Advertisement

ಅಭಿನಂದನ ಭಾರತ: ಕೊನೆಗೂ ಬಿಡುಗಡೆ ಮಾಡಿದ ಪಾಕ್‌

12:30 AM Mar 02, 2019 | |

ಹೊಸದಿಲ್ಲಿ: ಭಾರತದ ವಾಯು ಸೇನೆಯ ವೀರಪುತ್ರ, ಮಿಗ್‌ 21 ಯುದ್ಧ ವಿಮಾನದ ಸಾರಥಿ, ದೇಶವಾಸಿಗಳ ಅಭಿಮಾನದ ಯೋಧ ಅಭಿನಂದನ್‌ ವರ್ಧಮಾನ್‌ ಅವರನ್ನು ನೆರೆಯ ಪಾಕಿಸ್ಥಾನವು ಕಾಯಿಸಿ, ಸತಾಯಿಸಿ ಕಡೆಗೂ ಶುಕ್ರವಾರ ರಾತ್ರಿ ವೇಳೆಗೆ ಬಿಡುಗಡೆ ಮಾಡಿದೆ. 58 ಗಂಟೆಗಳ ಕಾಲ ಪಾಕ್‌ ವಶದಲ್ಲಿದ್ದ ವರ್ಧಮಾನ್‌ ಅವರನ್ನು ನೋಡುತ್ತಿದ್ದಂತೆ ವಾಘಾ ಗಡಿಯ ಬಳಿ ನೆರೆದಿದ್ದ ಅಪಾರ ದೇಶವಾಸಿಗಳು, ಬಿಎಸ್‌ಎಫ್ ಮತ್ತು ಐಎಎಫ್ನ ಯೋಧರೂ ಸಂಭ್ರಮಾಚರಣೆ ನಡೆಸಿದರು.

Advertisement

ಶುಕ್ರವಾರ ಅಪರಾಹ್ನವೇ ವರ್ಧಮಾನ್‌ ಅವ ರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ ದಾಖಲೆಗಳ ಪರಿಶೀಲನೆ, ಇನ್ನಿತರ ನೆಪವೊಡ್ಡಿ ರಾತ್ರಿ 9.15ರ ವೇಳೆಗೆ ವಾಘಾ ಗಡಿಯ ಬಳಿಗೆ ಕರೆದುಕೊಂಡು ಬಂದಿತು. ಬಿಡುಗಡೆಗೂ ಮುನ್ನ, ತಾವು ಸಿಕ್ಕಿದ್ದು ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತಂತೆ ಪಾಕಿಸ್ಥಾನ ವೀಡಿಯೋ ಮಾಡಿಕೊಂಡಿದೆ.

ಹಸ್ತಾಂತರಕ್ಕೂ ಮುನ್ನ ಪಾಕಿಸ್ಥಾನ ನಡೆಸಿದ “ಡ್ರಾಮಾ’ಗಳು ಅಭಿನಂದನ್‌ ಭಾರತಕ್ಕೆ ಬರು ವುದು ತಡವಾಯಿತು. ಹಾಗಾಗಿ ಅಪರಾಹ್ನ 2 ಗಂಟೆಗೆ ಹಸ್ತಾಂತರಗೊಳ್ಳಲಿದ್ದಾರೆಂಬ ನಿರೀಕ್ಷೆ ಹುಸಿಯಾಯಿತು. ಅನಂತರ ಸಂಜೆ 5ಕ್ಕೆ ಮತ್ತು ರಾತ್ರಿ 9ಕ್ಕೆ ಮುಂದೂಡಲ್ಪಟ್ಟಿತು. ಅಂತಿಮವಾಗಿ ರಾತ್ರಿ 9.15ರ ಹೊತ್ತಿಗೆ ಅಭಿನಂದನ್‌ ಅವರನ್ನು ಅಟ್ಟಾರಿ-ವಾಘಾ ಗಡಿಯಲ್ಲಿನ ಉಭಯ ದೇಶಗಳ ಗೇಟ್‌ಗಳ ಬಳಿಗೆ ಶಸ್ತ್ರಸಜ್ಜಿತ ನಾಲ್ವರು ಪಾಕ್‌ ಸೈನಿಕರು ಕರೆತಂದರು. ರಾತ್ರಿ 9.20ರ ಸುಮಾರಿಗೆ ಭಾರತದ ಗೇಟ್‌ನ ಬಳಿ ನಿಂತು ಅಭಿನಂದನ್‌ ಅವರನ್ನು ಪಾಕಿಸ್ಥಾನದ ಸೈನಿಕರು, ಭಾರತದ ಸೈನ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು. 
ಅವರು ಕಾಲಿಟ್ಟ ಕೂಡಲೇ ಬೆಳಗ್ಗೆಯಿಂದ ಅಲ್ಲಿ ಕಾದು ಕುಳಿತಿದ್ದ ಭಾರತೀಯರು ಹರ್ಷೋದ್ಗಾರಗಳಿಂದ ಅವರನ್ನು ಸ್ವಾಗತಿದರು.

ಬತ್ತದ ಉತ್ಸಾಹ
ಅಭಿನಂದನ್‌ ಅವರನ್ನು ಭಾರತಕ್ಕೆ ಶುಕ್ರವಾರ ಹಸ್ತಾಂತರಿಸುವುದಾಗಿ ಗುರುವಾರವೇ ಪಾಕಿಸ್ಥಾನ ಪ್ರಕಟಿಸಿದ್ದರಿಂದ ಬೆಳ್ಳಂಬೆಳಗ್ಗೆಯೇ ವಾಘಾ-ಅಟ್ಟಾರಿ ಗಡಿಯಲ್ಲಿ ಹಲವಾರು ಜನ ಜಮಾಯಿಸಿದ್ದರು. ಇಡೀ ಪ್ರಾಂತ್ಯದಲ್ಲಿ ಹಬ್ಬ, ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. 

ಯುದ್ಧ ಕೈದಿ
ಅಭಿನಂದನ್‌ ವರ್ಧಮಾನ್‌ ಅವರನ್ನು “ಭಾರತದ ಯುದ್ಧ ಕೈದಿ’ ಎಂದೇ ಪಾಕ್‌ ಪರಿಗಣಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ಥಾನದ ವಿದೇಶಾಂಗ ಇಲಾಖೆ, ಭಾರತದ ಯುದ್ಧ ಕೈದಿ ಅಭಿನಂದನ್‌ ವರ್ಧಮಾನ್‌ ಅವರನ್ನು ರಿಲೀಸ್‌ ಮಾಡುತ್ತಿದ್ದೇವೆ ಎಂದಿದೆ. ವರ್ಧಮಾನ್‌ ಅವರನ್ನು ಬಿಡುಗಡೆ ಮಾಡುವ ಕೆಲವು ನಿಮಿಷಗಳ ಹಿಂದಷ್ಟೇ, ಈ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ವಶದಲ್ಲಿ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದೂ ಹೇಳಿದೆ.

Advertisement

ವೀಡಿಯೋ ಮಾಡಿಸಿಕೊಂಡ ಪಾಕ್‌
ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆಗೂ ಮುನ್ನ ಅವರಿಂದ ವೀಡಿಯೋವೊಂದನ್ನು ರೆಕಾರ್ಡ್‌ ಮಾಡಿಸಿಕೊಂಡು, ಅದನ್ನು ಪಾಕಿಸ್ಥಾನದ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ವಿವಾದಕ್ಕೀಡಾಗಿದೆ. ಒಂದು ನಿಮಿಷಕ್ಕೂ ಹೆಚ್ಚು ಅವಧಿಯ ಈ ರೆಕಾರ್ಡ್‌ ಮಾಡುವುದಕ್ಕಾಗಿಯೇ ಹಸ್ತಾಂತರ ವಿಳಂಬವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ವೀಡಿಯೋದಲ್ಲಿ ಆಕ್ಷೇಪಾರ್ಹ ವಿಷಯಗಳನ್ನೂ ಅವರಿಂದ ಹೇಳಿಸಲಾಗಿದೆ. ಪಾಕಿಸ್ಥಾನದ ಮೇಲೆ ದಾಳಿ ನಡೆಸುವುದಕ್ಕಾಗಿ ನಾನು ಗಡಿ ದಾಟಿ ಬಂದಿದ್ದೆ. ಆದರೆ ನನ್ನ ವಿಮಾನವನ್ನು ಹೊಡೆದುರುಳಿಸಲಾಯಿತು. ಸೇನೆಯ ಸಿಬ್ಬಂದಿ ನನ್ನನ್ನು ಜನರಿಂದ ಬಿಡಿಸಿದರು. ಪಾಕಿಸ್ಥಾನದ ಸೇನೆ ತುಂಬಾ ವೃತ್ತಿಪರವಾಗಿದೆ ಹಾಗೂ ನನಗೆ ಅವರ ವರ್ತನೆ ಮೆಚ್ಚುಗೆಯಾಗಿದೆ ಎಂದು ವೀಡಿಯೋದಲ್ಲಿ ಅವರಿಂದ ಹೇಳಿಸಲಾಗಿದೆ. ಅಲ್ಲದೆ ಭಾರತೀಯ ಮಾಧ್ಯಮಗಳ ವಿರುದ್ಧವೂ ಅವರಿಂದ ಹೇಳಿಕೆ ಪಡೆಯಲಾಗಿದೆ. ಅಲ್ಲದೆ ಈ ವೀಡಿಯೋವನ್ನು 15 ಕ್ಕೂ ಹೆಚ್ಚು ಕಡೆ ಎಡಿಟ್‌ ಮಾಡಿರುವುದು ಕಾಣಿಸುತ್ತದೆ.

ಅಭಿನಂದನ್‌  ವರ್ಧಮಾನ್‌ ಅವರಿಗೆ ಸ್ವಾಗತ, ನಿಮ್ಮ ಶೌರ್ಯದ ಬಗ್ಗೆ ದೇಶವೇ ಹೆಮ್ಮೆ ಪಡುತ್ತದೆ. ನಮ್ಮ ಸಶಸ್ತ್ರ ಪಡೆಯು 130 ಕೋಟಿ ಭಾರತೀಯರಿಗೆ ಸ್ಫೂರ್ತಿ.
 ಮೋದಿ, ಪ್ರಧಾನಿ

ತಾಯ್ನೆಲವನ್ನು ಸ್ಪರ್ಶಿಸು ತ್ತಿದ್ದಂತೆಯೇ ಅಭಿನಂದನ್‌, “ಗುಡ್‌ ಟು ಬಿ ಬ್ಯಾಕ್‌’ (ಸ್ವದೇಶಕ್ಕೆ ಮರಳಿದ್ದು ಸಂತಸ ತಂದಿದೆ) ಎಂದು ಉದ್ಗರಿಸಿದ್ದಾರೆ. ಸಚಿವೆ ನಿರ್ಮಲಾ, “ಜೈ ಹಿಂದ್‌’ ಎಂದು ಟ್ವೀಟಿಸಿದ್ದಾರೆ.

ಅಭಿನಂದನ್‌ ಭಾರತಕ್ಕೆ ಮರಳಿದ್ದು ಸಂತೋಷ ತಂದಿದೆ. ಅವರನ್ನು ಈಗ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯುತ್ತೇವೆ.
ಏರ್‌ ವೈಸ್‌ ಮಾರ್ಷಲ್‌ -ಆರ್‌.ಜಿ.ಕೆ.ಕಪೂರ್‌, ಐಎಎಫ್ ಉಪ ಮುಖ್ಯಸ್ಥ

ದೇಶದ ಹೀರೋ ಅಭಿನಂದನ್‌ಗೆ ನೀವು 3 ಸಾಲಿನಲ್ಲಿ ಅಭಿನಂದನೆ ಹೇಳಿ . ಹೆಸರು, ಊರು, ಭಾವಚಿತ್ರವಿರಲಿ.
ವಾಟ್ಸಾಪ್‌ ನಂಬರ್‌ 9964169554

Advertisement

Udayavani is now on Telegram. Click here to join our channel and stay updated with the latest news.

Next