ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಅವರಿಂದ ತೆರವಾಗಿರುವ ಪರಿಷತ್ ವಿಪಕ್ಷ ನಾಯಕ ಸ್ಥಾನವು ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಒಲಿದಿದೆ.
ವಿಪಕ್ಷ ನಾಯಕ ಸ್ಥಾನಕ್ಕಾಗಿ ಹರಿಪ್ರಸಾದ್, ಸಿ.ಎಂ.ಇಬ್ರಾಹಿಂ ಮತ್ತು ನಸೀರ್ ಅಹ್ಮದ್ ಅವರ ನಡುವೆ ಪೈಪೋಟಿ ಇತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಬುಧವಾರ ರಾತ್ರಿ ಆದೇಶ ಹೊರಡಿಸಿದೆ.
ಹರಿಪ್ರಸಾದ್ ಜತೆಯಲ್ಲಿ ವಿಪಕ್ಷ ಸಚೇತಕರಾಗಿ ಪ್ರಕಾಶ್ ರಾಠೊಡ್, ಉಪನಾಯಕ ಸ್ಥಾನಕ್ಕೆ ಕೆ.ಗೋವಿಂದ ರಾಜು ಅವರನ್ನು ನೇಮಿಸಲಾಗಿದೆ. ತತ್‌ಕ್ಷಣ ದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಯತ್ನಾಳ್ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ
ವಿಪಕ್ಷ ನಾಯಕ ಸ್ಥಾನ ಮುಸ್ಲಿಮರಿಗೆ ನೀಡಬೇಕೆಂಬ ಬೇಡಿಕೆ ಇದ್ದು, ಸಿ.ಎಂ. ಇಬ್ರಾಹಿಂ ಹಾಗೂ ನಸೀರ್ ಅಹ್ಮದ್ ನಡುವೆ ಪೈಪೋಟಿ ಉಂಟಾಗಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹರಿಪ್ರಸಾದ್ ಪರ ಒಲವು ತೋರಿದ್ದರು. ಈಡಿಗ ಸಮುದಾಯದ ಹರಿಪ್ರಸಾದರನ್ನು ನೇಮಿಸಿರುವ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಎನ್ನಲಾಗಿದೆ. ಈಗಾಗಲೇ ಒಕ್ಕಲಿಗ, ಲಿಂಗಾಯತ ಮತ್ತು ಹಿಂದುಳಿದ ವರ್ಗದ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ, ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ವಿಪಕ್ಷ ಸ್ಥಾನ ನೀಡಲಾಗಿದೆ.