Advertisement

ರಾಜಹಂಸಗಡದಲ್ಲಿ ಕಾಂಗ್ರೆಸ್‌-ಬಿಜೆಪಿ ಶಿವಾಜಿ ವಾರ್‌

12:19 AM Mar 02, 2023 | Team Udayavani |

ಬೆಳಗಾವಿ: ನಗರ ಹೊರವಲಯದ, ಸುಂದರ ಪ್ರವಾಸಿ ತಾಣವಾಗಿರುವ ರಾಜಹಂಸಗಡ ಈಗ ವೈಯಕ್ತಿಕ ಪ್ರತಿಷ್ಠೆಯ ರಾಜಕೀಯ ರಣಾಂಗಣವಾಗಿ ಬದಲಾಗಿದೆ. ಕೋಟೆ ಆವರಣದಲ್ಲಿನ ಅಭಿವೃದ್ಧಿ ಕಾರ್ಯ ಮತ್ತು ಶಿವಾಜಿ ಪ್ರತಿಮೆ ಸ್ಥಾಪನೆ ವಿಷಯ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.

Advertisement

ಸಮುದ್ರ ಮಟ್ಟದಿಂದ ಸುಮಾರು 2500 ಅಡಿ ಎತ್ತರದಲ್ಲಿರುವ ರಾಜ ಹಂಸಗಡ (ಯಳ್ಳೂರು ಕೋಟೆ) ಬೆಳಗಾವಿ ನಗರದಿಂದ ಸುಮಾರು 20 ಕಿ.ಮೀ. ದೂರವಿದೆ. ರಟ್ಟರ ಕಾಲದಲ್ಲಿ ನಿರ್ಮಾಣವಾದ ಈ ಕೋಟೆಯಲ್ಲಿ ಅನಂತರ ಪೇಶ್ವೆ, ಮರಾಠರು ಮತ್ತು ಹೊಯ್ಸಳರು ಹೋರಾಟ ಮಾಡಿದ್ದು ಇತಿಹಾಸ. ಇಂತಹ ಕೋಟೆಯಲ್ಲಿ ಈಗ ರಾಜಕೀಯ ಕದನ ಆರಂಭವಾಗಿದೆ.

ಈ ಕೋಟೆಯಲ್ಲಿ ಕರ್ನಾಟಕದ ಅತೀ ಎತ್ತರದ ಶಿವಾಜಿ ಪ್ರತಿಮೆಯನ್ನು ಸಿದ್ಧಪಡಿಸಲಾಗಿದ್ದು, ಇದರ ನೇತೃತ್ವವನ್ನು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕ ರ ವಹಿಸಿದ್ದರು. ಚುನಾವಣೆ ಸಮಯದಲ್ಲಿ ಇದರ ಲಾಭ ಮಾಡಿಕೊಳ್ಳಬೇಕು ಎಂದು ಶಾಸಕರು ಬಯಕೆ ವ್ಯಕ್ತಪಡಿಸಿ ಶಿವಾಜಿ ಪ್ರತಿಮೆಯ ಅನಾವರಣಕ್ಕೆ ಮುಂದಾಗಿರುವ ಬೆನ್ನಲ್ಲೇ, ಸರಕಾರ ಎಚ್ಚೆತ್ತುಕೊಂಡು ಮಾ.2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಅನಾವರಣಗೊಳಿಸಲು ಸಜ್ಜಾಗಿದೆ. ಇನ್ನೊಂದೆಡೆ, ಸರಕಾರದ ಕಾರ್ಯಕ್ರಮಕ್ಕೆ ಪ್ರತಿ ಯಾಗಿ ಮಾ.5ರಂದು ಪ್ರತ್ಯೇಕ ಕಾರ್ಯಕ್ರಮ ಮಾಡಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ನಿರ್ಧರಿಸಿದ್ದಾರೆ.
ಕಾರ್ಯಕ್ರಮಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಪ್ರಮುಖ ನಾಯಕರನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ.

ಯಾವತ್ತೂ ರಾಜ್ಯದ ಗಮನಸೆಳೆಯದೆ ಇದ್ದ ಈ ಕೋಟೆ ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಇಡೀ ರಾಜ್ಯದ ಗಮನ ಸೆಳೆದಿದೆ. ಅಷ್ಟೇ ಏಕೆ, ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಮಧ್ಯೆ ಏಕವಚನದ ಕೀಳುಮಟ್ಟದ ಮಾತಿನ ಸಮರಕ್ಕೂ ಕಾರಣವಾಗಿದೆ. ಚುನಾವಣೆ ಸಮೀಪಿಸುತ್ತಿರುವಂತೆ ಜಿಲ್ಲೆಯ ಕೆಲ ರಾಜಕಾರಣಿಗಳಿಗೆ ರಾಜಹಂಸಗಡದ ಬಗ್ಗೆ ಎಲ್ಲಿಲ್ಲದ ಪ್ರೀತಿ ಕಾಣಿಸಿಕೊಂಡಿದೆ. ಕೋಟೆ ಅಭಿವೃದ್ಧಿ ಮಾಡಿದವರು ನಾವು. ಸರಕಾರದಿಂದ ಇದಕ್ಕೆ ದುಡ್ಡು ತಂದವರು ನಾವು ಎಂದು ಅದರ ಶ್ರೇಯಸ್ಸು ಪಡೆದುಕೊಳ್ಳಲು ಪೈಪೋಟಿಯ ಮೇಲೆ ಮುಂದಾಗಿದ್ದಾರೆ. ಶ್ರೇಯಸ್ಸಿನ ಈ ಪೈಪೋಟಿಯಲ್ಲಿ ಆರೋಪಗಳು ಶಿಸ್ತಿನ ಲಕ್ಷ್ಮಣ ರೇಖೆ ದಾಟಿವೆ.

ರೆಡ್ಡಿ 5 ಕೋಟಿ ಕೊಟ್ಟಿದ್ದರು: ಈ ಹಿಂದೆ ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಸಂಜಯ ಪಾಟೀಲ ಆಗ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮೇಲೆ ಒತ್ತಡ ಹಾಕಿ ರಾಜ ಹಂಸಗಡ ಕೋಟೆ ಪ್ರದೇಶದ ಅಭಿವೃದ್ಧಿಗೆ ಮುನ್ನುಡಿ ಹಾಕಿ ದ್ದರು. ಈ ಪ್ರದೇಶವನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಲು ಆಗಿನ ಸರಕಾರ ಐದು ಕೋಟಿ ಮಂಜೂರು ಮಾಡಿತ್ತು. ಹತ್ತಾರು ಅಭಿವೃದ್ಧಿ ಕಾರ್ಯಗಳಿಂದ ರಾಜಹಂಸಗಡಕ್ಕೆ ಹೊಸ ರೂಪ ಸಹ ಬಂದಿತ್ತು.

Advertisement

ಅನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಯಾಗಿ ಬಂದ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕ ರ ಕೋಟೆಯ ಅಭಿವೃದ್ಧಿಗೆ ಮೂರು ಕೋಟಿ ಮಂಜೂರು ಮಾಡಿಸಿ ಕರ್ನಾಟಕದಲ್ಲೇ ಅತೀ ಎತ್ತರವಾದ ಬೃಹತ್‌ ಶಿವಾಜಿ ಪ್ರತಿಮೆ ಸಿದ್ಧಪಡಿಸಿದರು. ದೇವಸ್ಥಾನ ನವೀಕರಿಸಿ ದರು. ಕೋಟೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರು. ಈಗ ಪ್ರತಿಮೆ ಅನಾವರಣಕ್ಕೆ ಮುಂದಾದರು.

ಜಾರಕಿಹೊಳಿ ಎಂಟ್ರಿ ಆಗಿದ್ದು ಏಕೆ?: ಶಾಸಕರ ಈ ನಡೆ ಸಹಜವಾಗಿಯೇ ವಿರೋಧಿಗಳ ಕೆಂಗಣ್ಣಿಗೆ ಗುರಿಯಾ ಯಿತು. ಅಲ್ಲಿಂದ ರಾಜಹಂಸಗಡದ ಅಭಿವೃದ್ಧಿಗೆ ರಾಜಕೀ ಯದ ಕೆಸರು ಅಂಟಿಕೊಂಡಿತು. ಶಿವಾಜಿ ಪ್ರತಿಮೆಯು ಬಿಜೆಪಿ ಮತ್ತು ಕಾಂಗ್ರೆಸ್‌ನ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು. ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಮಧ್ಯಪ್ರವೇಶದಿಂದ ಪ್ರತಿಮೆ ಅನಾವರಣ ವಿವಾದ ಮತ್ತಷ್ಟು ತಾರಕಕ್ಕೇರಿತು. ಸರಕಾರದ ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮ ನಡೆಯಬೇಕು ಎಂಬ ಒತ್ತಾಯಗಳು ಕೇಳಿಬಂದವು.

ರಾಜಹಂಸಗಡದ ಅಭಿವೃದ್ಧಿಗೆ ಸರಕಾರದಿಂದ ಅನು ದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಮಾಡಿಸಿದ್ದು ಗ್ರಾಮೀಣ ಶಾಸಕಿ ಹೆಬ್ಬಾಳ್ಕರ್ ರ. ಕೋಟೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದು ಬಿಜೆಪಿ ಸರಕಾರ. ಹೀಗಾಗಿ ಇದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next