ಕಲಬುರಗಿ: ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಕಲಬುರಗಿ ನಗರ ದಕ್ಷಿಣ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಧಜ್ವ ಖಂಡಿತವಾಗಿ ಹಾರಿಸಲು ಶಕ್ತಿ ಮೀರಿ ಶ್ರಮಿಸೋಣ. ಇದರಿಂದ ನಗರದ ಜನತೆಯನ್ನು ಕೋಮುವಾದಿ ಪಕ್ಷದ ಉಪಟಳದಿಂದ ಮುಕ್ತ ಮಾಡೋಣ ಎಂದು ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ ನೆಲೋಗಿ ಹೇಳಿದರು.
ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ದಕ್ಷಿಣ ಮತಕ್ಷೇತ್ರದ ವಾರ್ಡ್ ವಾರು ಮತ್ತು ಬೂತ್‌ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡುತ್ತಿರುವ ಕೋಮುವಾದ, ಹಿಜಾಬ್, ಆಜಾನ್ ಮತ್ತು ಧಾರ್ಮಿಕ ಅಸಹಿಷ್ಣುತೆ ಕುರಿತು ವಾರ್ಡ್ ಮತ್ತು ಬೂತ್ ಮಟ್ಟದಲ್ಲಿರುವ ಜನರ ಮನೆಗಳಿಗೆ ಹೋಗಿ ಪರಿಣಾಮ ತಿಳಿ ಹೇಳುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ಇದರಿಂದ ಜನರಿಗೆ ಪ್ರಸಕ್ತ ಕಾಲಘಟ್ಟದಲ್ಲಿ ನಡೆಯುವ ಘಟನಾವಳಿಗೂ ದೂರದೃಷ್ಟಿತ್ವದಲ್ಲಿ ಏನೆಲ್ಲ ಅಡ್ಡ ಪರಿಣಾಮ ಉಂಟು ಮಾಡಲಿವೆ ಎನ್ನುವುದನ್ನು ನಾವು ಮನವರಿಕೆ ಮಾಡಿಕೊಡಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮೇಯರ್ ಶರಣಕುಮಾರ ಮೋದಿ ಮಾತನಾಡಿ, ನಗರದ ಜನತೆಗೆ ಕೋಮುವಾದ, ಜಾತಿ ಧರ್ಮದಲ್ಲಿನ ಜಗಳಗಳ ಕುರಿತು ತಿಳಿವು ಇದೆ. ಆದರೆ, ಅದರ ಪರಿಣಾಮ ಹೇಗೆ ದೈನಂದಿನ ಜೀವನದ ಮೇಲೆ ಬೀಳುತ್ತದೆ. ಮುಂದಿನ ದಿನಗಳಲ್ಲಿ ಮಕ್ಕಳು ಆದರಿಂದ ಹೇಗೆ ಪ್ರಭಾವಿತರಾಗಿ ಅಪಾಯದ ಜೀವನಕ್ಕೆ ತಳ್ಳಲ್ಪಡುತ್ತಾರೆ ಎನ್ನುವುದನ್ನು ಚೆನ್ನಾಗಿ ತಿಳಿ ಹೇಳುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಮಾಡಬೇಕು. ಅದರಲ್ಲೂ ಪ್ರಮುಖವಾಗಿ ಮಹಿಳಾ ಮುಖಂಡರು ಮನೆ ಮನೆಗಳಿಗೆ ತೆರಳಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದಿರುವುದರಿಂದ ಉಂಟಾಗಿರುವ ಸಮಸ್ಯೆಗಳನ್ನು ಹೇಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಮ ನಾಟೀಕಾರ, ಜಗನ್ನಾಥ ಗೋಧಿ, ಬಾಬು ಒಂಟಿ, ಶಿವಾನಂದ ಹೋನಗುಂಟಿ, ನೀಲಕಂಠರಾವ ಮೂಲಗೆ, ಲಿಂಗರಾಜ್ ತಾರಫೈಲ್, ಲಿಂಗರಾಜ್ ಕಣ್ಣಿ, ಪ್ರವೀಣ ಪಾಟೀಲ್ ಹರವಾಳ, ಡಾ| ಕಿರಣ ದೇಶಮುಖ್, ರಾಜೇಶ ಗುತ್ತೇದಾರ, ಸಂತೋಷ ಪಾಟೀಲ ದನ್ನೂರ, ಈರಣ ಝಳಕಿ, ಬಸವರಾಜ ನಾಶಿ, ಫಾರುಖ ಸೇಠ್ ಮನಿಯಾರ, ವಾಣಿಶ್ರೀ ಸಗರಕರ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.