ಕಡೂರು : ಹಾಸನ ಲೋಕಸಭಾ ಕ್ಷೇತ್ರ ಎಂದರೆ ಈ ದೇಶಕ್ಕೆ ಪ್ರಧಾನಿಯನ್ನು ನೀಡಿದ ಕ್ಷೇತ್ರವಾಗಿದೆ.ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಗೆಲುವಿನ ರೂವಾರಿ ಒಕ್ಕಲಿಗ ಗೌಡ ಸಮುದಾಯದ ಬೀರೂರು ದೇವರಾಜು ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ರಾಜಕೀಯ ಕ್ಷೇತ್ರವು ಇತ್ತೀಚೆಗೆ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದು ಪ್ರಮುಖ ರಾಜಕೀಯ ಪಕ್ಷಗಳು ಸೋಲುಂಡಿವೆ. ಜಾತಿ,ದ್ವೇಷ ಮತ್ತು ವೈಯುಕ್ತಿಕ ಕಾರಣಗಳಿಂದ ದಿಡೀರ್ ಬದಲಾವಣೆಗಳನ್ನು ಕಾಣುತ್ತಿದ್ದೇವೆ.ಈ ಹಿನ್ನೆಲೆಯಲ್ಲಿ ಅನೇಕ ರಾಜಕೀಯ ಧುರೀಣರು ಗೆಲುವು ಸೋಲನ್ನು ಸಹ ಕಂಡಿರುವ ಉದಾಹರಣೆಗಳು ಸಹ ಕಂಡಿದ್ದೇವೆ.
ರಾಜ್ಯದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆಲ್ಲುವ ಕುದುರೆಯಾಗಿ ಓಡುತ್ತಿದ್ದು ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಗೆಲುವಿಗೆ ಪಣತೊಟ್ಟು ದುಡಿದ ಒಕ್ಕಲಿಗ ಸಮುದಾಯದ ಮತಗಳನ್ನು ಕಾಂಗ್ರೆಸ್ ತೆಕ್ಕೆಗೆ ತರುವಲ್ಲಿ ಕಾರ್ಯತಂತ್ರ ನಡೆಸಿದ ಒಕ್ಕಲಿಗರ ಮುಖಂಡ ಬೀರೂರು ದೇವರಾಜು ಇದೀಗ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದರೆ ಅಚ್ಚರಿ ಇಲ್ಲ !
ಬೀರೂರು ದೇವರಾಜು ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಆರ್.ಗುಂಡುರಾವ್ ಅವರ ಗರಡಿಯಲ್ಲಿ ಪಳಗಿದ್ದು ಕಳೆದ ೪೦ ವರ್ಷಗಳಿಂದ ರಾಜ್ಯ,ರಾಷ್ಟçದ ರಾಜಕೀಯವನ್ನು ಬಲ್ಲವರಾಗಿರುತ್ತಾರೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಪಾರ ಅಭಿಮಾನಿ ಮತದಾರರನ್ನು ಇಂದಿಗೂ ತಮ್ಮಲ್ಲಿಯೇ ಭದ್ರವಾಗಿ ಉಳಿಸಿಕೊಂಡು ಅವರ ಕಷ್ಟಗಳಿಗೆ ಸ್ಪಂಧಿಸುತ್ತಿದ್ದಾರೆ.ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಬಾರಿ ಚುನಾವಣೆಗೆ ನಿಂತು ಸೋಲು ಸಹ ಕಂಡಿರುವ ಇವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ತೊರೆದು ಅವರ ಗುರುಗಳಾದ ಎಸ್.ಎಂ.ಕೃಷ್ಣ ಅವರ ಆದೇಶದಂತೆ ಕಾಂಗ್ರೆಸ್ ಸೇರ್ಪಡೆಯಾಗಿ ಕೆ.ಎಸ್.ಆನಂದ್ ಗೆಲುವಿಗೆ ಶ್ರಮಿಸಿದರು.
ಹಾಸನ ಲೋಕಸಭಾ ಕ್ಷೇತ್ರವು ಬಹುತೇಕ ಒಕ್ಕಲಿಗರ ಪಾರುಪಥ್ಯ ಹೊಂದಿದೆ. ಇಲ್ಲಿ ಗೆದ್ದಿರುವ ಅಭ್ಯರ್ಥಿಗಳು ಹೆಚ್ಚಾಗಿ ಒಕ್ಕಲಿಗರೆ ಆಗಿದ್ದಾರೆ. ಬೀರೂರು ದೇವರಾಜು ಅವರು ಒಕ್ಕಲಿಗರಾಗಿದ್ದು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಹಾಗೂ ಕಾಂಗ್ರೆಸ್‌ಗೆ ಪರಿಶಿಷ್ಟ,ಅಲ್ಪಸಂಖ್ಯಾತ ಮತಗಳು ಸಹ ಬರುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಈಗಾಗಲೇ ಹಾಸನ,ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಬೀರೂರು ದೇವರಾಜು ಅವರ ಹೆಸರು ಹೆಚ್ಚಿಗೆ ಪ್ರಸ್ತಾಪವಾಗುತ್ತಿದ್ದು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲವಾಗಿರುವ ಜೆಡಿಎಸ್ ಪಕ್ಷವನ್ನು ಎದುರಿಸಲು ಕಾಂಗ್ರೆಸ್ ರಾಷ್ಟç ಮತ್ತು ರಾಜ್ಯ ನಾಯಕರು ದೇವರಾಜು ಅವರನ್ನು ಒಪ್ಪುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.ಅದರಲ್ಲಿಯೂ ಕಡೂರು ವಿಧಾನಸಭಾ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳಪಡುವುದರಿಂದ ಇಲ್ಲಿನ ಮತದಾರರು ದೇವರಾಜು ಅವರಿಗೆ ಅವಕಾಶ ಕೊಟ್ಟು ನೋಡೋಣ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ.