Advertisement

ಸಿಎಂ ಸಿದ್ದು ಬಣ ಕಾಂಗ್ರೆಸ್‌ನ ಬಿ ಟೀಂ

01:07 PM Apr 09, 2018 | |

ವಿಜಯಪುರ: ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ, ಜೆಡಿಎಸ್‌ ಪಕ್ಷ ಬಿಜೆಪಿ ಬಿ ಟೀಂ ಎಂದು ಸಿಎಂ ಸಿದ್ದರಾಮಯ್ಯ ಟೀಕೆ ಮಾಡುತ್ತಾರೆ. ಆದರೆ ಸ್ವಯಂತ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವಲಸೆ ಹೋಗಿದ್ದರಿಂದ ಆ ಖರ್ಗೆ, ಡಾ| ಪರಮೇಶ್ವರ ಅವರಂಥ ನಾಯಕರು ಮೂಲೆಗುಂಪಾದರು. ಹೀಗಾಗಿ ಸಿದ್ದರಾಮಯ್ಯ ಅವರು ತಮ್ಮದು ಕಾಂಗ್ರೆಸ್‌ ಬಿ ಟೀಂ ಎಂಬುವುದನ್ನು ಮರೆತಿದ್ದಾರೆ
ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

Advertisement

ರವಿವಾರ ನಗರದಲ್ಲಿ ನಾಗಠಾಣ ವಿಧಾನಸಭೆ ಕ್ಷೇತ್ರದ ಪಕ್ಷದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ರಾಮಕೃಷ್ಣ ಹೆಗಡೆ ಸರ್ಕಾರದ ಕೊಡುಗೆ. ಇದನ್ನು ಸಿದ್ದರಾಮಯ್ಯ ಸರ್ಕಾರ ತನ್ನದೆಂದು ಹೇಳಿಕೊಳ್ಳುತ್ತಿದೆ. ಮತ್ತೂಂದು ರಾಜ್ಯದಲ್ಲಿ ಅಭಿವೃದ್ಧಿ ಮಾಡದೇ ಜಾಹೀರಾತು ಸರ್ಕಾರ ನಡೆಸಿದ ಸಿದ್ದರಾಮಯ್ಯ ಸರ್ಕಾರ, ಇದಕ್ಕಾಗಿ 1 ಸಾವಿರ ಕೋಟಿ ರೂ. ಖರ್ಚು ಮಾಡಿದ್ದು ಅನುಮೋದಿಸಿದೆ, ಮಂಜೂರು ಮಾಡಿದೆ ಎಂಬುದನ್ನು ಹೇಳಲು ಬಳಸಿದೆಯೇ ಹೊರತು ಮಾಡಿದ ಸಾಧನೆ ಹೇಳಲು ಅಲ್ಲ. ಇನ್ನು ನೀರಾವರಿ ಸಚಿವ ಎಂ.ಬಿ. ಪಾಟೀಲ ಬಲಲೇಶ್ವರ ಕ್ಷೇತ್ರಕ್ಕೆ ಮಿತಿಗೊಂಡರೇ ಹೊರತು ಬೇರೆಡೆ ಚಿತ್ತ ಹರಿಸಲೇ ಇಲ್ಲ ಎಂದು ಲೇವಡಿ ಮಾಡಿದರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖ. ಹೊಂದಾಣಿಕೆ ರಾಜಕೀಯ ಈ ಪಕ್ಷಗಳ ಗುಟ್ಟು ಎಂದು ಜರಿದ ಅವರು, ಬಿಜೆಪಿ ಹಿಂದೂ ಎಂದು, ಕಾಂಗ್ರೆಸ್‌ ದಲಿತ-ಮುಸ್ಲಿಂ ಸಮುದಾಯಗಳ ಪರ ಎಂದು ಬಿಂಬಿಸಿಕೊಳ್ಳುತ್ತಲೇ ಈ ಸಮುದಾಯಗಳನ್ನು ತಮ್ಮ ರಾಜಕೀಯ ದಾಳ ಮಾಡಿಕೊಂಡವು. ಆದರೆ ಈ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ಇದೇ ಕಾರಣಕ್ಕೆ ರಾಜ್ಯದಲ್ಲಿ ಬಹುತೇಕ ಅಧಿಕಾರ ನಡೆಸಿ ಕಾಂಗ್ರೆಸ್‌ ಓರ್ವ ದಲಿತನನ್ನೂ ಸಿಎಂ ಮಾಡಲಿಲ್ಲ ಎಂಬುದಕ್ಕೆ ಇದೇ ಪ್ರಮುಖ ಕಾರಣ ಎಂದು
ವಿಶ್ಲೇಷಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬಂದರೂ ಅಭಿವೃದ್ಧಿ ಬಗ್ಗೆ ಚರ್ಚಿಸದೇ ಪರಸ್ಪರ ಕೆಸರು ಎರಚಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ರೈತರು ಮಾತ್ರವಲ್ಲ ನೂರಾರು ನೇಕಾರರೂ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗಾವಿ ಒಂದೇ ಜಿಲ್ಲೆಯಲ್ಲಿ 70 ನೇಕಾರರು ನೇಣಿಗೆ ಕೊರಳೊಡ್ಡಿದ್ದಾರೆ. ಇಷ್ಟಾದರೂ ಈ ಸರ್ಕಾರ ಕಣ್ತೆರೆದು ನೋಡಲಿಲ್ಲ. ಆದರೆ ನಮ್ಮ ಸರ್ಕಾರ
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಜ್ಯದ ರೈತರ ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರಿ ಎಲ್ಲ ಸಾಲ ಮಾಡಲಿದೆ. ಜೊತೆಗೆ ಕೃಷಿ ಸಬಲೀಕರಣಕ್ಕಾಗಿ ಇಸ್ರೇಲ್‌ ಮಾದರಿಯಲ್ಲಿ ಕೃಷಿ ಕಾರ್ಯಕ್ರಮಗಳನ್ನು ರೂಪಿಸಿ, ರೈತರ ಬೆವರಿನ ಶ್ರಮ ವ್ಯರ್ಥವಾಗದಂತೆ ಉತ್ಪನ್ನಗಳಿಗೆ ಮಾರುಕಟ್ಟೆ ಸೇರಿ ಹಲವು ಯೋಜನೆ ಜಾರಿಗೆ ತರಲಿದೆ ಎಂದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಿಎಸ್‌ಪಿ ರಾಜ್ಯ ಉಸ್ತುವಾರಿ ಗೋಪಿನಾಥ ಮಾತನಾಡಿದರು. ಜಿಲ್ಲೆಯ ಜೆಡಿಎಸ್‌ ಘೋಷಿತ ಅಭ್ಯರ್ಥಿಗಳಾದ ನಾಗಠಾಣ-ದೇವಾನಂದ ಚವ್ಹಾಣ, ಇಂಡಿ-ಬಿ.ಡಿ. ಪಾಟೀಲ, ಸಿಂದಗಿ-ಎಂ.ಸಿ. ಮನಗೂಳಿ, ಮುಖಂಡರಾದ ಎಂ.ಆರ್‌. ಪಾಟೀಲ ಬಳ್ಳೊಳ್ಳಿ, ರೇಷ್ಮಾ ಪಡೇಕನೂರ, ಎಲ್‌.ಎಲ್‌. ಉಸ್ತಾದ, ಚಂದ್ರಕಾಂತ ಹಿರೇಮಠ, ಎಸ್‌.ವಿ. ಪಾಟೀಲ, ಗೋವಿಂದ ಜೋಶಿ, ಕವಿತಾ ರಾಠೊಡ, ಮಲ್ಲಿಕಾರ್ಜುನ ಯಂಡಿಗೇರಿ ಸೇರಿದಂಥೆ ಇತರರು ವೇದಿಕೆ ಮೇಲಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next