ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಫೆ.07) ರಾಜ್ಯಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಂದನಾ ನಿರ್ಣಯದ ಮೇಲಿನ ಚರ್ಚೆಯ ಕುರಿತು ಮಾತನಾಡುತ್ತಾ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡುವುದರ ವಿರುದ್ಧ ಇದ್ದಿದ್ದರು. ಮೀಸಲಾತಿ ವ್ಯವಸ್ಥೆಯನ್ನು ಅಸಮರ್ಥಗೊಳಿಸುತ್ತದೆ ಎಂಬುದು ನೆಹರು ಚಿಂತನೆಯಾಗಿತ್ತು ಎಂದರು.
ಇದನ್ನೂ ಓದಿ:NDAಗೆ 400 ಸ್ಥಾನ ಸಿಗಲಿದೆ ಎಂಬ ಖರ್ಗೆಜೀ ಭವಿಷ್ಯ ನಿಜವಾಗಲಿದೆ: ಪ್ರಧಾನಿ ಮೋದಿ ತಿರುಗೇಟು
“ನಾನು ಇತ್ತೀಚೆಗೆ ನೆಹರುವನ್ನು ಹೆಚ್ಚು ನೆನಪಿಸಿಕೊಳ್ಳುತ್ತಿದ್ದೇನೆ. ನೆಹರು ಅವರು ಒಂದು ಬಾರಿ ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರದ ಅನುವಾದ ಓದಿದೆ. ಅವರು ಮೀಸಲಾತಿಯ ವಿರುದ್ಧ ಇದ್ದಿದ್ದರು ಎಂಬುದು ತಿಳಿಯಿತು.
ನೆಹರುಜೀಯ ಪ್ರಕಾರ, ಒಂದು ವೇಳೆ ಉದ್ಯೋಗದಲ್ಲಿ ಎಸ್ ಸಿ, ಎಸ್ ಟಿ ಅಥವಾ ಒಬಿಸಿಗೆ ಮೀಸಲಾತಿ ಕೊಟ್ಟರೆ ಇದರಿಂದ ಸರ್ಕಾರಿ ಕೆಲಸದ ಗುಣಮಟ್ಟ ಕುಸಿಯುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ನೇಮಕಾತಿಯನ್ನು ಕೂಡಾ ನಿಲ್ಲಿಸಿದ್ದರು. ನೆಹರುಜೀ ಏನು ಹೇಳಿದ್ದರೋ ಅದನ್ನೇ ಕಾಂಗ್ರೆಸ್ ಕುರುಡಾಗಿ ಅನುಸರಿಸುತ್ತಿದೆ. ಅಂದಿನಿಂದ ಈವರೆಗೂ ಕಾಂಗ್ರೆಸ್ ಮನಸ್ಥಿತಿ ಏನೆಂಬುದನ್ನು ಇಂತಹ ಉದಾಹರಣೆಗಳಿಂದಲೇ ತಿಳಿದುಕೊಳ್ಳಬಹುದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಹಿಂದುಳಿದ ಜಾತಿ, ಹಿಂದುಳಿದ ವರ್ಗ ಮತ್ತು ಆದಿವಾಸಿಗಳ ವಿರೋಧಿಯಾಗಿದೆ. ನಾವು(ಬಿಜೆಪಿ) ಯಾವಾಗಲೂ ಅವರಿಗೆ ಆದ್ಯತೆ ನೀಡಿದ್ದೇವೆ. ಮೊದಲು ದಲಿತರಿಗೆ, ಈಗ ಆದಿವಾಸಿಗಳಿಗೆ ಮನ್ನಣೆ ನೀಡಿದ್ದೇವೆ. ನಾವು ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಸಮುದಾಯದ ಏಳಿಗೆಗೆ ಶ್ರಮಿಸಿದ್ದೇವೆ. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡುವ ಮೂಲಕ ದೇಶದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ನಾವು ಮುರ್ಮು ಅವರನ್ನು ಆಯ್ಕೆ ಮಾಡಿದ್ದಕ್ಕೆ ನೀವು ಅದನ್ನು ವಿರೋಧಿಸಿದ್ರಿ. ಒಂದು ವೇಳೆ ಬಿಆರ್ ಅಂಬೇಡ್ಕರ್ ಇಲ್ಲದಿದ್ದರೆ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸ್ಥಾನಮಾನವೇ ಸಿಗುತ್ತಿರಲಿಲ್ಲ. ನಮ್ಮ ಸರ್ಕಾರ ಅಂಬೇಡ್ಕರ್ ಗೆ ಭಾರತ ರತ್ನ ಗೌರವ ನೀಡಿದೆ. ನಿಮ್ಮದು (ಕಾಂಗ್ರೆಸ್) ಬ್ರಿಟಿಷ್ ಗುಲಾಮಿ ಮನಸ್ಥಿತಿ ಹಾಗೆಯೇ ಮುಂದುವರಿದಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.
ತಮ್ಮ ಭಾಷಣದಲ್ಲಿ ಜವಾಹರಲಾಲ್ ನೆಹರು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು, ಇಬ್ಬರ ಭಾಷಣಗಳನ್ನು ಗಮನಿಸಿದರೆ ಅವರಿಗೆ ಭಾರತೀಯರ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲವಾಗಿತ್ತು ಎಂಬುದು ತಿಳಿಯುತ್ತದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ತಾನೇ ಆಡಳಿತಗಾರ ಎಂದು ಭಾವಿಸಿತ್ತು. ನೆಹರು ಅವರ ತಪ್ಪಿನಿಂದಾಗಿ ಕಾಶ್ಮೀರ ಭಾರೀ ಬೆಲೆ ತೆರುವಂತಾಗಿತ್ತು ಎಂದು ಮೋದಿ ಹೇಳಿದರು.