ಮಂಡ್ಯ: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರಿಲ್ಲದೆ ಸಂಪೂರ್ಣ ಖಾಲಿಯಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯಕರಿಗೆ 2 ಲಕ್ಷ ರೂ. ಡಿಮ್ಯಾಂಡ್ ಇಟ್ಟಿರುವುದನ್ನು ನೋಡಿದರೆ, ಪಕ್ಷ ದಿವಾಳಿಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ನಗರದ ಕಾಳಿಕಾಂಭ ದೇವಾಲಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಅತಂತ್ರ ಸ್ಥಿತಿಯಲ್ಲಿದೆ. ಕಾಂಗ್ರೆಸ್‌ನಲ್ಲಿ ಶಾಸಕರು, ನಾಯಕರಿಲ್ಲದೆ ಖಾಲಿಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಕ್ಷೇತ್ರ ಇಲ್ಲದಂತಾಗಿದೆ. ಬಾದಾಮಿ, ಕೋಲಾರ, ಮೈಸೂರಿನ ಜನ ನಿಲ್ಲಲು ಬಿಡುತ್ತಿಲ್ಲ. ಸದ್ಯ ಸಿದ್ದರಾಮಯ್ಯ ಅನರ್ಹರಾಗಿದ್ದಾರೆ. ಅವರಿಗೆ ತಾಕತ್ತಿದ್ದರೆ ಬಾದಾಮಿಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದರು. ಆದರೆ, ರೈತರ ಆತ್ಮಹತ್ಯೆ ಮಾಡಿಕೊಂಡಾಗ ಪರಿಹಾರ ನೀಡಲಿಲ್ಲ. ಹಿಂದೂಗಳಿಗೆ ಧಕ್ಕೆ ತಂದರು. ಪಿಎಫ್‌ಐ ಸಂಘಟನೆಯ 2 ಸಾವಿರ ಜನರನ್ನು ಜೈಲಿನಿಂದ ಹೊರಗೆ ತಂದರು. ಹಿಂದೂ-ಮುಸ್ಲಿಂ ನಡುವೆ ಒಡೆದಾಳುವ ನೀತಿ ಅನುಸರಿಸಿದರು. ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಯತ್ನಿಸಿದರು. ಇವರೊಬ್ಬ ಕೆಟ್ಟ ರಾಜಕಾರಣಿ. ಅಹಿಂದ ಹೆಸರಿನಲ್ಲಿ ಅಧಿಕಾರ ಪಡೆದ ಇವರು ಅಹಿಂದ ವರ್ಗದವರಿಗೆ ಅವಮಾನ ಮಾಡಿದರು ಎಂದು ಕಿಡಿಕಾರಿದರು.
ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಆಗಿದೆ. ಇಡೀ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಅರ್ಕಾವತಿ, ಚೆಕ್ ಹಗರಣಗಳು ಶೀಘ್ರದಲ್ಲಿಯೇ ಹೊರಬರಲಿದ್ದು, ಅವರೂ ಜೈಲಿಗೆ ಹೋಗಲಿದ್ದಾರೆ.
-ನಳಿನ್‌ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ