ರಾಯಚೂರು: ಗುತ್ತಿಗೆದಾರನ ಆತ್ಮಹತ್ಯೆ ಕಾರಣವಾದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರನ್ನು ಕೂಡಲೇ ಬಂಧಿಸಬೇಕು, ಶೇ.40 ಕಮಿಷನ್ ದಂಧೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬುಧವಾರ ನಗರದ ಡಾ| ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವೃತ್ತದಲ್ಲಿರುವ ಡಾ| ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋರಾಟ ಆರಂಭಿಸಿದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಸರ್ಕಾರ ನಡೆಯುತ್ತಿರುವುದೇ 40 ಪರ್ಸೆಂಟ್ ಆಧಾರದ ಮೇಲೆ. ಸಣ್ಣ ಕೆಲಸವಾಗಬೇಕಾದರೂ ಕಮಿಶನ್ ನೀಡಬೇಕಾದ ಸನ್ನಿವೇಶ ಏರ್ಪಟ್ಟಿದೆ. ಬಿಜೆಪಿ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಲಂಚ ಮಾಮೂಲಾಗಿದ್ದು, ಹೇಳುವವರು ಕೇಳುವವರಿಲ್ಲದ ಸ್ಥಿತಿ ಇದೆ ಎಂದು ದೂರಿದರು.
ಈ ಪರ್ಸೆಂಟೇಜ್ ಪೆಂಡಭೂತಕ್ಕೆ ಒಬ್ಬ ಗುತ್ತಿಗೆದಾರನ ಜೀವ ಬಲಿಯಾಗಿದೆ. ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪನವರೇ ಕಾರಣ ಎಂದು ವಾಟ್ಸ್‌ಆ್ಯಪ್ ಸಂದೇಶದಲ್ಲಿ ದಾಖಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಈವರೆಗೆ ಈಶ್ವರಪ್ಪನವರ ಬಂಧನವಾಗಿಲ್ಲ. ಇಲ್ಲಿನ ಅಕ್ರಮವನ್ನು ವರಿಷ್ಠರಿಗೆ ತಿಳಿಸಿದ್ದೇ ಎಂದು ಸಂತೋಷ ಹೇಳಿಕೊಂಡಿದ್ದು, ಬಿಜೆಪಿ ನಾಯಕರು ಎಲ್ಲ ಗೊತ್ತಿದ್ದು ಮೌನವಾಗಿದ್ದರೇ ಎಂಬ ಅನುಮಾನ ಮೂಡಿದೆ ಎಂದು ದೂರಿದರು.
ಕೆ.ಎಸ್. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕು. ಅವರ ಜತೆಗೆ ಇತರ ಆರೋಪಿಗಳನ್ನು ಬಂಧಿಸಬೇಕು. ಪ್ರಕರಣದ ತನಿಖೆಯನ್ನು ರಾಜ್ಯ ಹೈಕೋರ್ಟ್‌ನ ಹಾಲಿ ನ್ಯಾ| ಉಸ್ತುವಾರಿಯಲ್ಲಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಹಾಗೂ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮೃತರು ನಿರ್ವಹಿಸಿರುವ 108 ಕಾಮಗಾರಿಗಳ 4 ಕೋಟಿ ರೂ. ಗಳ ಬಿಲ್ ಪಾವತಿಸಬೇಕು. ಕಾರ್ಯಾದೇಶ ಸೇರಿದಂತೆ ಇತರ ಪ್ರಕ್ರಿಯೆ ಮುಗಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು. ಈ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಕರ್ನಾಟಕವನ್ನು ಭ್ರಷ್ಟಾಚಾರ ರಹಿತ ರಾಜ್ಯವನ್ನಾಗಿ ರೂಪಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಎನ್.ಎಸ್. ಬೋಸರಾಜು, ಎ.ವಸಂತಕುಮಾರ, ಮಲ್ಲಿಕಾರ್ಜುನ ನಾಗಪ್ಪ, ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ರಾಜ್ ಶೇಖ್, ಶರಣಪ್ಪ ಮಟ್ಟೂರು, ಬಸವರಾಜ ಪಾಟೀಲ್ ಇಟಗಿ, ರುದ್ರಪ್ಪ ಅಂಗಡಿ ಹಾಗೂ ನಿರ್ಮಲಾ ಇದ್ದರು.