Advertisement

ಕಮಲ ಪಡೆಯ ನಿದ್ದೆಗೆಡಿಸಿದ ದೋಸ್ತಿ

02:17 AM Mar 15, 2019 | |

ವಿಜಯಪುರ: ಪರಿಶಿಷ್ಟ ಜಾತಿ ಮೀಸಲು ವಿಜಯಪುರ ಕ್ಷೇತ್ರಕ್ಕೆ ಕದನ ಕಲಿಗಳು ಯಾರು ಎಂಬ ಕುತೂಹಲ ಮೂಡಿಸಿದೆ. ಕಳೆದ ನಾಲ್ಕು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿರುವ ಬಿಜೆಪಿ, ಕ್ಷೇತ್ರದಲ್ಲಿ ತನ್ನ ನೆಲೆ ಭದ್ರ ಎಂದೇ ಭಾವಿಸಿದೆ. ಇದರ ಹೊರತಾಗಿಯೂ ಜಿಲ್ಲೆಯಲ್ಲಿ ಸದ್ಯದ ಅಧಿಕಾರದ ಬಲಾಬಲವನ್ನು ನೋಡುವುದಾರೆ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ 3 ಶಾಸಕರನ್ನು ಹೊಂದಿದ್ದರೆ, ಜೆಡಿಎಸ್‌ 2 ಸ್ಥಾನ ಪಡೆದಿದೆ. ಕಾರಣ ದೋಸ್ತಿ ಬಲ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಬಿಜೆಪಿ ಪಾಳಯದಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸ್ಪರ್ಧೆ ಖಚಿತವಾಗಿದೆ. ಇತ್ತ ಕಾಂಗ್ರೆಸ್‌-ಜೆಡಿಎಸ್‌ ಚುನಾವಣಾ ಪೂರ್ವ ಹೊಂದಾಣಿಕೆಯಿಂದ ಈ ಕ್ಷೇತ್ರ ಜೆಡಿಎಸ್‌ ಪಾಲಾಗಿದ್ದು, ಯಾರು ಅಂತಿಮ ಕಣ ಕಲಿಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

Advertisement

ಮೂಲಗಳ ಪ್ರಕಾರ ಜೆಡಿಎಸ್‌ ವರಿಷ್ಠರ ಮೇಲೆ ಆಪರೇಷನ್‌ ಕಮಲದ ಗುಮ್ಮನನ್ನು ಹರಿಬಿಟ್ಟ ನಾಗಠಾಣಾ ಶಾಸಕ, ಸಿಎಂ ಸಂಸದೀಯ ಕಾರ್ಯದರ್ಶಿ ದೇವಾನಂದ ಚವ್ಹಾಣ ವಿಜಯಪುರ ಕ್ಷೇತ್ರವನ್ನು ಜೆಡಿಎಸ್‌ಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅನ್ಯರು ಟಿಕೆಟ್‌ಗೆ ಲಾಬಿ ನಡೆಸದಂತೆ ತಮ್ಮದೇ ಕುಟುಂಬದ ಇಬ್ಬರನ್ನು ರೇಸ್‌ಗೆ ಇಳಿಸಿದ್ದಾರೆ.

ಪಿಎಚ್‌ಡಿ ಪದವೀಧರೆ ಪತ್ನಿ ಡಾ| ಸುನಿತಾ ಚವ್ಹಾಣ ಹಾಗೂ ತಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಿರಿಯ ಸಹೋದರ ರವಿ ಚವ್ಹಾಣ ಅವರ ಮಧ್ಯೆ ಟಿಕೆಟ್‌ ಸ್ಪರ್ಧೆ ಏರ್ಪಡುವಂತೆ ಮಾಡಿದ್ದಾರೆ. ಇವರಿಬ್ಬರ ಹೊರತಾಗಿ ಹಿರಿಯ ನಾಯಕರಾಗಿದ್ದ ಆರ್‌.ಕೆ. ರಾಠೊಡ ಅವರ ಪುತ್ರ ಸುನೀಲ ರಾಠೊಡ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿರುವ ಸಿದ್ದು ಬಂಡಿ, ಪಕ್ಷದ ಹಳೆಯ ಕಾರ್ಯಕರ್ತ ಸಿದ್ದು ಕಾಮತ ಹೀಗೆ ಹಲವರು ಜೆಡಿಎಸ್‌ ವರಿಷ್ಠರ ಮನೆ ಬಾಗಿಲು ಕಾಯುತ್ತಿದ್ದಾರೆ.

ಸಮ್ಮಿಶ್ರ ಸರ್ಕಾದ ಪಾಲುದಾರ ಪಕ್ಷಗಳ 5 ಶಾಸಕರಲ್ಲಿ ಕಾಂಗ್ರೆಸ್‌ ಪಕ್ಷದ ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲ ಹಾಗೂ ಜೆಡಿಎಸ್‌ನ ಎಂ.ಸಿ. ಮನಗೂಳಿ ಸಂಪುಟ ದರ್ಜೆ ಸಚಿವರಾಗಿದ್ದರೆ, ಉಭಯ ಪಕ್ಷಗಳಲ್ಲಿ ಕಾಂಗ್ರೆಸ್‌ನ ಇಂಡಿ ಶಾಸಕರೂ ಆಗಿರುವ ಯಶವಂತರಾಯಗೌಡ ಪಾಟೀಲ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದರೆ, ಪತ್ನಿ ಹಾಗೂ ಸಹೋದರನಿಗೆ ಟಿಕೆಟ್‌ ಬೇಡಿಕೆ ಇರಿಸಿರುವ ದೇವಾನಂದ
ಚವ್ಹಾಣ ಸಿಎಂ ಸಂಸದೀಯ ಕಾರ್ಯದರ್ಶಿ ಹುದ್ದೆ ಪಡೆದಿದ್ದಾರೆ.

ದೋಸ್ತಿ ಬಲ ಹೇಗಿದೆ?
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 4.71 ಲಕ್ಷ ಮತಗಳನ್ನು ಪಡೆದು ರಮೇಶ ಜಿಗಜಿಣಗಿ ವಿಜಯ ಸಾಧಿಸಿದ್ದರೆ, ಕಾಂಗ್ರೆಸ್‌ನ ಪ್ರಕಾಶ ರಾಠೊಡ 4 ಲಕ್ಷ ಮತಗಳನ್ನು ಪಡೆದಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಐಎಎಸ್‌ ನಿವೃತ್ತ ಅಧಿಕಾರಿ ಕೆ.ಶಿವರಾಂ 57 ಸಾವಿರ ಮತಗಳನ್ನು ಪಡೆದಿದ್ದಾರೆ. ಎಎಪಿ ಅಭ್ಯರ್ಥಿ 4717, ಬಿಎಸ್ಪಿ 2,818 ಹಾಗೂ 8 ಜನ ಪಕ್ಷೇತರರು ಪಡೆದ 18 ಸಾವಿರ ಮತಗಳು ಮಾತ್ರವಲ್ಲ ನೋಟಾ ಮತಗಳೇ 8 ಸಾವಿರ ಮೀರಿದೆ. ಇದನ್ನು ಗಮನಿಸಿದರೆ ಈ ಬಾರಿ ದೋಸ್ತಿ ಅಭ್ಯರ್ಥಿ ಹೆಚ್ಚಿನ ಬಲ ಹೊಂದಿದ್ದಾರೆ. ಈ ಬಲದ ಲೆಕ್ಕಾಚಾರ ನೆಚ್ಚಿಕೊಂಡೆ ಶಾಸಕ ದೇವಾನಂದ ಚವ್ಹಾಣ ತಮ್ಮ ಕುಟುಂಬಕ್ಕೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಮೋದಿ ಅಲೆಯನ್ನೇ ನಂಬಿರುವ ಬಿಜೆಪಿ ಸಂಭಾವ್ಯ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತ್ರ ಮುಗುಮ್ಮಾಗಿ ನಗುತ್ತಿದ್ದಾರೆ.

Advertisement

● ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next