Advertisement
ಕಳೆದ ಒಂದು ವಾರದಿಂದ ಬಿಜೆಪಿಯಲ್ಲಿ ನಡೆ ಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದರೆ ಸದ್ಯಕ್ಕೆ ಸ್ವಲ್ಪಮಟ್ಟಿಗೆ ಬಿಜೆಪಿಗೆ ಡ್ಯಾಮೇಜ್ ಆಗಿದೆ ಯೆನ್ನಬಹುದು. ಆದರೆ ಇದು ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಲಾಭವಾಗಲಿದೆ ಎಂಬುದು ಕೈಪಡೆಯ ಹಿಡಿತಕ್ಕೆ ಸಿಕ್ಕಿಲ್ಲವಾದರೂ “ಲಾಭ’ ಖಂಡಿತ ಅಗಲಿದೆ ಎಂಬ ವಿಶ್ವಾಸದಲ್ಲಿದೆ. ಈ ರಾಜಕೀಯ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಬೇಕೆಂಬುದೇ ಕಾಂಗ್ರೆಸ್ ಲೆಕ್ಕಾಚಾರ.
Related Articles
Advertisement
ಶೆಟ್ಟರ್-ಸವದಿ ಸೇರ್ಪಡೆಯಿಂದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೆ ಕಿತ್ತೂರು ಕರ್ನಾಟಕವೂ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷಕ್ಕೆ ಹೆಚ್ಚು ಬಲ ಬಂದಿದೆ. ವೀರಶೈವ-ಲಿಂಗಾಯತ ಮತಗಳು ಸಾಕಷ್ಟು ಪ್ರಮಾಣದಲ್ಲಿ ವರ್ಗಾವಣೆಗೊಂಡರೆ ಕನಿಷ್ಟ 15 ರಿಂದ 20 ಕ್ಷೇತ್ರಗಳ ಫಲಿತಾಂಶ ಚಿತ್ರಣವೇ ಬದಲಾಗುತ್ತದೆ ಎಂಬ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣದಿಂದ ನೋವಿನಿಂದ ಹೊರಬರುತ್ತಿರುವ ಲಿಂಗಾಯತರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ. ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ಕಡೆಗಣಿಸಿತ್ತು ಎಂಬ ಅಪವಾದದಿಂದ ಹೊರಬರಲು ಇದು ಸಕಾಲವೆಂದು ಪರಿಗಣಿಸಿರುವ ಕಾಂಗ್ರೆಸ್ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪ ಯಾವ ರೀತಿ ಲಿಂಗಾಯತ ಸಮುದಾಯದ ನಾಯಕರೋ ಅದೇ ರೀತಿ ಕಾಂಗ್ರೆಸ್‌ನಲ್ಲಿ ಎಂ.ಬಿ.ಪಾಟೀಲ್ ಮುಂಚೂಣಿಯಲ್ಲಿದ್ದಾರೆ. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಪ್ರಕ್ರಿಯೆಯಲ್ಲಿ ಸಂಬಂಧಿಕರೂ ಆಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ.ಪಾಟೀಲ್ ಸಕ್ರಿಯ ರಾಗಿದ್ದರು. ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಈ ಮೂವರದು ವಿಭಿನ್ನ ನಿಲು ವಾಗಿತ್ತು. ಈಗ ಅದು ತೆರೆಗೆ ಸರಿದಿದೆ. ಮೂವರು ಒಂದೇ ಪಕ್ಷದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಪ್ರಬಲ ಲಿಂಗಾಯತರ ಸಂಖ್ಯೆ ಹೆಚ್ಚಿದಂತೆ ಆಗಿದೆ. ಜತೆಗೆ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಂತರ ಮತ್ತೂಂದು ಶಕ್ತಿಕೇಂದ್ರ ಸೃಷ್ಟಿಯಾದರೂ ಅಚ್ಚರಿ ಇಲ್ಲ.
ಪ್ರತಿ ಚುನಾವಣೆ ಸಂದರ್ಭದಲ್ಲೂ ಪಕ್ಷಾಂತರ ಸರ್ವೇ ಸಾಮಾನ್ಯ. ಆದರೆ ಪಕ್ಷಾಂತರ ಮಾಡಿದ ನಾಯಕನ ಹಿಂದೆ ಎಷ್ಟು ಮಂದಿ ಮುಖಂಡರು/ಹಿಂಬಾಲಕರು ಪಕ್ಷ ತೊರೆಯುತ್ತಾರೆ ಎಂಬುದು ಸಹ ಮುಖ್ಯ, ಜತೆಗೆ ಕೇವಲ ನಾಯಕ/ ಮುಖಂಡ ಪಕ್ಷಾಂತರ ಮಾಡಿದರೆ ಸಾಲದು, ತಾವು ಸೇರ್ಪಡೆಯಾದ ಪಕ್ಷಕ್ಕೆ ಎಷ್ಟು ಮತಗಳನ್ನು ತಂದುಕೊಡುತ್ತಾರೆ ಎಂಬುದು ಅಷ್ಟೇ ಮುಖ್ಯ.
ತಾವು ಬದಲಾದಂತೆ ತಮ್ಮ ಸಮುದಾಯ ಇಲ್ಲವೇ ಸಾಮಾನ್ಯ ಮತದಾರರನ್ನು ಬದಲಾಯಿಸುವ ಶಕ್ತಿ ಇದ್ದರೆ ಮಾತ್ರ ಆಗ ನಾಯಕರ ಪಕ್ಷಾಂತರಕ್ಕೆ ಬೆಲೆ ಇರುತ್ತದೆ, ಇಲ್ಲದಿದ್ದರೆ ಅದು ಕೇವಲ ಅವರಿಗಷ್ಟೇ ಸೀಮಿತವಾಗಿರುತ್ತದೆ. ಈ ಕಾರಣದಿಂದಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ನವರು ಬಿಜೆಪಿಯವರನ್ನು ಕರೆದುಕೊಂಡಿರಬಹುದು, ಆದರೆ ಬಿಜೆಪಿ ಮತ ಬ್ಯಾಂಕ್ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-ಎಂ.ಎನ್.ಗುರುಮೂರ್ತಿ