Advertisement

Congress: ಸರಕಾರದಿಂದ ರೈತರಿಗೆ ಕೊನೆಗಾಲ, ಜನರಿಗೆ ವಿನಾಶ ಕಾಲ: ಆರ್‌.ಅಶೋಕ್‌

12:40 AM Nov 07, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಾಗ ಒಳ್ಳೆಯ ಕಾಲ ಬರಬಹುದೆಂದು ಜನ ನಿರೀಕ್ಷಿಸಿದ್ದರು. ಆದರೆ ಅಧಿಕಾರಿಗಳಿಗೆ ಯಮಗಂಡ ಕಾಲ, ಗುತ್ತಿಗೆದಾರರಿಗೆ ರಾಹುಕಾಲ, ರೈತರಿಗೆ ಕೊನೆಗಾಲ, ಜನರಿಗೆ ವಿನಾಶ ಕಾಲ ಎಂಬಂತಾಗಿದೆ. ಈ ಸರಕಾರ ಹೀಗೇ ಮುಂದುವರಿದರೆ ತೊಲಗುವ ಕಾಲವೂ ಬರಲಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಅಧಿಕಾರಿಗಳು ಲಂಚ ಕೊಡಬೇಕು ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಯಾದಗಿರಿ ಪಿಎಸ್‌ಐ ಪರಶುರಾಮ್‌ ಸಾವು, ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ, ಇದೀಗ ಬೆಳಗಾವಿ ತಹಶೀಲ್ದಾರ್‌ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ನೇಣಿಗೆ ಶರಣು. ಈ ಪ್ರಕರಣಗಳು ರಾಜ್ಯ ಸರಕಾರಕ್ಕೆ ಮಾನವೀಯತೆ ಇಲ್ಲ ಎಂಬುದರ ಸಾಕ್ಷಿ ಎಂದರು.

ಪಿಎಸ್‌ಐ ಪರಶುರಾಮ್‌ ಸಾವು ಪ್ರಕರಣದಲ್ಲಿ ಯಾರ ವಿರುದ್ಧವೂ ಕ್ರಮ ಆಗಿಲ್ಲ. ಎಸ್‌ಡಿಎ ರುದ್ರಣ್ಣ ಸಾಯುವುದಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಕಳುಹಿಸದರೂ ಆತನ ಸಾವನ್ನು ತಡೆಯುವ ಬದಲು ಆತನನ್ನೇ ಗ್ರೂಪ್‌ನಿಂದ ಹೊರಹಾಕಿದ ನಿಷ್ಕರುಣಿ ಸರ್ಕಾರ. ಈ ಹಿಂದೆ ಈಶ್ವರಪ್ಪ ಅವರ ವಿರುದ್ಧ ಆರೋಪ ಬಂದಾಗ ತೊಡೆ ತಟ್ಟಿ ರಾಜೀನಾಮೆ ಕೇಳಿದ್ದ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್‌ಗೆ ಎಷ್ಟು ನಾಲಿಗೆ ಇದೆ? ಈ ವಿಚಾರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಬಾಯಿ ಬಿಡಬೇಕು ಎಂದು ಒತ್ತಾಯಿಸಿದರು.

ನಿಮ್ಮ ಕಾಂಗ್ರೆಸ್‌ ಲೂಟಿಯ ಪೋಸ್ಟರ್‌ ಅನ್ನೂ ಅಂಟಿಸಿ:
ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 1992ರಲ್ಲಿ ರೌಡಿಗಳು ಬೆಂಗಳೂರಿನಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದರು. ಅವರೆಲ್ಲ ನಾಚಿ ನೀರಾಗುವಂತೆ ಸಚಿವ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ಎಂದರೆ ವರ್ಷಕ್ಕೆ 500 ರಿಂದ 900 ಕೋಟಿ ತಿಮ್ಮಾಪುರ ತೆರಿಗೆ’ ವಿಧಿಸುತ್ತಿದ್ದಾರೆ. ಲೂಟಿ ಮಾಡುವ ಸಚಿವರು ಮುಖ್ಯಮಂತ್ರಿಗಳ ಬಲಗೈ ಆಗಿದ್ದಾರೆ. ಸಿಎಂ ಕಚೇರಿಯೂ ಇದರಲ್ಲಿ ಭಾಗಿದಾರ.

ಸರ್ವರಿಗೂ ಸಮಪಾಲು, ಸಮಬಾಳು ವಾಕ್ಯವನ್ನು ಸಚಿವರು ಚಾಚೂ ತಪ್ಪದೇ ಪಾಲಿಸಿದ್ದಾರೆ. ಇದರ ವಿರುದ್ಧ ರಾಜ್ಯಪಾಲರಿಗೆ ದೂರು ಹೋಗಿದೆ. ಕಾಂಗ್ರೆಸ್‌ ಪಕ್ಷದ ಈ ಲೂಟಿಯ ಪೋಸ್ಟರ್‌ನ್ನೂ ಅಂಟಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರಲ್ಲದೆ, ನೀವು ಪೋಸ್ಟರ್‌ ಅಂಟಿಸುವಾಗ ಬಂದು ನಿಮ್ಮನ್ನು ಸನ್ಮಾನ ಮಾಡುತ್ತೇವೆ ಎಂದರು.

Advertisement

ರಾಜ್ಯ ಬಿಜೆಪಿ ಸಹ-ಉಸ್ತುವಾರಿ ಸುಧಾಕರ್‌ ರೆಡ್ಡಿ, ಶಾಸಕ ಉದಯ್‌ ಗರುಡಾಚಾರ್‌, ಬಿಜೆಪಿ ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಪ್ರಕಾಶ್‌ ಶೇಷರಾಘವಾಚಾರ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

“ವಿಧಾನಸೌಧದ ಮುಂದಿರುವ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಫ‌ಲಕವನ್ನು ಕಾಂಗ್ರೆಸ್‌ ಸರಕಾರವು ಸರಕಾರಿ ಕೆಲಸ ಜೇಬು ತುಂಬುವ ಕೆಲಸ’ ಎಂದು ಬದಲಿಸಿದಂತಿದೆ. ದೀಪಾವಳಿಯಲ್ಲಿ ಜನರು ಸರ ಪಟಾಕಿ ಹಚ್ಚಿದರೆ, ಇವರು ಭ್ರಷ್ಟಾಚಾರದ ಸರಮಾಲೆಯನ್ನೇ ಹಚ್ಚಿದ್ದಾರೆ.”
– ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next