ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿ, ಮೆರಿಟ್ ಮೇಲೆ ನೇಮಕ ಪ್ರಕ್ರಿಯೆ ನಡೆಸುತ್ತದೆ. ಆದರೆ, ಆ. 24ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ ನೇಮಕಾತಿ ಅಧಿಸೂಚನೆಯಲ್ಲಿ 6-8ನೇ ತರಗತಿಗೆ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ 100 ಅಂಕಕ್ಕೆ ವಿವರಣಾತ್ಮಕ ಲಿಖೀತ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಗೊಂದಲ ಸೃಷ್ಟಿಸಿದೆ.
ಈ ಮೊದಲು ಶಿಕ್ಷಕರ ನೇಮಕಾತಿ ವೇಳೆ ಬಹು ಆಯ್ಕೆ ಪ್ರಶ್ನೆಗಳಿದ್ದು, (ಒಎಂಆರ್ ಸೀಟ್‌ನಲ್ಲಿ) ಅಭ್ಯರ್ಥಿಗಳು ಒಂದಕ್ಕೆ ಉತ್ತರಿಸಬೇಕಿತ್ತು. ಆದರೆ, ಪ್ರಸ್ತುತ ನೇಮಕಾತಿ ಪೇಪರ್-1ರಲ್ಲಿ ಬಹು ಆಯ್ಕೆ ಪ್ರಶ್ನೆಗೆ ಉತ್ತರಿಸುವುದರ ಜತೆಗೆ ಪೇಪರ್-2ರಲ್ಲಿ ವಿಷಯ ಬೋಧನಾ ಸಾಮರ್ಥ್ಯ-100 ಅಂಕಗಳಿಗೆ ವಿವರಣಾತ್ಮಕ ಲಿಖೀತ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಇದರಲ್ಲಿ ಅಭ್ಯರ್ಥಿ ಶೇ. 50 ಅಂಕವನ್ನು ಕಡ್ಡಾಯವಾಗಿ ಪಡೆಯಲೇಬೇಕಿದೆ. ಇದಲ್ಲದೇ 6-8ನೇ ತರಗತಿ ಶಿಕ್ಷಕರ ನೇಮಕಾತಿಗೆ ಪದವಿ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಪಿಯುಸಿ ಬಳಿಕ ಡಿಇಡಿ ಪೂರೈಸಿ, ಟಿಇಟಿ ತೇರ್ಗಡೆ ಹೊಂದಿದ್ದರೂ ಈ ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ.
ಸರಕಾರದ ಹಲವು ಹುದ್ದೆಗಳ ನೇಮಕಾತಿಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿಗೆ ಒಎಂಆರ್ ಶೀಟ್‌ನಲ್ಲೇ ಉತ್ತರಿಸಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಆದರೆ 6-8ನೇ ತರಗತಿ ಶಿಕ್ಷಕರ ನೇಮಕಾತಿಯಲ್ಲಿ ಈ ಹಿಂದೆ ಇಲ್ಲದ ನಿಯಮ ಈಗೇಕೆ ಜಾರಿಗೆ ಬಂದಿದೆ ಎನ್ನುವುದು ಅಭ್ಯರ್ಥಿಗಳ ಪ್ರಶ್ನೆಯಾಗಿದೆ. ಕೂಡಲೇ ವಿವರಣಾತ್ಮಕ ಲಿಖೀತ ಪರೀಕ್ಷೆ ಕೈಬಿಟ್ಟು ಬಹು ಆಯ್ಕೆ (ಒಎಂಆರ್ ಸೀಟ್) ಪರೀಕ್ಷೆ ನಡೆಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಶಿಕ್ಷಕರ ಬೋಧನಾ ಸಾಮರ್ಥ್ಯ ಪರೀಕ್ಷಿಸಲು ಸಿಇಟಿಯಲ್ಲಿ ಲಿಖೀತ ಪರೀಕ್ಷೆಗೆ ಅವಕಾಶ ಕಲ್ಪಿಸಿದೆ. ಕೇವಲ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಿದರೆ ಶಿಕ್ಷಕನಲ್ಲಿ ಬೋಧನಾ ಸಾಮರ್ಥ್ಯವಿದೆ ಎಂದು ಹೇಗೆ ಗೊತ್ತಾಗುತ್ತೆ? ರಾಜ್ಯದಲ್ಲಿ ಬೋಧನಾ ಸಾಮರ್ಥ್ಯ ಹೊಂದಿದ ಶಿಕ್ಷಕರು ಆಯ್ಕೆಯಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎನ್ನುವ ಉದ್ದೇಶದಿಂದ ಈ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆಕಾಂಕ್ಷಿ ಅಭ್ಯರ್ಥಿಗಳು ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ.
– ಬಿ.ಕೆ. ಬಸವರಾಜು, ನಿರ್ದೇಶಕರು, ಸಾ.ಶಿ.ಇ. (ಪ್ರಾಥಮಿಕ ಶಿಕ್ಷಣ), ಬೆಂಗಳೂರು
ಶಿಕ್ಷಣ ಇಲಾಖೆಯ ಹೊಸ ಅಧಿಸೂಚನೆಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ವಿವರಣಾತ್ಮಕ ಲಿಖಿತ ಪರೀಕ್ಷೆಗೆ ಅವಕಾಶ ಕಲ್ಪಿಸಿದೆ. ಇದನ್ನು ಖಂಡಿಸಿ ಆ. 31ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ. ಶಿಕ್ಷಣ ಇಲಾಖೆ ಕೂಡಲೇ ಲಿಖೀತ ಪರೀಕ್ಷೆ ಕೈಬಿಟ್ಟು, ಬಹು ಆಯ್ಕೆ ಪರೀಕ್ಷೆ ನಡೆಸಲು ಮತ್ತೂಂದು ಅಧಿಸೂಚನೆ ಹೊರಡಿಸಬೇಕು.
– ದೇವಪ್ಪ ಪೊಲೀಸ ಪಾಟೀಲ, ಆಕಾಂಕ್ಷಿ ಅಭ್ಯರ್ಥಿ
– ದತ್ತು ಕಮ್ಮಾರ