Advertisement
65 ಸದಸ್ಯ ಬಲದ ಮೈಸೂರು ಮಹಾ ನಗರಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಎಸ್‌ಪಿ ಮೊದಲ ಬಾರಿಗೆ ಖಾತೆ ತೆರೆದಿದ್ದರೆ, ಐವರು ಪಕ್ಷೇತರರು ಜಯಗಳಿಸಿದ್ದಾರೆ. 22 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಬಿಜೆಪಿ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಕೈಗೆಟುಕದಂತಾಗಿದೆ.
Related Articles
Advertisement
ಫಲ ನೀಡದ ಟಾರ್ಗೆಟ್: ಈ ಬಾರಿ ಹೇಗಾದರೂ ಸರಿ ಪಾಲಿಕೆ ಅಧಿಕಾರ ಹಿಡಿಯಲೇಬೇಕು ಎಂಬ ಉದ್ದೇಶದಿಂದ ಬಿಜೆಪಿ ನಾಯಕರು ನಗರಪಾಲಿಕೆ ವ್ಯಾಪ್ತಿಗೆ ಬರುವ ನಗರದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಟಾರ್ಗೆಟ್-20 ಗುರಿ ಹಾಕಿಕೊಂಡು ಚುನಾವಣೆ ಎದುರಿಸಲಾಗಿತ್ತು. ಆದರೆ, ಹಾಲಿ ಸದಸ್ಯರಿಗೆ ಟಿಕೆಟ್ ನಿರಾಕರಿಸಿ, ವಲಸೆ ಬಂದವರಿಗೆ ಮಣೆ ಹಾಕಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದರೆ,
ಬಿಜೆಪಿಯ ರಾಜ್ಯಮಟ್ಟದ ನಾಯಕರ್ಯಾರೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಿದ್ದುದು ಟಾರ್ಗೆಟ್-20 ಗುರಿ ತಲುಪುವಲ್ಲಿ ಮುಗ್ಗರಿಸಿದೆ. ಜೆಡಿಎಸ್ ಅಭ್ಯರ್ಥಿಗಳ ಪರ ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಂದು ಪ್ರಚಾರ ನಡೆಸಿ ಮತಯಾಚನೆ ಮಾಡಿದರೆ, ಕಾಂಗ್ರೆಸ್ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಸಭೆಗಳನ್ನು ಮಾಡಿ ಕಾರ್ಯತಂತ್ರ ಹೆಣೆದಿದ್ದರು, ಜೊತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಮತಯಾಚನೆ ಮಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಬಿಎಸ್‌ಪಿಯ ಎನ್.ಮಹೇಶ್ ಅವರು ಸಹ ಪಾಲಿಕೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದು ಫಲ ನೀಡಿ ಖಾತೆ ತೆರೆಯುವಲ್ಲಿ ಸಫಲವಾದರೆ, ಕಳೆದ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಎಸ್‌ಡಿಪಿಐ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.