ಬೆಂಗಳೂರು: ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನದಡಿ ರಾಜ್ಯ ಸರಕಾರದ ನಾಲ್ಕೂವರೆ ವರ್ಷದ ಸಾಧನೆಗಳ ಕಿರುಹೊತ್ತಿಗೆಯನ್ನು ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಪ್ರತಿ ಮನೆಗೆ ತಲುಪಿಸುವ ಹೊಣೆಗಾರಿಕೆ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ನೀಡಲಾಗಿದೆ. ಸೆ.23 ರಿಂದ ಅ.15 ರವರೆಗೆ ನಡೆಯಲಿರುವ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನದಡಿ, ಬೂತ್ ಮಟ್ಟದ ತಂಡದ ಜತೆ ಸಮನ್ವಯತೆ ಸಾಧಿಸಿ ಸರಕಾರದ ಸಾಧನೆ ಜನರಿಗೆ ತಿಳಿಸುವ ಕಿರುಹೊತ್ತಿಗೆ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪುವಂತೆ ನೋಡಿ ಕೊಳ್ಳುವ ಹೊಣೆಗಾರಿಕೆ ವಹಿಸಲಾಗಿದೆ. ಜತೆಗೆ ಏನೇನು ಮಾಡಬೇಕು ಹಾಗೂ ಹೇಗೆ ಮಾಡಬೇಕು ಎಂಬುದರ ಬಗ್ಗೆ 11 ಪ್ರಶ್ನೆಗಳ ಪ್ರಶ್ನಾವಳಿ ಸಹ ನೀಡಲಾಗಿದೆ. ಅದನ್ನು ಸಾರ್ವಜನಿಕರಿಂದಲೇ ಭರ್ತಿ ಮಾಡಿಸಿ ಕೊಡಬೇಕಿದೆ.
ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಪ್ರತಿ ಹಂತದಲ್ಲೂ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಪದಾಧಿ ಕಾರಿಗಳು, ಜಿಲ್ಲಾಧ್ಯಕ್ಷರಿಗೆ ತಾಕೀತು ಮಾಡಲಾಯಿತು.
ರಾಜ್ಯದ 55 ಸಾವಿರ ಬೂತ್ ಸಮಿತಿಯ ಆರೂವರೆ ಲಕ್ಷ ಸದಸ್ಯರಿಗೆ ಇದಕ್ಕಾಗಿಯೇ ಗುರುತಿನ ಚೀಟಿ ಸಹ ನೀಡಲಾಗುವುದು. ಪ್ರತಿ ಬೂತ್ ಸಮಿತಿಯಲ್ಲಿರುವ 10 ಜನರ ತಂಡ ಪ್ರತಿ ಮನೆ ಮನೆಗೆ ತೆರಳಿ ಸರಕಾರದ ಸಾಧನೆಯ ಕಿರುಹೊತ್ತಿಗೆ ವಿತರಿಸಬೇಕು. ಜತೆಗೆ ಜನರಿಗೆ ಸರಕಾರದ ಸಾಧನೆ ಮನವರಿಕೆ ಮಾಡಿ ಕೊಡಬೇಕು. ಪ್ರತಿಪಕ್ಷಗಳು ರಾಜಕೀಯ ಕಾರಣಕ್ಕೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ ಎಂಬುದನ್ನೂ ಅರ್ಥಮಾಡಿಸಬೇಕು ಎಂದು ಸಭೆಯಲ್ಲಿ ಡಾ|ಜಿ.ಪರಮೇಶ್ವರ್ ಸೂಚಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್. ಪಾಟೀಲ್, ದಿನೇಶ್‌ಗುಂಡೂ ರಾವ್ ಉಪಸ್ಥಿತರಿದ್ದರು.
ಪ್ರಶ್ನಾವಳಿಯಲ್ಲಿ ಏನಿದೆ?
ಕ್ಷೇತ್ರದ ಹೆಸರು, ಬೂತ್ ಸಂಖ್ಯೆ, ಮನೆಯ ಸಂಖ್ಯೆ, ಮನೆಯ ಯಜಮಾನರ ಹೆಸರು, ದೂರವಾಣಿ ಸಂಖ್ಯೆ, ಕುಟುಂಬ ಸದಸ್ಯರ ಸಂಖ್ಯೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಬಗ್ಗೆ, ಉದ್ಯೋಗ, ಸಮುದಾಯ, ಸರಕಾರದ ಸವಲತ್ತು ತಲುಪಿರುವ ಬಗ್ಗೆ ಮಾಹಿತಿ, ಬೆಂಬಲಿಸುವ ಪಕ್ಷದ ಹೆಸರು ಸಮೇತ ಭರ್ತಿ ಮಾಡಬೇಕಿದೆ.