ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡಿದೆ. 68 ಸ್ಥಾನಗಳ ಪೈಕಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಸರಕಾರ ರಚಿಸಲು ಸಿದ್ಧತೆ ನಡೆಸಿದೆ.
ಆಡಳಿತ ನಡೆಸುತ್ತಿದ್ದ ಬಿಜೆಪಿ ಜನರ ಆಕ್ರೋಶಕ್ಕೆ ಸಿಲುಕಿ 25 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಹುಮತಕ್ಕೆ 35 ಸ್ಥಾನಗಳು ಅಗತ್ಯವಾಗಿವೆ. ಇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ರೋಚಕ ಸ್ಪರ್ಧೆಯಲ್ಲಿ ಕಾಂಗ್ರೆಸ್ 43.90 % ಮತಗಳನ್ನು ಪಡೆದಿದ್ದು, ಬಿಜೆಪಿ 43% ಮತಗಳನ್ನು ಪಡೆದಿದೆ. ಆಮ್ ಆದ್ಮಿ ಪಕ್ಷ ತನ್ನ ಖಾತೆ ತೆರೆಯಲು ವಿಫಲವಾಗಿದೆ.
ರಾಜ್ಯದಲ್ಲಿನ 55 ಲಕ್ಷ ಮತದಾರರಲ್ಲಿ, 68 ಸದಸ್ಯರನ್ನು ವಿಧಾನಸಭೆಗೆ ಆಯ್ಕೆ ಮಾಡಲು ಶೇಕಡಾ 75 ಕ್ಕಿಂತ ಹೆಚ್ಚು ಜನರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಚುನಾವಣೆಯಲ್ಲಿ ಒಟ್ಟು 412 ಅಭ್ಯರ್ಥಿಗಳು ಕಣದಲ್ಲಿದ್ದರು.
2017 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 44 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಒಂದು ಸ್ಥಾನ ಸಿಪಿಐ-ಎಂ ಮತ್ತು ಎರಡು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರು.
ಪಕ್ಷದ ಸೋಲಿನ ಬೆನ್ನಲ್ಲೇ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಅವರು ಶಿಮ್ಲಾದ ರಾಜಭವನಕ್ಕೆ ಆಗಮಿಸಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.