ಹುಬ್ಬಳ್ಳಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಂದಾಜು 40ಸಾವಿರ ಕೋಟಿ ರೂ. ಹಗರಣ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೇಲ್ ಹಗರಣ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೆ.7ರಿಂದ 15ರೊಳಗೆ ಪಕ್ಷದ ವತಿಯಿಂದ ಬೀದಿಗಿಳಿದು ಹೋರಾಟ ಮಾಡಲಾಗುವುದು. 15ರ ನಂತರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ತೈಲ ಬೆಲೆ ದಿನೇ ದಿನೆ ಏರುತ್ತಿದೆ. ಕೂಡಲೇ ಇಂಧನದ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಬೇಕು. ಇಲ್ಲವಾದರೆ ಬಸ್, ರೈಲು ಪ್ರಯಾಣ ದರ ಸೇರಿದಂತೆ ಪ್ರತಿಯೊಂದರ ಬೆಲೆ ಹೆಚ್ಚುತ್ತದೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.
ರೂಪಾಯಿ ಮೌಲ್ಯ ಕುಸಿಯುತ್ತಿದೆ. ದೇಶದ ಆರ್ಥಿಕತೆ ಸಮರ್ಪಕ ನಿರ್ವಹಿಸುವಲ್ಲಿ ವಿತ್ತ ಸಚಿವ ಅರುಣ್ ಜೇಟಿÉ ಸಂಪೂರ್ಣ ವಿಫಲರಾಗಿದ್ದಾರೆ. ಪ್ರಧಾನಿ ಮೋದಿ ತಾವೇ ಎಲ್ಲವನ್ನೂ ನಿಯಂತ್ರಿಸಲು ಹೋಗಿ ದೇಶದಲ್ಲಿ ಆರ್ಥಿಕ ಅರಾಜಕತೆ ಸೃಷ್ಟಿಸಿದ್ದಾರೆ. ಅವರು ಕೇವಲ ಶೂಟು, ಬೂಟು ಹಾಕಿ ಭಾಷಣಕ್ಕೆ ಸೀಮಿತವಾಗಿದ್ದಾರೆ ಎಂದರು.
ಕಾಂಗ್ರೆಸ್‌ನಲ್ಲಿ ಯಾವುದೇ ಆಂತರಿಕ ಜಗಳವಿಲ್ಲ. ರಮೇಶ ಜಾರಕಿಹೊಳಿ ಮಾತನಾಡುವ ಶೈಲಿಯೇ ಹಾಗೆ ಎಂದರು. ಸೆಪ್ಟೆಂಬರ್‌ದೊಳಗೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಆಗ ಇನ್ನುಳಿದ ಆರು ಸ್ಥಾನಗಳನ್ನು ಭರ್ತಿ ಮಾಡಲಾಗುವುದು. ಉತ್ತರ ಕರ್ನಾಟಕಕ್ಕೆ ಹೆಚ್ಚು ಒತ್ತು ಕೊಡಲಾಗುವುದು. ಧಾರವಾಡ ಕ್ಷೇತ್ರ ಸೇರಿದಂತೆ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುವ ಕುರಿತು ರಣತಂತ್ರ ನಡೆದಿದೆ.
ಬಿಜೆಪಿಯ ದುರಾಡಳಿತ, ಕಾರ್ಯ ವೈಖರಿಯಿಂದ ಜನ ಬೇಸತ್ತಿದ್ದು, ಧಾರವಾಡ ಕ್ಷೇತ್ರ ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದರು.