ಬಂಟ್ವಾಳ: ಹಿಂದೆ ಇದ್ದ ಕಾಂಗ್ರೆಸ್ ಸರಕಾರ ಮಾಡಿದ ಗೊಂದಲದಿಂದಾಗಿ ರಾಜ್ಯದಲ್ಲಿ ವಸತಿ ರಹಿತರಿಗೆ ಮನೆ ಮತ್ತು ನಿವೇಶನ ವಿತರಣೆಗೆ ತೊಡಕುಂಟಾಗಿದ್ದು, ಅದೆಲ್ಲವನ್ನೂ ಈಗಾಗಲೇ ನಿವಾರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶವನ್ನು ನೀಡಿ 2023ರ ಚುನಾವಣೆಗೆ ಮುಂಚಿತವಾಗಿ ಪೂರ್ಣಗೊಳಿಸುವುದಕ್ಕೆ ಹಣವನ್ನೂ ಬಿಡುಗಡೆ ಮಾಡಲಿದ್ದೇವೆ ಎಂದು ರಾಜ್ಯ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಹೇಳಿದರು.
ಅವರು ಬಂಟ್ವಾಳ ನಿರೀಕ್ಷಣ ಮಂದಿರದಲ್ಲಿ ಪತ್ರಕರ್ತರ ಜತೆ ಮಾತನಾಡಿ, ಹಿಂದಿನ ಸರಕಾರದ ಗೊಂದಲದಿಂದ ಕೇಂದ್ರಕ್ಕೆ ಮಾಹಿತಿಯಿಲ್ಲದೆ ತಿರಸ್ಕರಿಸಲ್ಪಟ್ಟಿದ್ದ 18 ಲಕ್ಷ ಮನೆಗಳು ಹಾಗೂ 6.60 ಲಕ್ಷ ನಿವೇಶನಗಳಿಗೆ ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಸಿಎಂ ಅವರಿಂದ ವಿವರಣೆ ಕೇಳಿದ್ದರು. ಬಳಿಕ ಕೇಂದ್ರದ ಸಚಿವರ ಜತೆ ಕೂತು ಗೊಂದಲ ನಿವಾರಣೆ ಮಾಡಿ ಅವೆಲ್ಲ ಮನೆ-ನಿವೇಶನಕ್ಕೆ ಆದೇಶ ಮಾಡಿದ್ದಾರೆ. ಅದರಲ್ಲಿ ಈ ವರ್ಷ 2 ಲಕ್ಷ ಮನೆಗಳನ್ನು ಕೊಟ್ಟಿದ್ದು, ಇನ್ನೂ 3 ಲಕ್ಷಕ್ಕೆ ಬೇಕು ಎಂದು ಬೇಡಿಕೆ ಸಲ್ಲಿಸಿದ್ದೇವೆ ಎಂದರು.
ರಾಜ್ಯದಲ್ಲಿ ಬೊಮ್ಮಾಯಿ ಅವರು ಸಿಎಂ ಆದ ಬಳಿಕ 5 ಲಕ್ಷ ಮನೆಗಳಿಗೆ ರಾಜ್ಯ ಸರಕಾರದಿಂದ 6,612 ಕೋ.ರೂ. ಮೀಸಲಿರಿಸಲಾಗಿದೆ. ಅದರಲ್ಲಿ ಗ್ರಾಮೀಣಕ್ಕೆ 4 ಲಕ್ಷ ಹಾಗೂ ನಗರಕ್ಕೆ 1 ಲಕ್ಷ ಮನೆಗಳಿರುತ್ತದೆ. ಸಂಖ್ಯೆಯ ಆಧಾರದಲ್ಲಿ ಪ್ರತಿ ಗ್ರಾ.ಪಂ.ಗಳಿಗೆ 30, 40, 50ರಂತೆ ಮನೆ ನೀಡಲಾಗುತ್ತಿದ್ದು, ಅದರಲ್ಲಿ ಈಗಾಗಲೇ ಸಾಕಷ್ಟು ಮನೆಗಳು ಮಂಜೂರಾಗಿವೆ. ಬ್ಲಾಕ್ ಆಗಿರುವ ಮನೆಗಳಿಗೆ ಸಂಬಂಧಿಸಿ ಸಿಎಂ ಜತೆ ಚರ್ಚಿಸಲಾಗಿದ್ದು, ಯಾವುದೇ ಮನೆಗಳು ನೈಜ ಪ್ರಕರಣಗಳಾಗಿದ್ದರೆ ಅವುಗಳಿಗೂ ಅನು ದಾನ ನೀಡಲಾಗುತ್ತದೆ. ಜತೆಗೆ ಅಡಮಾನ ವ್ಯವಸ್ಥೆಯನ್ನು ತೆಗೆದು ಹಾಕಿದ್ದು, ಅನುದಾನ ಮೊತ್ತವನ್ನು ಗ್ರಾಮೀಣದಲ್ಲಿ 37 ಸಾವಿರ ರೂ.ಗಳಿಂದ 1.27 ಲಕ್ಷ ರೂ.ಗಳು ಹಾಗೂ ನಗರ ಪ್ರದೇಶದಲ್ಲಿ 87 ಸಾವಿರ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದರು.
ಶಾಸಕರಾದ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಸುಕುಮಾರ್ ಶೆಟ್ಟಿ, ಬಂಟ್ವಾಳ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಉದಯಕುಮಾರ್ ರಾವ್ ಜತೆಗಿದ್ದರು.
ಬಂಟ್ವಾಳಕ್ಕೆ 2,500 ಮನೆಗಳು
ದ.ಕ.ಜಿಲ್ಲೆಗೆ ಸುಮಾರು 9 ಸಾವಿರದಷ್ಟು ಮನೆಗಳು ಮಂಜೂರಾಗಲಿದ್ದು, ಇದರ ಜತೆಗೆ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗೆ ಹೆಚ್ಚಿನ ಮನೆಗಳು ಸಿಗಲಿವೆ. ಇಲ್ಲಿನ ಶಾಸಕರು ಒಂದು ಸಣ್ಣ ತಪ್ಪು ಮಾಡುವುದಕ್ಕೂ ಬಿಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಶಾಸಕ ರಾಜೇಶ್ ನಾೖಕ್ ಕ್ಷೇತ್ರದಲ್ಲಿ ಸುಮಾರು 2,500 ಮನೆಗಳಿಗೆ ಕಾರ್ಯಾದೇಶ ನೀಡಿ ಮೊದಲ ಕಂತನ್ನೂ ಬಿಡುಗಡೆ ಮಾಡಲಿದ್ದೇವೆ ಎಂದು ಸಚಿವ ಸೋಮಣ್ಣ ತಿಳಿಸಿದರು.