ಹೊಸದಿಲ್ಲಿ: ಊಹಾಪೋಹಗಳಿಗೆ ತೆರೆ ಎಳೆದ ಕಾಂಗ್ರೆಸ್, ಬೆಂಗಳೂರಿನಲ್ಲಿ ನಡೆಯಲಿರುವ ಪ್ರಮುಖ ಪ್ರತಿಪಕ್ಷಗಳ ಸಭೆಗೂ ಮುನ್ನ ಸೇವಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಯ ವಿರುದ್ಧದ ಹೋರಾಟದಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಬೆಂಬಲಿಸಲು ನಿರ್ಧರಿಸಿದೆ.
ನಿರ್ಣಾಯಕ 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಮೈತ್ರಿ ಮಾಡಿಕೊಳ್ಳುವ ಉದ್ದೇಶದಿಂದ ನಾಳೆ ನಡೆಯಲಿರುವ ಪ್ರಮುಖ ಪ್ರತಿಪಕ್ಷಗಳ ಸಭೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದ ಅರವಿಂದ್ ಕೇಜ್ರಿವಾಲ್ ಅವರ ಪಕ್ಷಕ್ಕೆ ಇದೀಗ ದೊಡ್ಡ ಬೆಂಬಲ ಸಿಕ್ಕಿದಂತಾಗಿದೆ.
ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯನ್ನು ಬೆಂಬಲಿಸುವುದಿಲ್ಲ ಮತ್ತು ದೇಶದಲ್ಲಿ “ಫೆಡರಲಿಸಂ” ಅನ್ನು ಹಾಳುಮಾಡುವ ಕೇಂದ್ರ ಸರ್ಕಾರದ ಯಾವುದೇ ಪ್ರಯತ್ನವನ್ನು ವಿರೋಧಿಸುವುದಾಗಿ ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:Duleep Trophy 2023 ಮಿಂಚಿದ ವಿದ್ವತ್, ಸಾಯಿ ಕಿಶೋರ್: ದುಲೀಪ್ ಟ್ರೋಫಿ ಗೆದ್ದ ದಕ್ಷಿಣ ವಲಯ
ಆದರೆ, ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಆಪ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಪಾಟ್ನಾ ಸಭೆಯಲ್ಲಿ ಆಪ್ ದೆಹಲಿ ಸುಗ್ರೀವಾಜ್ಞೆ ವಿಷಯವನ್ನು ಕೈಗೆತ್ತಿಕೊಂಡ ರೀತಿ ದುರದೃಷ್ಟಕರ” ಎಂದು ಹೇಳಿದ್ದಾರೆ.
“ಅವರು (ಎಎಪಿ) ನಾಳೆ ಸಭೆ ಸೇರಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸುಗ್ರೀವಾಜ್ಞೆಗೆ (ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ಕುರಿತು), ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ. ನಾವು ಅದನ್ನು ಬೆಂಬಲಿಸಲು ಹೋಗುವುದಿಲ್ಲ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.