ಚಿಕ್ಕೋಡಿ: ರಾಜ್ಯ-ದೇಶದಲ್ಲಿ ಡಬಲ್ ಇಂಜನ್ ಸರಕಾರ ಏನೂ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಬಿಜೆಪಿ ಸರಕಾರ ಕಿತ್ತು ಹಾಕಿ ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಚಿಕ್ಕೋಡಿ ನಗರದ ಆರ್‌ಡಿ ಕಾಲೇಜಿನ ಮೈದಾನದಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಪ್ರಕಾಶ ಹುಕ್ಕೇರಿ ಪರ ಭರ್ಜರಿ ಪ್ರಚಾರ ನಡೆಸಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತರಲು ಪಣ ಇದೆ. ಕಾರ್ಯಕರ್ತರು ಮನಸ್ಸು ಮಾಡಿ ಒಗ್ಗಟ್ಟಾಗಿ 150 ಸ್ಥಾನ ಗೆದ್ದು ಕೊಟ್ಟರೆ ಒಳ್ಳೆಯ ಸರಕಾರ ಕೊಡಲು ಸಾಧ್ಯವಾಗುತ್ತದೆ. ಅಲ್ಪ ಬಹುಮತ ಬಂದರೆ ಬಿಜೆಪಿಯವರು ಶಾಸಕರನ್ನು ಕಿಡ್ನಾಪ್ ಮಾಡುತ್ತಾರೆ. ಶಾಸಕರ ಮೇಲೆ ದಬ್ಬಾಳಕೆ ಮಾಡಿ ಸಿಬಿಐ,ಇಡಿ ಭಯ ತೋರಿಸಿ ಅನೇಕ ಶಾಸಕರನ್ನು ತೆಗೆದುಕೊಂಡು ಹೋಗಿದ್ದಾರೆ. ಮಹಾರಾಷ್ಟ್ರ, ಗೋವಾ, ಮಣಿಪೂರ ಮತ್ತು ಕರ್ನಾಟಕದಲ್ಲಿ ಶಾಸಕರನ್ನು ಖರೀದಿಸಿ ಅನ್ಯ ಮಾರ್ಗದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈ ಬಾರಿ ಅತಂತ್ರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕಿವಿ ಮಾತು ಹೇಳಿದರು.
ನಾನು 12 ರಲ್ಲಿ 11 ಚುನಾವಣೆ ಗೆದ್ದಿದ್ದೇನೆ. ಆದರೆ ಬಿಜೆಪಿ ಅನೇಕ ಸುಳ್ಳು ಹೇಳಿ ನನನ್ನು ಸೋಲಿಸಿದ್ದಾರೆ. ಬಿಜೆಪಿ ಅಭಿವೃದ್ಧಿ ಮಾಡೋದಿಲ್ಲ, ಬೇರೆದವರು ಮಾಡಿದ ಕೆಲಸವನ್ನು ನಾನು ಮಾಡಿದ್ದೇನೆಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜ್ಯದಲ್ಲಿ 40 ರಷ್ಟು ಭ್ರಷ್ಟಾಚಾರ ಸರಕಾರವಾಗಿದೆ. ಗುತ್ತಿಗೆದಾರ ಸಂಘ ಪ್ರಧಾನಿ. ರಾಷ್ಟ್ರಪತಿ. ಲೋಕಾಯುಕ್ತಕ್ಕೆ ಪತ್ರ ಬರೆದಿದ್ದರೂ ಪ್ರಧಾನಿ ಕ್ರಮ ತೆಗೆದುಕೊಳ್ಳಲಿಲ್ಲ. ಭ್ರಷ್ಟಾಚಾರ ಮಾಡಿರುವ ನಾಯಕರನ್ನು ತೆಗೆದುಕೊಂಡು ಸಮರ್ಥಿಸಿಕೊಳ್ಳುವುದು ಪ್ರಧಾನಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ದೇಶದ ತುಂಬೆಲ್ಲ ಅಪ್ರಚಾರ ಮಾಡುವ ಬಿಜೆಪಿಯವರು ಕಣ್ಣು ತೆರೆದು ನೋಡಬೇಕು. ಇಡೀ ದೇಶದಲ್ಲಿ ಇರುವ ನದಿಗಳಿಗೆ ಆಣೆಕಟ್ಟುಗಳನ್ನು ನಿರ್ಮಾಣ ಮಾಡಿ ಜನರ ಹೊಟ್ಟೆಗೆ ಅಣ್ಣ ಕೊಟ್ಟಿದ್ದು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎನ್ನುವುದನ್ನು ಮರೆಯಬಾರದು ಎಂದರು.
ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ16 ರಷ್ಟು ಶಿಕ್ಷಣವಂತರಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿ ಶೇ 70 ರಷ್ಟು ಜನ ಶಿಕ್ಷಣ ಪಡೆದುಕೊಂಡಿದ್ದಾರೆ. ಆದರೂ ಕಾಂಗ್ರೆಸ್ ಏನು ಮಾಡಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆಂದು ಲೇವಡಿ ಮಾಡಿದರು. ರಾಜ್ಯದಲ್ಲಿ 25 ಲಕ್ಷ ಯುವಕರಿಗೆ ನೌಕರಿ ಇಲ್ಲ. ಈಗ 2.58 ಲಕ್ಷ ಹುದ್ದೆ ಖಾಲಿ ಇದೆ, ಆದರೂ ಭರ್ತಿ ಮಾಡಿಕೊಳ್ಳುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಲಂಚದ ಹಾವಳಿ ಜಾಸ್ತಿ ಆಗಿದೆ. ಪ್ರತಿಯೊಂದು ದಿನಸಿ ವಸ್ತುಗಳ ಬೆಲೆ ಏರಿಕೆ ಆಗಿದೆ. ಪ್ರತಿ ವಸ್ತುವಿನ ಮೇಲೆ ಜಿಎಸ್‌ಟಿ ಹಾಕಿ ಜನ ಸಂಕಷ್ಟ ಪಡುವ ಹಾಗೇ ಮಾಡಿದ್ದಾರೆ. ಹೇಗೆ ಜನ ಬದುಕಬೇಕು. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಭಾಗ್ಯಗಳ ಕೊಟ್ಟು ಬಡ ಜನರಿಗೆ ಅನುಕೂಲವಾಗಿತ್ತು. ಆ ಎಲ್ಲ ಯೋಜನೆಗಳನ್ನು ಮರು ಜಾರಿ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಪಕ್ಷ ಅಧಿಕಾರ ಹಿಡಿದ ತಕ್ಷಣಾ ಇಡೀ ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಮತಯಾಚಿಸಿದರು.
ವೇದಿಕೆ ಮೇಲೆ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ, ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ, ವೀರಕುಮಾರ ಪಾಟೀಲ, ಎ.ಬಿ.ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ರಾಯವಾಗ ಕಾಂಗ್ರೆಸ್ ಅಭ್ಯರ್ಥಿ ಮಹಾವೀರ ಮೋಹಿತೆಶ್ಯಾಮ ಘಾಟಗೆ, ಪುರಸಭೆ ಸದಸ್ಯರಾದ ರಾಮಾ ಮಾನೆ, ಸಾಭೀರ ಜಮಾದಾರ, ಗುಲಾಬ ಬಾಗವಾನ,ಶ್ಯಾಮ ರೇವಡೆ, ಮುದ್ದಸರ ಜಮಾದಾರ,ಎಚ್.ಎಸ್.ನಸಲಾಪೂರೆ,ಮೋಹನ ಜೋಶಿ, ಅನೀಲ ಪಾಟೀಲ ಮುಂತಾದವರು ಇದ್ದರು.