ಆಳಂದ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಮುಖಂಡರು ಜನರ ಸಮಸ್ಯೆಗಳಿಗೆ ಸ್ಪಂದಿಸದೆ, ಒಂದಡೆ ಸಾಧನಾ ಸಮಾವೇಶ, ಇನ್ನೊಂದಡೆ ಪರಿವರ್ತನಾ ಯಾತ್ರೆ ಮೂಲಕ ಆರೋಪ ಪತ್ಯಾರೋಪದಿಂದ ಟೈಂಪಾಸ್ ರಾಜಕೀಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಸೂರ್ಯಕಾಂತ ಕೊರಳ್ಳಿ ಗಂಭೀರವಾಗಿ ಆರೋಪಿಸಿದರು. ಕವಲಗಾ ಗ್ರಾಮದಲ್ಲಿ ನಡೆದ ಜೆಡಿಎಸ್ ಬಹಿರಂಗ ಸಭೆಯಲ್ಲಿ ಇನ್ನಿತರ ಕಾರ್ಯಕರ್ತರು, ಸ್ವಾಮಿ ನವಜೀವನ ತರುಣ ಸಂಘದ ಪದಾಧಿಕಾರಿಗಳು ಜೆಡಿಎಸ್‌ಗೆ ಸೇರ್ಪಡೆಯಾದ ಪ್ರಯುಕ್ತ ಸ್ವಾಗತಿಸಿ ಅವರು ಮಾತನಾಡಿದರು.
ನಿರುದ್ಯೋಗಿಗಳಿಗೆ ಉದ್ಯೋಗ, ರೈತರಿಗೆ ಉಚಿತ ಬಿತ್ತನೆ ಬೀಜ, ಗೊಬ್ಬರ, ಬೆಳೆಗೆ ಬೆಂಬಲ ಬೆಲೆ ನೀಡಿದರೆ ಸರ್ಕಾರದ ಯಾವ ಭಾಗ್ಯ ಬೇಡವಾಗಿದೆ. ಪ್ರಧಾನ ಮಂತ್ರಿಗಳ ಘೋಷಣೆಗಳೆ ದೊಡ್ಡದಾಗಿವೆ. ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪು ಹಣ ತಂದು ಬಡವರ ಖಾತೆಗಳಿಗೆ ತಲಾ 15 ಲಕ್ಷ ರೂ. ನೀಡುವೆ. ಸ್ವಚ್ಚ ಭಾರತ, ಡಿಜಿಟಲ್ ಇಂಡಿಯಾ, ಜನಧನ ಹೀಗೆ ಅನೇಕ ಯೋಜನೆಗಳ ಪ್ರಚಾರಕ್ಕಾದ ಖರ್ಚಿನಲ್ಲೇ ಎರಡು ಬಾರಿ ರೈತರ ಸಾಲ ಮನ್ನಾ ಮಾಡಬಹುದಾಗಿತ್ತು. ಅವರಂದುಕೊಂಡಂತೆ ಯಾವ ವರ್ಗದ ಜನರಿಗೆ ಘೋಷಣೆಗಳ ಸೌಲಭ್ಯ ತಲುಪಿಲ್ಲ ಎಂದು ಟೀಕಿಸಿದರು.
ರಾಜ್ಯ, ಕೇಂದ್ರ ಸರ್ಕಾರದ ಆಡಳಿತ ಬೇಸತ್ತಿರುವ ನಾಡಿನ ಜನರು, ಜನರಪರ, ರೈತ ಕಾಳಜಿಯುಳ್ಳ ಪ್ರಾದೇಶಿಕ ಪಕ್ಷ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಮತ್ತೂಮ್ಮೆ ಮುಖ್ಯಮಂತ್ರಿ ಮಾಡಲು ಛಲತೊಟ್ಟಿದ್ದಾರೆ. ಅಧಿ ಕಾರಕ್ಕೆ ಬಂದ ಕ್ಷಣದಲ್ಲೇ ರೈತರ ಎಲ್ಲ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿ ಸಾಲಮುಕ್ತ ಕರ್ನಾಟಕದಂತಹ ಅನೇಕ ಜನಪರ ಯೋಜನೆಗಳು ಜಾರಿಗೆ ತರಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಹಾಲಿ ಶಾಸಕರು, ಮಾಜಿ ಶಾಸಕರ ಅವಕಾಶವಾದ ಮತ್ತು ಒಪ್ಪಂದ ರಾಜಕಾರಣ, ಕುಟುಂಬ ರಾಜಕಾರಣ, ಸ್ವಾರ್ಥ ಸಾಧನೆ ಮಾಡಿ ಚುನಾವಣೆ ಬಂದಾಗೊಮ್ಮೆ ಮೂರನೇ ವ್ಯಕ್ತಿಗಳಿಗೆ ಅವಕಾಶ ನೀಡದೆ, ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಅಧಿಕಾರಕ್ಕೆ ಬಂದಿದ್ದಾರೆ. ಇವರ ಸುಳ್ಳು ಸುದ್ದಿಯಿಂದ ಡಾ| ಬಿ.ಜಿ. ಜವಳಿ, ಡಾ| ಕಲ್ಮಣಕರ, ಶೇಗಜಿ ಅನೇಕರಿಗೆ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದಾರೆ. ಈಗಲೂ ನನ ಬಗ್ಗೆ ಹಬ್ಬಿಸುತ್ತಿರುವ ಇವರ ಸುಳ್ಳು ಸುದ್ದಿಗೆ ಜನ ಮಾರುಹೋಗಲಾರರು.
ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಳ್ಳುವ ರಾಜಕಾರಣಿಯಲ್ಲ ಎಂದು ಸ್ಪಷ್ಟಪಡಿಸಿದ ಕೊರಳ್ಳಿ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಮಾಜಿ ಪ್ರಧಾನಿ ದೇವೇಗೌಡ, ಭಾವಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಲದಿಂದೊಂದಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಕ್ಷೇತ್ರದ ಸೇವೆ ಮಾಡಲು ಅವಕಾಶ ನೀಡಿದರೆ ಮಾದರಿ ಕ್ಷೇತ್ರವನ್ನಾಗಿ ಮಾಡಿತೋರಿಸುವೆ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಮುಖಂಡ ಬಿ.ವಿ.ಚಕ್ರವರ್ತಿ, ಚಂದ್ರಕಾಂತ ಘೋಡಕೆ, ವಿವೇಕಾನಂದ ದಗಡೆ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಅಲೆಯಿದೆ, ಕ್ಷೇತ್ರದಲ್ಲಿ ಜನರಪರ ಕಾಳಜಿ ಪ್ರತಿಯೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಕೊರಳ್ಳಿ ಗೆಲುವು ಖಚಿತವಾಗಿದೆ. ಹೆಚ್ಚಿನ ಮತಗಳನ್ನು ನೀಡಬೇಕು ಎಂದು ಹೇಳಿದರು.
ಹಿರಿಯ ಮುಖಂಡ ಸಿದ್ದರಾಮ ಪಾಟೀಲ ದಣ್ಣೂರ, ಬಸವರಾಜ ಬಟ್ಟರಕಿ, ಚಿದಾನಂದ ಸ್ವಾಮಿ, ಯಲ್ಲಾಲಿಂಗ ಜಿಡಗಾ ಇದ್ದರು. ಗುರುರಾಜ ಪಾಟೀಲ ನೇತೃತ್ವದಲ್ಲಿ ಸಂತೋಷ ಸಲಗರ, ಶಿವಾನಂದ ದೇಶಮುಖ, ಶ್ರೀಶೈಲ ಸಲಗರ ಅನೇಕರು ಜೆಡಿಎಸ್ ಗೆ ಸೇರ್ಪಡೆಯಾದರು. ಸತೀಶ ಮಠಪತಿ ನಿರೂಪಿಸಿ ವಂದಿಸಿದರು.