವರು ಸದಾ ವಿಪಕ್ಷ ಸ್ಥಾನದಲ್ಲಿರುವುದಾಗಿ ಹುಸಿ ನಂಬಿಕೆಯಿಂದ ಬದುಕುತ್ತಿದ್ದಾರೆ. ಆದರೆ, ಕಾಲಕ್ರಮೇಣ ಕಾಂಗ್ರೆಸ್‌ಗೆ ವಿಪಕ್ಷದಲ್ಲೂ ಸ್ಥಾನ ಸಿಗುವುದು ಅನುಮಾನ.
- ಕಾಂಗ್ರೆಸ್‌ನ ಭಾಗವಾಗಿದ್ದವರು, ಪಕ್ಷ ನಿಷ್ಠರು ಏಕೆ ಇಂದು ಪಕ್ಷ ತೊರೆಯುತ್ತಿದ್ದಾರೆ? ಈ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಲೇ ಇಲ್ಲ. ಪಕ್ಷದ ದೋಷ ಗಳನ್ನು ಕಾಂಗ್ರೆಸ್ ಸಂತೋಷದಿಂದ ಅವಗಣಿಸುತ್ತಿದೆ.
- ನಾನು ಬಿಜೆಪಿಗೆ ಹೋದ್ರೆ ನಿಮ್ಮ ಕಣ್ಣಿಗೆ ಅವಕಾಶವಾದಿ. ಆದರೆ, ಕಾಂಗ್ರೆಸ್‌ನ ಭಾಗವೇ ಆಗಿರುವ 23 ನಾಯಕರು ಪಕ್ಷದ ನಾಯಕತ್ವ ವಿರುದ್ಧ ಭಿನ್ನಸ್ವರ ಎತ್ತಿದ್ದಾಗ ನೀವೇಕೆ ಅವರನ್ನು ಏನೂ ಕೇಳಿಲ್ಲ?
- ಕಾಂಗ್ರೆಸ್ಸನ್ನು ಕಟ್ಟಿದ್ದು ಜನತೆಗಾಗಿ. ಅದು ಖಾಸಗಿ ಆಸ್ತಿಯಲ್ಲ. ದೇಶಕ್ಕಾಗಿ ಸೇವೆಗೈದವರು ಆ ಪಕ್ಷ ಕಟ್ಟಿದರು. ಈ ಮೂಲ ಸತ್ಯವನ್ನು ಪಕ್ಷ ಮರೆತಿದೆ.
- ಬಿಜೆಪಿ ವಿರುದ್ಧ ನಾನು ಈ ಹಿಂದೆ ಮಾತಾಡಿದ್ದೆ ನಿಜ. ಈಗ ಅದು ಪ್ರಸ್ತುತವಲ್ಲ. ನಾನು ಎಂಥ ವ್ಯಕ್ತಿ, ಯಾವ ರೀತಿಯ ಆಲೋಚನೆ ಹೊಂದಿದ್ದೇನೆ ಎಂದು ಬಿಜೆಪಿಗೆ ಗೊತ್ತು. ಪಕ್ಷ ಕೊಡುವ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸುವೆನು.