Advertisement
ಕಳೆದ ಬಾರಿ ಚುನಾವಣೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದವರಲ್ಲಿ ಒಬ್ಬರಾಗಿದ್ದ ಶ್ರವಣ ಬೆಳಗೊಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ಈ ಬಾರಿ ಪ್ರತಿಸ್ಪರ್ಧಿ ಯಾರೆಂಬುದು ಇದುವರೆಗೂ ಅಂತಿಮವಾಗಿಲ್ಲ, ನಿಗೂಡವಾಗಿಯೇ ಉಳಿದಿರುವುದು ಕ್ಷೇತ್ರದ ಮತದಾರರಲ್ಲಿ ಸಾಕಷ್ಟು ಗೊಂದಲ ಮೂಡಿದೆ.
Related Articles
Advertisement
ಭಾರೀ ಅಂತರದ ಗೆಲುವು: 2004 ಮತ್ತು 2008ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಸಿ.ಎಸ್.ಪುಟ್ಟೇಗೌಡ ಬದಲಾದ ಕಾಲಘಟ್ಟದಲ್ಲಿ ಜೆಡಿಎಸ್ ತೊರೆದು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದರು. ಜೆಡಿಎಸ್ ನಿಂದ ಸ್ಪರ್ಧೆಗಿಳಿದ ಬಾಲಕೃಷ್ಣ ಕಾಂಗ್ರೆಸ್ ಪಕ್ಷದ ಅಂದಿನ ಅಭ್ಯರ್ಥಿ ಪುಟ್ಟೇಗೌಡರ ವಿರುದ್ಧ 24 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದರು.
ನಾಳೆ ನಾಮಪತ್ರ ಸಲ್ಲಿಕೆ: 2018ರ ಚುನಾವಣೆ ಯಲ್ಲಿಯೂ ಬಾಲಕೃಷ್ಣ ಹಾಗೂ ಪುಟ್ಟೇಗೌಡರ ಪುನಃ ಮುಖಾಮುಖೀಯಾದರು. ಈ ವೇಳೆ 53 ಸಾವಿರ ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ, ಎರಡನೇ ಸಲ ವಿಧಾನಸೌಧ ಪ್ರವೇಶ ಮಾಡಿದರು. 2023ರ ಚುನಾ ವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಪುನಃ ಬಾಲಕೃಷ್ಣ ಕಣಕ್ಕೆ ಇಳಿದಿದ್ದು ಏ.17 ರಂದು ನಾಮಪತ್ರ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.
ಕೈ ಅಭ್ಯರ್ಥಿ ಯಾರು?: ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಯಾರು.? ಎನ್ನುವುದು ಕ್ಷೇತ್ರದಲ್ಲಿ ಪ್ರಶ್ನೆಯಾಗಿ ಉಳಿದಿದೆ, ಪುಟ್ಟೇಗೌಡರಿಗೆ ಆರೋಗ್ಯ ಸರಿಯಿಲ್ಲ ಮತ್ತು ವಯೋಸಹಜವಾಗಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಮಾಜಿ ಮತ್ರಿ ದಿ. ಎಚ್.ಸಿಶ್ರೀಕಂಠಯ್ಯರ ಸೊಸೆ ರಾಜೇಶ್ವರಿ ಹಾಗೂ ಮೊಮ್ಮಗ ಎಚ್.ಸಿ.ಲಲಿತ್ ರಾಘವ್ (ದೀಪು) ಟಿಕೆಟಾYಗಿ ಪೈಪೋಟಿ ನಡೆಸುತ್ತಿದ್ದಾರೆ.
4 ಬಾರಿ ಗೆಲುವು ಸಾಧಿಸಿದ್ದ ಶ್ರೀಕಂಠಯ್ಯ: ಹಿರೀಸಾವೆ ಅಣ್ಣಯ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ದಿ.ಎಚ್.ಸಿ.ಶ್ರೀಕಂಠಯ್ಯ 1972ರಲ್ಲಿ ಪ್ರಜಾ ಸೋಸಿ ಯಲ್ ಪಾರ್ಟಿ (ಪಿಎಸ್ಪಿ) ಮೊದಲ ಬಾರಿಗೆ ಆಯ್ಕೆ ಯಾದರು. 1978ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಸತತವಾಗಿ ಎರಡು ಬಾರಿ ವಿಧಾನಸಭೆ ಪ್ರವೇಶ ಮಾಡಿದರು. 1994ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಸಿ.ಎಸ್.ಪುಟ್ಟೇಗೌಡರ ವಿರುದ್ಧ ಸೋಲು ಅನುಭವಿಸಿ, 1999ರಲ್ಲಿ ಪುಟ್ಟೇಗೌಡರ ವಿರುದ್ಧವೇ ಗೆಲವು ಸಾಧಿಸುವ ಮೂಲಕ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಎರಡು ದಶಕಗಳಿಂದಲೂ ಜೆಡಿಎಸ್ ಜಯಭೇರಿ: 1999ರ ಬಳಿಕ ಕಾಂಗ್ರೆಸ್ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. 2004 ರಿಂದಲೂ ಸತತ ನಾಲ್ಕು ಬಾರಿಯ ಚುನಾವಣೆಯಲ್ಲಿ ಯೂ ಜೆಡಿಎಸ್ ಅಭ್ಯರ್ಥಿಗಳೇ ಜಯ ಸಾಧಿಸುತ್ತಿದ್ದಾರೆ. ಅಂದಿನಿಂದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಿಲ್ಲ. ಆರು ತಿಂಗಳು ಮುಂಚಿತವಾಗಿ ಟಿಕೆಟ್ ಘೋಷಣೆ ಮಾಡಿದರೆ ಒಂದು ಹಂತದಲ್ಲಿ ಕ್ಷೇತ್ರವನ್ನು ಪುನರ್ ತೆಕ್ಕೆಗೆ ತೆಗೆದುಕೊಳ್ಳಲ್ಲು ಅನುಕೂಲ ಆಗಬಹುದು.
– ಶಾಮಸುಂದರ್ ಕೆ. ಅಣ್ಣೇನಹಳ್ಳಿ