Advertisement

ರಾಯಚೂರು-ಕೊಪ್ಪಳದಲ್ಲಿ ಕೈ-ಕಮಲ ಸೆಣಸು

01:27 PM Nov 10, 2021 | Team Udayavani |

ರಾಯಚೂರು: ಅವಿಭಜಿತ ರಾಯಚೂರು ಕೊಪ್ಪಳ ಜಿಲ್ಲೆ ಒಳಗೊಂಡ ವಿಧಾನ ಪರಿಷತ್‌ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ಈ ಬಾರಿಯೂ ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.

Advertisement

ಜಿಪಂ, ತಾಪಂ ಅವಧಿ ಮುಗಿದ ಕಾರಣ ಉಳಿದ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಚುನಾಯಿತರನ್ನು ಆಯ್ಕೆ ಮಾಡಬೇಕಿದೆ. ಆದರೆ, ಪಕ್ಷದ ಆಧಾರದಡಿ ಗೆಲುವು ಸಾಧಿಸದ ಗ್ರಾಪಂ ಸದಸ್ಯರು ಸೇರಿದಂತೆ 6300 ಮತದಾರರು ಈ ಬಾರಿ ಹಕ್ಕು ಚಲಾಯಿಸಲಿದ್ದು, ಇನ್ನೂ ಮುಂದೆ ರಾಜಕೀಯ ಚಟುವಟಿಕೆ ಗರಿದೆರುವ ನಿರೀಕ್ಷೆ ಇದೆ.

ಅವಿಭಜಿತ ರಾಯಚೂರು, ಕೊಪ್ಪಳ ಜಿಲ್ಲೆ ಒಳಗೊಂಡ ಒಟ್ಟು 12 ವಿಧಾನಸಭೆ ಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳು ಈ ಚುನಾವಣೆಯಲ್ಲಿ ಭಾಗಿಯಾಗಲಿವೆ. ನಗರಸಭೆ, ಪಪಂ, ಪುರಸಭೆ ಹಾಗೂ ಗ್ರಾಪಂ ಸದಸ್ಯರು ಮತದಾನಕ್ಕೆ ಅರ್ಹರಿರುವ ಕಾರಣ ಉಭಯ ಪಕ್ಷಗಳಲ್ಲಿ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.

ಹಿರಿಯರಿಂದಲೇ ನಿರಾಸಕ್ತಿ

ಈ ಮುಂಚೆ ಕಾಂಗ್ರೆಸ್‌ ಬಸವರಾಜ ಪಾಟೀಲ್‌ ಇಟಗಿ ಸದಸ್ಯರಾಗಿದ್ದರು. ಅವರ ಅವಧಿ ಮುಗಿದಿದ್ದು, ಈಗ ಯಾರು ಆಕಾಂಕ್ಷಿಗಳು ಎಂಬ ಕುತೂಹಲವಿದೆ. ಆದರೆ, ಈ ಬಾರಿ ಹಿರಿಯ ನಾಯಕರು ಈ ಸ್ಥಾನಕ್ಕೆ ಸ್ಪರ್ಧಿಸಲು ಹಿಂದೇಟು ಹಾಕುವ ಮೂಲಕ ನಿರುತ್ಸಾಹ ತೋರುತ್ತಿದ್ದಾರೆ. ಖುದ್ದು ಹಾಲಿ ಸದಸ್ಯರಾಗಿದ್ದ ಬಸವರಾಜ್‌ ಪಾಟೀಲ್‌ ಇಟಗಿಯವರೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅತ್ತ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ 300 ಮತಗಳ ಅಂತರದಿಂದ ಪರಾಭವಗೊಂಡಿದ್ದ ಸಿ.ಎಸ್‌. ಚಂದ್ರಶೇಖರ್‌ ಕೂಡ ಈಚೆಗೆ ಮಾಧ್ಯಮದವರ ಎದುರು ನಾನು ವಿಧಾನಸಭೆಗೆ ಸ್ಪರ್ಧಿಸುವೆ. ವಿಧಾನ ಪರಿಷತ್‌ ಚುನಾವಣೆಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರಿಂದ ಈ ಬಾರಿ ಚುನಾವಣೆ ಹೊಸಬರ ಹಣಾಹಣಿಯಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಇದನ್ನೂ ಓದಿ:ವಿಧಾನ ಪರಿಷತ್‌ ಟಿಕೆಟ್‌ ಪಡೆಯಲು ಜೋರಾಗಿದೆ ಕಸರತ್ತು

ಜಿಪಂ, ತಾಪಂ ಎಫೆಕ್ಟ್

ಪ್ರತಿ ಬಾರಿ ಜಿಪಂ, ತಾಪಂ ಸದಸ್ಯರೇ ಮುಂದೆ ಚುನಾವಣೆ ಮಾಡುತ್ತಿರುವ ಕಾರಣ ಚುನಾವಣೆ ಕಣ ರಂಗೇರುತ್ತಿತ್ತು. ಆದರೆ, ಈಗ ಅವರ ಅಧಿಕಾರ ಮುಗಿದ ಕಾರಣ ಅವರೂ ಈ ಚುನಾವಣೆಯಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಏನಿದ್ದರೂ ಗ್ರಾಪಂ ಮಟ್ಟದಲ್ಲೇ ಚುನಾವಣೆ ಅಬ್ಬರ ಜೋರಾಗುವ ನಿರೀಕ್ಷೆ ಇದೆ.ಜೆಡಿಎಸ್‌ ಈ ಬಾರಿಯೂ ತಟಸ್ಥ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಸ್ಪರ್ಧೆಯಿಂದ ದೂರ ಉಳಿಯುವ ಮೂಲಕ ತಟಸ್ಥ ನಿಲುವು ತೋರಿದ್ದ ಜೆಡಿಎಸ್‌ ಈ ಬಾರಿಯೂ ಅದೇ ಹಾದಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಪಕ್ಷದ ಮೂಲಗಳ ಪ್ರಕಾರ ಈವರೆಗೂ ಯಾರೂ ಪಕ್ಷದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿಲ್ಲ. ಪಕ್ಷದಿಂದಲೂ ಯಾರಿಗೆ ಟಿಕೆಟ್‌ ನೀಡಬೇಕು ಎಂದು ನಿರ್ಧರಿಸಿಲ್ಲ. ಕೆಲವೊಂದು ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಕಾಂಗ್ರೆಸ್‌, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದು, ಯಾರಿಗೆ ಬೆಂಬಲ ನೀಡುವುದೋ ನೋಡಬೇಕಿದೆ.

ಹೆಚ್ಚಿದ ಆಕಾಂಕ್ಷಿಗಳು

ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಹೊಸ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಆದರೆ, ಉಭಯ ಪಕ್ಷಗಳು ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಕಾಂಗ್ರೆಸ್‌ನಿಂದ ಟಿಕೆಟ್‌ ಬೇಕಾದರೂ ಒಂದು ಲಕ್ಷ ರೂ. ಠೇವಣಿ ಇಡಬೇಕು ಎಂಬ ಷರತ್ತು ಒಡ್ಡಿದ್ದು, ಐವರು ಆಕಾಂಕ್ಷಿಗಳು ಈಗಾಗಲೇ ಮುಂದೆ ಬಂದಿದ್ದಾರೆ. ಶರಣೇಗೌಡ ಬಯ್ನಾಪುರ, ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹಾಲಾಪುರ, ಬಸವರಾಜ್‌ ರೆಡ್ಡಿ, ಶರಣೆಗೌಡ ಮಸರಕಲ್‌ ಆಕಾಂಕ್ಷಿಗಳಾಗಿದ್ದಾರೆ. ಇವರೆಲ್ಲ ಬಹುತೇಕ ರಾಯಚೂರು ಜಿಲ್ಲೆಯವರೇ ಆಗಿದ್ದು, ಕೊಪ್ಪಳದಿಂದ ಯಾರೂ ಸ್ಪರ್ಧೆಗೆ ಮುಂದಾಗಿಲ್ಲ. ಮೂಲಗಳ ಪ್ರಕಾರ ಮುಂದುವರಿದ ಸಮುದಾಯದಿಂದ ಶರಣೇಗೌಡ ಬಯ್ನಾಪುರ, ಹಿಂದುಳಿದ ಸಮುದಾಯದಿಂದ ರಾಮಣ್ಣ ಇರಬಗೇರಾ ಅವರ ಹೆಸರನ್ನು ಅಂತಿಮಗೊಳಿಸಿದ್ದು, ಇಬ್ಬರಲ್ಲಿ ಒಬ್ಬರಿಗೆ ನೀಡಬಹುದು ಎನ್ನಲಾಗುತ್ತಿದೆ. ಇನ್ನೂ ಬಿಜೆಪಿಯಿಂದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್‌, ಕೊಪ್ಪಳದ ಸಿ.ಎಸ್‌. ಚಂದ್ರಶೇಖರ್‌, ಲಿಂಗಸೂಗೂರಿನ ಕೆ.ಎಂ.ಪಾಟೀಲ್‌, ವಿಶ್ವನಾಥ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಸಿ.ಎಸ್‌.ಚಂದ್ರಶೇಖರ್‌ ಅವರು ಸ್ಪರ್ಧೆಯಿಂದ ವಿಮುಖವಾಗುವುದಾಗಿ ತಿಳಿಸಿದ್ದರೂ ಪಕ್ಷ ಅವರನ್ನು ಕೈ ಬಿಟ್ಟಿಲ್ಲ. ಕೊನೆ ಕ್ಷಣದ ಬದಲಾವಣೆಯಲ್ಲಿ ಅಖಾಡದಲ್ಲಿ ಯಾರು ಉಳಿಯುವರೋ ಎಂಬುದನ್ನು ಕಾದು ನೋಡಬೇಕಿದೆ.

ರಾಯಚೂರು-ಕೊಪ್ಪಳ ಕ್ಷೇತ್ರದ ಎಂಎಲ್‌ಸಿ ಚುನಾವಣೆಗೆ ಈಗಾಗಲೇ ಐವರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ವರಿಷ್ಠರ ಜತೆ ಚರ್ಚಿಸಿದ ಒಬ್ಬರನ್ನು ಅಂತಿಮಗೊಳಿಸಲಾಗುವುದು. ಕೊಪ್ಪಳ ಜಿಲ್ಲೆಯಿಂದ ಯಾವುದೇ ಆಕಾಂಕ್ಷಿಗಳು ಸ್ಪರ್ಧೆಗೆ ಮುಂದೆ ಬಂದಿಲ್ಲ. -ಎನ್‌.ಎಸ್‌.ಬೋಸರಾಜ್‌, ಎಐಸಿಸಿ ಕಾರ್ಯದರ್ಶಿ

ಎಂಎಲ್‌ಸಿ ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡಿದ್ದು, ಶೀಘ್ರದಲ್ಲೇ ಸಿದ್ಧತೆ ಕುರಿತು ವರಿಷ್ಠರೊಂದಿಗೆ ಚರ್ಚೆ ನಡೆಸಲಾಗುವುದು. ಕೆಲ ಮುಖಂಡರು ಸ್ಪರ್ಧೆಗೆ ಆಸಕ್ತಿ ತೋರಿದ್ದು, ವರಿಷ್ಠರ ಗಮನಕ್ಕೆ ತರಲಾಗಿದೆ. ಇನ್ನೂ ಯಾರಾದರೂ ಸ್ಪರ್ಧೆಗೆ ಇಚ್ಛಿಸಿದಲ್ಲಿ ಪರಿಗಣಿಸಿ ಸೂಕ್ತ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು. -ರಮಾನಂದ ಯಾದವ್‌, ಬಿಜೆಪಿ ಜಿಲ್ಲಾಧ್ಯಕ್ಷ

ಜೆಡಿಎಸ್‌ನಿಂದ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಲು ಈವರೆಗೂ ಯಾರೂ ಮುಂದೆ ಬಂದಿಲ್ಲ. ಯಾರಾದರೂ ಆಸಕ್ತಿ ತೋರಿದರೆ ಟಿಕೆಟ್‌ ನೀಡುವ ವಿಚಾರದ ವರಿಷ್ಠರೊಂದಿಗೆ ಚರ್ಚಿಸಲಾಗುವುದು. ಆದರೆ, ಈವರೆಗೂ ಯಾರು ಸಂಪರ್ಕಿಸಿಲ್ಲ. -ವೆಂಕಟರಾವ್‌ ನಾಡಗೌಡ, ಸಿಂಧನೂರು ಜೆಡಿಎಸ್‌ ಶಾಸಕ

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next