Advertisement
ಹಿರಿಯರಲ್ಲಿ ಕಂಡುಬರುವ ಮುಖ್ಯವಾದ ಹೃದಯ ಕಾಯಿಲೆಗಳಲ್ಲಿ ಅಧಿಕ ರಕ್ತದೊತ್ತಡ, ತೀವ್ರ ಹೃದಯಾ ಘಾತ, ಹೃದಯದ ಅಸಮರ್ಪಕ ಬಡಿತ, ಎದೆನೋವು ಇತ್ಯಾದಿಗಳಾದರೆ ಮಕ್ಕಳಲ್ಲಿ ಕಂಡುಬರುವ ಹೃದಯ ಕಾಯಿಲೆಗಳ ಲಕ್ಷಣಗಳು ಸಂಪೂರ್ಣವಾಗಿ ಬೇರೆಯೇ ಆಗಿರುತ್ತವೆ. ಸಾಮಾನ್ಯವಾಗಿ ಮಕ್ಕಳಲ್ಲಿ ಅಥವಾ ನವಜಾತ ಶಿಶುಗಳಲ್ಲಿ ಕಂಡುಬರುವ ಹೃದಯ ಕಾಯಿಲೆಗಳು ಹುಟ್ಟಿನಿಂದ ಬಂದಂಥವಾಗಿರುತ್ತವೆ. ತಾಯಿಯ ಗರ್ಭದಲ್ಲಿ ಇರುವಾಗಲೇ ಅಸಮರ್ಪಕ ಬೆಳವಣಿಗೆಯಿಂದಾಗಿ ಈ ಕಾಯಿಲೆಗಳು ಕಂಡುಬರುತ್ತವೆ. ಪ್ರತೀ ವರ್ಷ ಫೆಬ್ರವರಿ 7ರಿಂದ 14ರ ವರೆಗೆ ಹುಟ್ಟಿನಿಂದ ಬರುವ ಹೃದಯ ಕಾಯಿಲೆಗಳ ವಾರವಾಗಿ ಪರಿಗಣಿಸಲ್ಪಡುತ್ತದೆ. ಹುಟ್ಟಿನಿಂದ ಬರುವ ಹೃದಯ ಕಾಯಿಲೆಗಳ ಬಗೆಗಿನ ಮಾಹಿತಿ ಹಾಗೂ ಇದರ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರನ್ನು ಗುರುತಿಸುವುದು ಇದರ ಮೂಲ ಉದ್ದೇಶ.
Related Articles
Advertisement
ಕೆಲವು ಬಾರಿ ಗರ್ಭಿಣಿ ತಾಯಿಯು ಕೆಲವು ತರಹದ ಮದ್ದು ತೆಗೆದುಕೊಳ್ಳುವುದರಿಂದಲೂ ಅಥವಾ ತಾಯಿಗೆ ಇರುವಂತಹ ಹೃದಯ ಕಾಯಿಲೆಯಿಂದ ಮಗುವಿಗೆ ಬರುವ ಸಾಧ್ಯತೆಯೂ ಇರುವುದು.
ಇದರಲ್ಲಿ ಕೆಲವು ಹುಟ್ಟಿನಿಂದ ಬರುವ ಹೃದಯ ಕಾಯಿಲೆಗಳು ತೀರಾ ಅಲ್ಪ ಮಟ್ಟದ್ದು ಆಗಿದ್ದು, ಮಕ್ಕಳ ತಜ್ಞರು ಕೆಲವು ಮದ್ದು ನೀಡಿ ಸರಿಪಡಿಸಬಹುದಾಗಿದೆ. ಇನ್ನು ಕೆಲವು ಹುಟ್ಟಿನಿಂದ ಬರುವ ಕಾಯಿಲೆಗಳು ಹೃದಯದ ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಬೇಕಾಗಿ ಬರಬಹುದು. ಕೆಲವು ಕಾಯಿಲೆಗಳಿಗೆ ಮಗು ಹುಟ್ಟಿದ ತತ್‌ಕ್ಷಣ ತೀವ್ರ ನಿಗಾದ ವ್ಯಸ್ಥೆ ಹಾಗೂ ವಿಶೇಷವಾದ ಮದ್ದು ನೀಡಬೇಕಾಗಿ ಬರಬಹುದು.
ಕೆಲವು ಸಣ್ಣ ತೂತುಗಳು ಮಗು ಬೆಳೆದಂತೆ ತನ್ನಿಂದ ತಾನಾಗಿ ಮುಚ್ಚಬಹುದು. ಇನ್ನು ಕೆಲವು ತೂತುಗಳನ್ನು ಮಗು ಬೆಳವಣಿಗೆಯಾಗಿ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಹೃದ್ರೋಗ ತಜ್ಞರು ತೊಡೆಯಿಂದ ಸಪೂರ ನಳಿಕೆಯನ್ನು ಹೃದಯಕ್ಕೆ ಕಳುಹಿಸಿ ತೂತಿನ ಭಾಗದಲ್ಲಿ ಒಂದು ಸಣ್ಣ ಸಾಧನವನ್ನು ಅಳವಡಿಸಿ ಮುಚ್ಚುತ್ತಾರೆ. ಕೆಲವು ಸಂಕೀರ್ಣ ಹೃದಯದ ಕಾಯಿಲೆಗಳಿಗೆ ಒಂದು ಅಥವಾ ಹೆಚ್ಚಿನ ಶಸ್ತ್ರಚಿಕಿತ್ಸೆಗಳ ಆವಶ್ಯಕತೆ ಇರುವ ಸಾಧ್ಯತೆ ಇರುತ್ತದೆ. ಕೆಲವು ವಂಶವಾಹಿನಿಯ (Genetic Syndrome)
ತೊಂದರೆಯಿಂದ ಹೃದಯ ಕಾಯಿಲೆಯ ಒಟ್ಟೊಟ್ಟಿಗೆ ಮಗುವಿನ ಬುದ್ಧಿಯ ಬೆಳವಣಿಗೆ ಕೂಡ ವ್ಯತ್ಯಾಸ ಕಂಡುಬರುವುದು. ಇದನ್ನು ಡೌನ್ ಸಿಂಡ್ರೋಮ್ (Down Syndrome) ಎನ್ನುವರು. ಆದುದರಿಂದ ಇಂತಹ ಅಸಮರ್ಪಕ ಬುದ್ಧಿಯ ಬೆಳವಣಿಗೆ ಇರುವ ಮಕ್ಕಳಿಗೆ ವಿವಿಧ ಸ್ತರಗಳಲ್ಲಿ ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ಬೇಕಾಗಿ ಬರಬಹುದು.
ಭಾರತದ ಪ್ರಸಿದ್ಧ ಸಿನೆಮಾ ನಿಟಿಯಾದ ಮಧುಬಾಲಾ ಎಂಬವರು ಕೂಡ ಹುಟ್ಟಿನಿಂದ ಬರುವ ಈ ಹೃದಯದ ತೊಂದರೆಗೆ ತುತ್ತಾಗಿದ್ದರೆಂಬುದನ್ನು ನಾವು ಇಲ್ಲಿ ಸ್ಮರಿಸಬಹುದು. ತಡವಾಗಿ ಈ ಹೃದಯದ ಸಮಸ್ಯೆ ಅವರ ಗಮನಕ್ಕೆ ಬಂದ ಕಾರಣ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ಅವರು ತನ್ನ 36ನೇ ವಯಸ್ಸಿನಲ್ಲಿ ತೀರಿಕೊಂಡರು. ಆಕೆಯ ಹುಟ್ಟುಹಬ್ಬವನ್ನು ಫೆಬ್ರವರಿ 14ರಂದು ಆಚರಿಸಲಾಗುತ್ತಿದ್ದು , ಈ ದಿನವನ್ನು ಹೃದಯ ಕಾಯಿಲೆಯ ಜಾಗೃತಾ ದಿನವಾಗಿಯೂ ಹಾಗೂ ಪ್ರೇಮಿಗಳ ದಿನಾಚರಣೆಯಾಗಿಯೂ ಆಚರಿಸಲ್ಪಡುತ್ತಿದೆ. ಆದುದರಿಂದ ಆದಷ್ಟು ಬೇಗ ಈ ಹುಟ್ಟಿನಿಂದ ಬರುವ ಹೃದಯ ಕಾಯಿಲೆಗಳನ್ನು ಪತ್ತೆ ಹಚ್ಚಿದಲ್ಲಿ ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ.
ಹೆಚ್ಚಿನ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹುಟ್ಟಿದ ಮಕ್ಕಳಿಗೆ ನಿಯತವಾಗಿ ಹೃದಯ ಪರೀಕ್ಷೆ ಮಾಡಿಸುವ ವ್ಯವಸ್ಥೆಯನ್ನು ಹೊಂದಿದ್ದು ನಮ್ಮ ದೇಶದಲ್ಲಿಯೂ ಈ ವ್ಯವಸ್ಥೆಯು ಹೆಚ್ಚಾಗಿ ಹಂತ ಹಂತವಾಗಿ ಜಾರಿಯಾಗುತ್ತಿದೆ. ಆದುದರಿಂದ ಈ ಹುಟ್ಟಿನಿಂದ ಬರುವ ಹೃದಯ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಿ ಶೀಘ್ರವಾಗಿ ಪತ್ತೆ ಹಚ್ಚಿ ಎಲ್ಲ ಮಕ್ಕಳಿಗೂ ಒಳ್ಳೆಯ ಆರೋಗ್ಯ ಒದಗುವಂತೆ ಪ್ರಯತ್ನಿಸೋಣ ಎಂಬುದೇ ನಮ್ಮ ಆಶಯ
ಡಾ| ಗುಂಜನ್ ಬಂಗಸಹಾಯಕ ಪ್ರಾಧ್ಯಾಪಕರು ಹಾಗೂ ಮಕ್ಕಳ ಹೃದಯ ತಜ್ಞರು, ಹೃದ್ರೋಗ ಚಿಕಿತ್ಸೆ ವಿಭಾಗ, ಕೆ.ಎಂ.ಸಿ. ಮಣಿಪಾಲ
ಡಾ| ಕೃಷ್ಣಾನಂದ ನಾಯಕ್
ಸಹಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಹೃದಯ ಮತ್ತು ಪರಿಚಲನ ತಂತ್ರಜ್ಞಾನ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ