ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ(ಫೆ.08)ವೂ ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ಮುಂದುವರಿಸಿದ್ದು, ಪ್ರತಿಭೆ ವಂಶರಾಜಕಾರಣದ ಮೊದಲ ಬಲಿಪಶುವಾಗಿದೆ. ಒಂದು ವೇಳೆ ಕಾಂಗ್ರೆಸ್ ಇಲ್ಲದಿದ್ರೆ ದೇಶ ಹೇಗೆ ವಿಭಿನ್ನವಾಗುತ್ತಿತ್ತು ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ:ಹಿಂಸೆಗೆ ತಿರುಗಿದ ಹಿಜಾಬ್ – ಕೇಸರಿ ವಿವಾದ: ಶಿವಮೊಗ್ಗದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ
“ಕಾಂಗ್ರೆಸ್ ಪಕ್ಷದ ಸಮಸ್ಯೆ ಏನೆಂದರೆ ಅದು ಯಾವತ್ತೂ ತನ್ನ ವಂಶವನ್ನು ಮೀರಿ ಆಲೋಚಿಸುತ್ತಿಲ್ಲ. ಪ್ರಜಾಪ್ರಭುತ್ವಕ್ಕೆ ವಂಶರಾಜಕಾರಣದ ಪಕ್ಷಗಳು ದೊಡ್ಡ ಅಪಾಯಕಾರಿಯಾಗಿವೆ. ಯಾವಾಗ ಕುಟುಂಬವೇ ಪ್ರಾಮುಖ್ಯತೆ ಪಡೆಯುತ್ತದೆಯೋ ಆಗ ಪ್ರತಿಭೆ ಬಲಿಪಶುವಾಗುತ್ತದೆ” ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಚರ್ಚೆಯ ವೇಳೆ ಉತ್ತರ ನೀಡುತ್ತಾ ಮಾತನಾಡಿದರು.
“ ಒಂದು ವೇಳೆ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಏನು ಎಂಬ ಬಗ್ಗೆ ಜನರು ಅಚ್ಚರಿ ಪಡುತ್ತಾರೆ. ಅವರು ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾದ ನಡುವೆ ಸಿಲುಕಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಪ್ರತಿಮ ನಾಯಕಿ ಇಂದಿರಾ ಗಾಂಧಿಯ ಹೆಸರನ್ನು ಉಲ್ಲೇಖಿಸಿ” ಪ್ರಧಾನಿ ಮೋದಿ ವ್ಯಂಗ್ಯವಾಡಿದರು.
ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು ಎಂಬುದು ಮಹಾತ್ಮಗಾಂಧಿಯವರ ಇಚ್ಛೆಯಾಗಿತ್ತು. ಒಂದು ವೇಳೆ ಕಾಂಗ್ರೆಸ್ ಮುಂದುವರಿದರೆ ಮುಂದೇನಾಗಬಹುದು ಎಂಬುದು ಅವರಿಗೆ ತಿಳಿದಿತ್ತು. ಹೀಗಾಗಿ ಗಾಂಧಿಯವರ ಆಶಯ ಈಡೇರಿದ್ದರೆ ಭಾರತ ಸ್ವಜನಪಕ್ಷಪಾತದಿಂದ ಮುಕ್ತವಾಗುತ್ತಿತ್ತು ಎಂದು ಪ್ರಧಾನಿ ಹೇಳಿದರು.
ಗಾಂಧಿಜೀವರ ಇಚ್ಛೆಯಂತೆ ಕಾಂಗ್ರೆಸ್ ಇಲ್ಲದಿದ್ದರೆ, ಪ್ರಜಾಪ್ರಭುತ್ವ ಸ್ವಜನಪಕ್ಷಪಾತದಿಂದ ಮುಕ್ತವಾಗುತ್ತಿತ್ತು. ಭಾರತ ಸ್ವದೇಶಿ ಹಾದಿಯನ್ನು ಹಿಡಿಯುತ್ತಿತ್ತು. ದೇಶದಲ್ಲಿ ತುರ್ತುಪರಿಸ್ಥಿತಿ ಅನುಭವಿಸುವಂತಾಗುತ್ತಿರಲಿಲ್ಲ. ದಶಕಗಳ ಕಾಲ ಭ್ರಷ್ಟಾಚಾರ ತಾಂಡವವಾಡುತ್ತಿರಲಿಲ್ಲ. ಅಷ್ಟೇ ಅಲ್ಲ ಜಾತಿವಾದ ಅಥವಾ ಪ್ರಾದೇಶಿಕತೆ ಇರುತ್ತಿರಲಿಲ್ಲ. ಸಿಖ್ಖರ ಹತ್ಯಾಕಾಂಡ ನಡೆಯುತ್ತಿರಲಿಲ್ಲ, ಕಾಶ್ಮೀರದ ಜನರನ್ನು ಹೊರಹಾಕುತ್ತಿರಲಿಲ್ಲ, ತಂದೂರ್ ನಲ್ಲಿ ಮಹಿಳೆಯನ್ನು ಸುಡುತ್ತಿರಲಿಲ್ಲ, ಜನಸಾಮಾನ್ಯರು ಕೂಡಾ ಮೂಲಭೂತ ಸೌಕರ್ಯಕ್ಕಾಗಿ ದೀರ್ಘಕಾಲ ಕಾಯಬೇಕಾಗಿರಲಿಲ್ಲ ಎಂದು ಪ್ರಧಾನಿ ಮೋದಿ ತೀಕ್ಷ್ಣವಾಗಿ ತಿರುಗೇಟು ನೀಡಿದರು.