Advertisement

ಶಾಸಕರ ವಿರೋಧಿ ಅಲೆ ಕಾಂಗ್ರೆಸ್‌ಗೆ ವರ

03:20 PM Apr 03, 2018 | |

ರಾಯಚೂರು: ಹೊಸಬರಿಗೆ ಅವಕಾಶ ನೀಡುವ ಮೂಲಕ ಬದಲಾವಣೆ ಬಯಸಿದ ಗ್ರಾಮೀಣ ಕ್ಷೇತ್ರದ ಮತದಾರನಿಗೆ ಮತ್ತದೇ ನಿರಾಸೆ ಕಾಡಿದೆ. ಕಳೆದ ಐದು ವರ್ಷದಲ್ಲಿ ಯಾವುದೇ ಮಹತ್ವದ ಯೋಜನೆಗಳಾಗಲಿ, ಅಭಿವೃದ್ಧಿಯಾಗಲಿ ಆಗಿಲ್ಲ ಎನ್ನುವ ಆಕ್ರೋಶ ಜನರಲ್ಲಿದೆ. ಹೀಗಾಗಿ ಶಾಸಕರ ವಿರೋಧಿ ಅಲೆ ಶುರುವಾಗಿದೆ. ಹೆಚ್ಚಾಗಿ ವಲಸಿಗರಿಗೆ ಮಣೆ ಹಾಕುವ ಈ ಕ್ಷೇತ್ರ ಪುನರ್‌ ವಿಂಗಡಣೆಯಾದ ಮೇಲೆ ಒಮ್ಮೆ ಕಾಂಗ್ರೆಸ್‌, ಮತ್ತೂಮ್ಮೆ ಬಿಜೆಪಿ ಗೆದ್ದಿದೆ. ಈ ಬಾರಿ ಬಿಜೆಪಿ ಶಾಸಕ ತಿಪ್ಪರಾಜ ಹವಾಲ್ದಾರ ಮತ್ತೇ ಸ್ಪರ್ಧಿಸುತ್ತಿದ್ದು, ಪ್ರಬಲ ಎದುರಾಳಿಯ ಹುಡುಕಾಟದಲ್ಲಿವೆ ಕಾಂಗ್ರೆಸ್‌, ಜೆಡಿಎಸ್‌. ಏತನ್ಮಧ್ಯ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಶಾಸಕರು ವಿಫಲವಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ ಎಂಬ ಆರೋಪ ಹೆಚ್ಚಾಗಿ ಕೇಳಿ ಬರುತ್ತಿವೆ.

Advertisement

ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಅದಕ್ಕಾಗಿ ಶಾಶ್ವತ ಯೋಜನೆ
ರೂಪಿಸಿಲ್ಲ. ಇನ್ನು ರಸ್ತೆ, ಸಾರಿಗೆ, ಶೌಚಗೃಹಗಳು ಸೇರಿ ಯಾವೊಂದು ಮೂಲ ಸೌಲಭ್ಯಗಳಿಲ್ಲದೇ ಜನ ಹಿಂದುಳಿಯುವಂತಾಗಿದೆ. ಬಯಲು ಶೌಚ ಮುಕ್ತ ಕ್ರಾಂತಿ ಸಂಪೂರ್ಣ ವಿಫಲಗೊಂಡಿದೆ.

ರೈತರಿಗಿಲ್ಲ ನೀರು, ವಿದ್ಯುತ್‌.!: ಟೇಲೆಂಡ್‌ ಭಾಗವಾದ್ದರಿಂದ ರೈತರಿಗೆ ನೀರು ಸಿಗದೆ ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು. ಆದರೆ, ತಾತ್ಕಾಲಿಕ ಪರಿಹಾರ ಕಲ್ಪಿಸಲು ಹೋರಾಟ ಶಾಸಕರು ಮಾಡಿದ್ದರಾದರೂ ಅವು ನಿರೀಕ್ಷಿತ ಫಲ ಕೊಟ್ಟಿಲ್ಲ. ಇನ್ನು ನಿರಂತರ ವಿದ್ಯುತ್‌ಗಾಗಿ ಪಾದಯಾತ್ರೆ ಮಾಡಿ ಗಮನ ಸೆಳೆದರು. ಆ ವೇಳೆ ವಿಧಾನಸಭೆ ಸದನ ನಡೆಯುತ್ತಿತ್ತು. ಇಲ್ಲಿ ಮಾಡುವ ಹೋರಾಟ ಅಲ್ಲಿಯಾದರೂ ಮಾಡಿದ್ದರೆ ಹೋರಾಟಕ್ಕೊಂದು ಅರ್ಥ ಸಿಗುತ್ತಿತ್ತು ಎಂಬ ಟೀಕೆಗಳು ಕೇಳಿ ಬಂದವು.

 ಅಧಿಕಾರ ದರ್ಪದ ಆರೋಪ: ಶಾಸಕರ ವಿರುದ್ಧ ಮತ್ತಷ್ಟು ಆರೋಪಗಳು ಕೇಳಿ ಬಂದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಹಿಂದೆ ವಿದ್ಯುತ್‌ ಬಿಲ್‌ ಸಂಗ್ರಹಕ್ಕೆ ತೆರಳಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಜೆಸ್ಕಾಂ ಸಿಬ್ಬಂದಿ ಹೋರಾಟ ಮಾಡಿದ್ದರು. ಅಲ್ಲದೇ, ಯರಗೇರಾ ಠಾಣೆ ಸಿಪಿಐ ವಿರುದ್ಧವೇ ಶಾಸಕರು ಎಸ್‌ಪಿಗೆ ದೂರು ನೀಡಿದ್ದರು. ಅದರ ಜತೆಗೆ ಮನೆಗೆ ತೆರಳಿದರೆ ಶಾಸಕರು ಕೈಗೆ ಸಿಗುವುದಿಲ್ಲ. ಯಾವಾಗಲೂ ಹೊರಗೆ ಹೋಗಿದ್ದಾರೆ ಎಂಬ ಸಿದ್ಧ ಉತ್ತರ ಸಿಗುತ್ತಿತ್ತು ಎಂದು ಆರೋಪಿಸುತ್ತಾರೆ ಕ್ಷೇತ್ರದ ಜನ.

ಹೋರಾಟ ದಿಂದ ಸದ್ದು: ತಾಲೂಕಿಗೆ ನಿರಂತರ ವಿದ್ಯುತ್‌ ಪೂರೈಸಬೇಕು ಎನ್ನುವ ವಿಚಾರವಾಗಿ ಶಾಸಕರು ಮಾಡಿದ ಹೋರಾಟ ಗಮನಾರ್ಹ. ಮೊದಲ ಬಾರಿಗೆ ಆರ್‌ ಟಿಪಿಎಸ್‌ ಎದುರೇ ಧರಣಿ ನಡೆಸುವ ಮೂಲಕ ಗಮನ ಸೆಳೆದರು. ನಂತರ ಬೇಡಿಕೆ ಈಡೇರದಿದ್ದಾಗ ನಗರ ಶಾಸಕರೊಂದಿಗೆ ಗಾಂಧಿ ಜಯಂತಿಯಂದು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕೆಲ ತಿಂಗಳ ಹಿಂದೆ 40 ಕಿಮೀ ಪಾದಯಾತ್ರೆ ನಡೆಸುವ ಮೂಲಕ ಮಹತ್ವದ ಹೋರಾಟ ಕೈಗೊಂಡಿದ್ದು ಗಮನಾರ್ಹ. ಈ ಹೋರಾಟಕ್ಕೆ ಮಣಿದ ಸರ್ಕಾರ ರೈತರಿಗೆ 12 ಗಂಟೆ ನಿರಂತರ ವಿದ್ಯುತ್‌ ನೀಡಲು ಮೌಖೀಕ ಆದೇಶ ನೀಡಿತ್ತು. ಕೊನೆ ಭಾಗದ ರೈತರಿಗೆ ನೀರು ದಕ್ಕುತ್ತಿಲ್ಲ ಎಂದು ದೂರಿ ಶಾಸಕರು ಸಾತ್‌ ಮೈಲ್‌ ಬಳಿ ಸಂಚಾರ ತಡೆದು ಹೋರಾಟ ನಡೆಸಿ ಗಮನ ಸೆಳೆದರು. ಸ್ಥಳೀಯರಲ್ಲದ ಶಾಸಕರಿಂದ ಅಭಿವೃದ್ಧಿ ನಿರೀಕ್ಷಿಸುವುದೇ ಕಷ್ಟವಾಗಿದೆ. ಹೀಗಾಗಿ ವಲಸಿಗರಿಗೆ ಯಾವುದೇ ಪಕ್ಷಗಳು ಟಿಕೆಟ್‌ ನೀಡಬಾರದು ಎಂಬ ಕೂಗು ಹೆಚ್ಚಾಗುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಲೆಕ್ಕಾಚಾರದಲ್ಲಿ ತೊಡಗಿದ್ದು, ಯಾರಿಗೆ ಟಿಕೆಟ್‌ ನೀಡಬೇಕು ಎನ್ನುವ ಗೊಂದಲದಲ್ಲಿದೆ. ಕಳೆದ ಬಾರಿ ರಾಜಾ ರಾಯಪ್ಪ ನಾಯಕ ಕಡಿಮೆ ಅಂತರದಲ್ಲಿ ಸೋಲುಂಡಿದ್ದು, ಈ ಬಾರಿಯೂ ಅವರಿಗೇ ಟಿಕೆಟ್‌ ಕೊಡಬೇಕು ಎನ್ನುವ ಕೂಗಿದೆ. ಸತೀಶ ಜಾರಕಿಹೊಳಿ ಸಂಬಂಧಿ ರವಿ ಪಾಟೀಲ ಕೂಡ ಸಾಕಷ್ಟು ಕ್ಷೇತ್ರ ಸಂಚಾರ ಮಾಡಿದ್ದು, ಅವರೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇತ್ತ ಜೆಡಿಎಸ್‌ನಿಂದ ಜಿಪಂ ಸದಸ್ಯ ಕಾಸಿಂ ನಾಯಕ ಆಕಾಂಕ್ಷಿಯಾದರೂ ಟಿಕೆಟ್‌ ಅಧಿಕೃತಗೊಳಿಸಿಲ್ಲ. ಆದರೆ, ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದರೆ ರವಿ ಪಾಟೀಲ ಜೆಡಿಎಸ್‌ನಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

Advertisement

ಕ್ಷೇತ್ರದ ಬೆಸ್ಟ್‌ ಏನು?
ಕ್ಷೇತ್ರದಲ್ಲಿ ಒಂಭತ್ತು ಹೈಟೆಕ್‌ ಆಸ್ಪತ್ರೆಗಳನ್ನು ನಿರ್ಮಿಸಿದ್ದು ವಿಶೇಷ. ಪ್ರತಿ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ರಿಮ್ಸ್‌ ಅವಲಂಬಿಸುತ್ತಿದ್ದ ಜನರಿಗೆ ಇದರಿಂದ ಅನುಕೂಲವಾಗಿದೆ. ಅಲ್ಲದೇ ಸಾಕಷ್ಟು ಗ್ರಾಮಗಳಿಗೆ ಸಾರಿಗೆ ಸೌಲಭ್ಯಗಳಿಲ್ಲ. ಅಂಥ ಕಡೆಯಿಂದ ನಗರಕ್ಕೆ ಬಂದು ಚಿಕಿತ್ಸೆ ಪಡೆಯುವುದು ಕಷ್ಟದ ಕೆಲಸವಾಗಿತ್ತು. ಹೈಟೆಕ್‌ ಅಸ್ಪತ್ರೆಗಳಿಂದ ಜನರಿಗೆ ಅನುಕೂಲವಾಗಿದೆ.

 ಕ್ಷೇತ್ರದ ದೊಡ್ಡ ಸಮಸ್ಯೆ?
ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಿಸುವುದೇ ಕ್ಷೇತ್ರದ ದೊಡ್ಡ ಸಮಸ್ಯೆ. ಐಸಿಸಿ ಸಭೆಗಳನ್ನಾಧರಿಸಿ ರೈತರು ಭತ್ತ ನಾಟಿ ಮಾಡುತ್ತಾರೆ. ಆದರೆ, ಮೇಲ್ಭಾಗದಲ್ಲಿ ನೀರಳ್ಳತನಕ್ಕೆ ಕಡಿವಾಣ ಇಲ್ಲದ್ದರಿಂದ ಕೊನೆ ಭಾಗದ ರೈತರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಇದರಿಂದ ಲಕ್ಷಾಂತರ ಎಕರೆಯಲ್ಲಿ ಬಿತ್ತನೆ ಮಾಡಿದ ರೈತರು ನಷ್ಟದ ಭೀತಿ ಎದುರಿಸುವಂತಾಗಿರುತ್ತದೆ. ಪ್ರತಿ ವರ್ಷ ಬಿತ್ತನೆ ವೇಳೆ ಇದೇ ವಿಚಾರವಾಗಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಿದೆ. ತುಂಗಭದ್ರಾ, ಕೃಷ್ಣಾ ನದಿಗಳೆರಡು ಪಕ್ಕದಲ್ಲಿದ್ದರೂ ಒಂದು ಉತ್ತಮ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ. ಕೃಷಿಯಲ್ಲ ಬೇಸಿಗೆ ಬಂದರೆ ಕುಡಿಯಲೂ ಕೂಡ ನೀರಿನ ಸಮಸ್ಯೆ ಎದುರಾಗುತ್ತದೆ. ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಿದ್ದು, ಸಂಪರ್ಕ ಕಲ್ಪಿಸಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಬೇಡಿಕೆಯಿದೆ. ಆರ್‌ಒಗಳು ಕೆಟ್ಟು ನಿಂತು ನಿರುಪಯುಕ್ತವಾಗಿವೆ.  

ಶಾಸಕರು ಏನಂತಾರೆ?
ಈ ಹಿಂದೆ ಅಧಿಕಾರ ನಡೆಸಿದ ಯಾವ ಜನಪ್ರತಿನಿಧಿಯೂ ಮಾಡದಷ್ಟು ಕೆಲಸಗಳನ್ನು ಮಾಡಿದ್ದೇನೆ. ಐದು ವರ್ಷಗಳ
ಅಧಿಕಾರಾವಧಿ  ತೃಪ್ತಿ ತಂದಿದೆ. 9 ಹೈಟೆಕ್‌ ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಎನ್‌ ಆರ್‌ಬಿಸಿ ಮುಖ್ಯಕಾಲುವೆ 121 ಕಿ.ಮೀ. ಯಿಂದ 160 ಕಿ.ಮೀ.ವರೆಗೆ ವಿಸ್ತರಿಸಲು ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಇದರಿಂದ 1.20 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಶೇ.80ರಷ್ಟು ರಸ್ತೆಗಳ ಸುಧಾರಣೆ ಮಾಡಲಾಗಿದೆ. ವಿರೋಧ ಪಕ್ಷದಲ್ಲಿದ್ದುಕೊಂಡು ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಮಾಡಿದ್ದೇನೆ.
 ತಿಪ್ಪರಾಜ ಹವಾಲ್ದಾರ, ಬಿಜೆಪಿ ಶಾಸಕ

ಕ್ಷೇತ್ರ ವಿಶೇಷತೆ
ಎರಡನೇ ಕುಕ್ಕೆ ಎಂದೇ ಹೆಸರುವಾಸಿಯಾದ ಕಲ್ಮಲಾದಲ್ಲಿ ನಡೆಯುವ ಕರಿಯಪ್ಪ ತಾತನ ಜಾತ್ರೆ ವಿಶೇಷ. ಶ್ರಾವಣದಲ್ಲಿ ಸ್ವಾಮಿ ಜಾತ್ರೆ ನಡೆಯಲಿದೆ. ಒಂದು ತಿಂಗಳು ಪರ್ಯಂತ ಜಾತ್ರೆ ನಡೆಯುತ್ತದೆ. ಮನೆಯಲ್ಲಿ ಯಾವುದೇ ವಿಷಜಂತುಗಳು ಬರಬಾರದು ಎಂಬ ಕಾರಣಕ್ಕೆ ನಾನಾ ಭಾಗದ ಜನ ಬಂದು ದೇವರ ದರ್ಶನಾಶೀರ್ವಾದ ಪಡೆಯುತ್ತಾರೆ.

ಕಳೆದ ಬಾರಿ ಏನಾಗಿತ್ತು?
2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಮಧ್ಯ ನೇರ ಹಣಾಹಣಿ ಏರ್ಪಟ್ಟಿತ್ತು. ಕಾಂಗ್ರೆಸ್‌ ನಿಂದ ರಾಜಾ ರಾಯಪ್ಪ ನಾಯಕ, ಬಿಜೆಪಿಯಿಂದ ತಿಪ್ಪರಾಜ ಹವಾಲ್ದಾರ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ 2ನೇ ಸ್ಥಾನ, ಜೆಡಿಎಸ್‌ 3ನೇ ಸ್ಥಾನ ಪಡೆದಿತ್ತು
 
ಗ್ರಾಮೀಣ ಕ್ಷೇತ್ರದ ಶಾಸಕರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಕಳೆದ ಐದು ವರ್ಷಗಳಲ್ಲಿ ಯಾವೊಂದು ಯೋಜನೆ ನೀಡಿಲ್ಲ. ಸಮಸ್ಯೆ ಹೊತ್ತು ನಾವಾಗಿ ಮನೆವರೆಗೂ ಹೋದರೂ ಶಾಸಕರು ಕೈಗೆ ಸಿಗಲಿಲ್ಲ. ಜನರಿಗೆ ಉದ್ಯೋಗ ಸಿಗದೆ ಗುಳೆ ಹೋಗುವಂತಾಗಿದೆ. ಕಳೆದ ಚುನಾವಣೆಯಲ್ಲಿ ನಮ್ಮ ಗ್ರಾಮಕ್ಕೆ ಬಂದ ಶಾಸಕರು ಪುನಃ ಈ ಕಡೆ ಬಂದಿಲ್ಲ. 
 ಸುಧಾಕರ ಉಪ್ಪಾರ, ಗೋನಾಲ

ಶಾಸಕ ತಿಪ್ಪರಾಜ ಹವಾಲ್ದಾರ ಕಳೆದ ಚುನಾವಣೆ ಪೂರ್ವದಲ್ಲಿ ಆಗಮಿಸಿದ್ದಾಗ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಹರಿಸಿಯೇ ತೀರುವುದಾಗಿ ಹೇಳಿದ್ದರು. ಆದರೆ, ಈವರೆಗೂ ಆ ಕೆಲಸ ಆಗಿಲ್ಲ. ಗ್ರಾಮದಲ್ಲಿ ಆರ್‌ಒ ಪ್ಲಾಂಟ್‌ಗಳನ್ನಾಗಲಿ, ಸಿಸಿ ರಸ್ತೆಗಳನ್ನಾಗಲಿ, ಶೌಚಗೃಹಗಳನ್ನಾಗಲಿ ನಿರ್ಮಿಸಿಲ್ಲ.
 ಮಲ್ಲಿಕಾರ್ಜುನ ಗೌಡ, ಗೋನವಾರ

ಗ್ರಾಮೀಣ ಕ್ಷೇತ್ರದಲ್ಲಿ ಶಾಸಕರು ಸಮರ್ಪಕವಾದ ರಸ್ತೆಗಳನ್ನು ನಿರ್ಮಿಸಿಲ್ಲ. ಗಡಿ ಭಾಗದ ಹಳ್ಳಿಗಳ ಸ್ಥಿತಿ ಗಂಭೀರವಾಗಿದೆ.  ಹಳ್ಳಿಗಳಲ್ಲಿ ನೀರಿನ ಸ್ಥಿತಿ ಗಂಭೀರವಾಗಿದೆ. ನಾಲ್ಕು ಬಾರಿ ಶಂಕುಸ್ಥಾಪನೆ ನೆರವೇರಿಸಿದ ಸಿಸಿ ರಸ್ತೆಗಳ ಕೆಲಸ ಆರಂಭಿಸಿಲ್ಲ. ಚುನಾವಣೆ ಬಂದಾಗ ಕೆಲಸ ಮಾಡಲು ಮುಂದಾಗಿದ್ದಾರೆ. ಅಭಿವೃದ್ಧಿಯಲ್ಲಿ ಶಾಸಕರು ವಿಫಲರಾಗಿದ್ದಾರೆ. 
 ಲಕ್ಷ್ಮಣಗೌಡ, ಕಡಗಂದೊಡ್ಡಿ

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next