ಚಿಕ್ಕಬಳ್ಳಾಪುರ: ಪೊಲೀಸರು ನಡೆಸಿದ ಲಾಠಿ ಪ್ರಹಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲಾ ಕೇಂದ್ರಕ್ಕೆ ಭಾನುವಾರ ಆಗಮಿಸಿದ್ದ ಕೆಪಿಸಿಸಿ ವೀಕ್ಷಕರ ತಂಡಕ್ಕೆ ಮನವಿ ಸಲ್ಲಿಸಿ ವಾಪಸ್ ಬರುತ್ತಿದ್ದ ವೇಳೆ ಘರ್ಷಣೆಯಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಆಗ ಲಾಠಿ ಏಟಿನಿಂದಾಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಇದೀಗ ಇಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ವಿ.ನವೀನ್ ಕಿರಣ್ ಬೆಂಬಲಿಗರು ಕೆಪಿಸಿಸಿ ವೀಕ್ಷಕರಿಗೆ ಮನವಿ ಸಲ್ಲಿಸಿ ವಾಪಸ್ ಬರುವಾಗ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ನಗರದ ಹಳೇ ಎಸ್ಪಿ ಕಚೇರಿ ವೃತ್ತದಲ್ಲಿ ಬೇಗ ಸ್ಥಳ ಖಾಲಿ ಮಾಡಿ, ಸಂಚಾರಕ್ಕೆ ತೆರವು ಮಾಡಿಕೊಡುವಂತೆ ಪೊಲೀಸರು ಸೂಚಿಸಿದರು. ಆಗ ನೂರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಆಗ ನಗರದ ಚಾಮರಾಜಪೇಟೆಯ ನಿವಾಸಿ ವಿನಯ್ (28) ಎಂಬುವನ ತಲೆಗೆ ಲಾಠಿ ಏಟಿನಿಂದ ಗಂಭೀರ ಗಾಯವಾಗಿದೆ. ಪ್ರಜ್ಞೆ ಕಳೆದುಕೊಂಡ ವಿನಯ್ ಅವರನ್ನು ತಕ್ಷಣ ನಗರದ ಬಿಬಿ ರಸ್ತೆಯಲ್ಲಿರುವ ಅನನ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೆ.ವಿ.ನವೀನ್ ಕಿರಣ್ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಅನನ್ಯ ಆಸ್ಪತ್ರೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಪ್ರಕ್ಷಬ್ಧ ವಾತಾವರಣ ನೆಲೆಸಿದೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಲಾಠಿ ಪ್ರಹಾರದಿಂದಲೇ ಮೃತ ಪಟ್ಟಿರುವ ಬಗ್ಗೆ ನಾವು ಸಿಸಿ ಕ್ಯಾಮರಾ ಫುಟೇಜ್‌ಗಳನ್ನು ವೀಕ್ಷಿಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಅನುಮತಿ ಪಡೆಯದೇ ಮೆರವಣಿಗೆ ನಡೆಸಿದ್ದು ತಪ್ಪು. ಪೊಲೀಸರು ಎಷ್ಟೇ ಮನವಿ ಮಾಡಿದರೂ ರಸ್ತೆ ತೆರವು ಮಾಡಿಲ್ಲ. ಆದ್ದರಿಂದ ಗುಂಪುನ್ನು ಚದುರಿಸಿದ್ದಾರೆ. ಲಾಠಿ ಪ್ರಹಾರ ನಡೆಸಿಲ್ಲ.
– ಕಾರ್ತಿಕ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ