ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಶುಕ್ರವಾರ(ಅಕ್ಟೋಬರ್ 15) ವ್ಯಂಗ್ಯವಾಡಿದ್ದಾರೆ.
2020ರಲ್ಲಿ ಭಾರತ 94ನೇ ಸ್ಥಾನದಲ್ಲಿದ್ದು, 2021ರಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ. ಅಷ್ಟೇ ಅಲ್ಲ ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತಲೂ ಭಾರತ ಹಸಿವು ಸೂಚ್ಯಂಕದಲ್ಲಿ ಕೆಳಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ. ಜಾಗತಿಕ ಹಸಿವು ಸೂಚ್ಯಂಕದ ವರದಿ, ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಡತನ, ಹಸಿವನ್ನು ನಿರ್ಮೂಲನೆ ಮಾಡಿ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿಯನ್ನಾಗಿ ಮಾಡುವುದಾಗಿ ಹೇಳಿತ್ತು ಎಂದು ಸಿಬಲ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಚೀನಾ, ಬ್ರೆಜಿಲ್, ಕುವೈಟ್ ಸೇರಿದಂತೆ 18 ದೇಶಗಳು ಉನ್ನತ ಸ್ಥಾನ ಪಡೆದಿದೆ. 2020ರಲ್ಲಿ 107 ದೇಶಗಳ ಪೈಕಿ ಭಾರತ 94ನೇ ಸ್ಥಾನ ಪಡೆದಿತ್ತು. ಇದೀಗ 116 ದೇಶಗಳ ಪಟ್ಟಿಯಲ್ಲಿ ಭಾರತ 101ನೇ ಸ್ಥಾನ ಪಡೆದಿದೆ ಎಂದು ವರದಿ ಹೇಳಿದೆ.
ನೇಪಾಳ 76ನೇ ಸ್ಥಾನ, ಬಾಂಗ್ಲಾದೇಶ 76, ಮ್ಯಾನ್ಮಾರ್ 71 ಹಾಗೂ ಪಾಕಿಸ್ತಾನ 92ನೇ ಸ್ಥಾನ ಪಡೆದಿದ್ದು, ಈ ದೇಶಗಳು ಭಾರತಕ್ಕಿಂತ ಕಡಿಮೆ ಪ್ರಮಾಣದ ಹಸಿವಿನ ಸೂಚ್ಯಂಕ ಹೊಂದಿದೆ. ಈ ದೇಶಗಳಿಗೂ ಕೂಡಾ ಇದು ಎಚ್ಚರಿಕೆಯಾಗಿದೆ ಎಂದು ವರದಿ ತಿಳಿಸಿದೆ.