Advertisement

ಮಾಹಿತಿಯಿಲ್ಲದೆ ಪ್ರಯಾಣಿಕರಿಗೆ ಗೊಂದಲ

11:08 PM May 31, 2020 | Sriram |

ಉಡುಪಿ: ನಗರದ ಸಿಟಿ ಬಸ್‌ ನಿಲ್ದಾಣದ ಯಾವ ಪ್ಲ್ರಾಟ್‌ಫಾರಂನಲ್ಲಿಯೂ ಬಸ್‌ಗಳ ಆಗಮನ- ನಿರ್ಗಮನವನ್ನು ಸಾರುವ ವೇಳಾಪಟ್ಟಿಯಾಗಲಿ, ಊರಿನ ಹೆಸರುಗಳಾಗಲಿ ಇಲ್ಲ. ಇದರಿಂದಾಗಿ ಉಡುಪಿಗೆ ಆಗಮಿಸುವವರು ಮಾಹಿತಿಗೆ ಬೇರೆಯವರನ್ನು ಆಶ್ರಯಿಸುವಂತಾಗಿದೆ.

Advertisement

ನಗರದ ವಿವಿಧೆಡೆಗಳಿಗೆ ತೆರಳಲು ನಗರದ ಸಿಟಿ ಬಸ್‌ ನಿಲ್ದಾಣ ಮೂಲ ತಾಣ. ಇಲ್ಲಿಗೆ ಕೇವಲ ಸ್ಥಳೀಯರಷ್ಟೆ ಅಲ್ಲ. ಹೊರ ರಾಜ್ಯ, ಜಿಲ್ಲೆಗಳಿಂದಲೂ ಸಹಸ್ರಾರು ಮಂದಿ ಪ್ರಯಾಣಿಕರು ಬಂದು ಇತರೆಡೆಗಳಿಗೆ ತೆರಳುತ್ತಾರೆ. ಲಾಕ್‌ಡೌನ್‌ ಸಡಿಲಿಕೆ ಅನಂತರ ಈಗ ಸಿಟಿ ಬಸ್‌ಗಳ ಓಡಾಟ ಆರಂಭಗೊಂಡು ಸಹಜ ಸ್ಥಿತಿಯತ್ತ ಜನಜೀವನ ಮರಳುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಬಸ್‌ ನಿಲ್ದಾಣದಲ್ಲಿ ಸೌಲಭ್ಯಗಳ ಕೊರತೆ ಕಾಡುತ್ತಿದೆ.

ಗ್ರಾಮೀಣ ಜನತೆ, ಹೊಸಬರಿಗೆ ಸಂಕಷ್ಟ
ಬಸ್‌ ನಿಲ್ದಾಣದಲ್ಲಿ 5 ಪ್ಲ್ರಾಟ್‌ಫಾರಂಗಳಿವೆ. ಲಾಕ್‌ಡೌನ್‌ಗಿಂತ ಹಿಂದಿನ ದಿನಗಳಲ್ಲಿ ದಿನವೊಂದಕ್ಕೆ ಸುಮಾರು 70 ಸಾವಿರ ಮಂದಿ ಪ್ರಯಾಣಿಕರು ಇಲ್ಲಿಗೆ ಬರುತ್ತಿದ್ದರು. 80 ಸಿಟಿ ಬಸ್‌ಗಳು ನಿತ್ಯ ಓಡಾಟ ನಡೆಸುತ್ತಿದ್ದವು. ಆದರೆ ಬಸ್‌ ನಿಲ್ದಾಣ ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಯಾಣಿಕರು ಕುಳಿತುಕೊಳ್ಳುವ ಆಸನ, ಕುಡಿಯುವ ನೀರು, ಬೆಳಕಿನ ಕೊರತೆಯ ಸಮಸ್ಯೆಗಳಿವೆ. ಬಹುಮುಖ್ಯವಾಗಿ ನಾನಾ ಪ್ರದೇಶಗಳಿಗೆ ತೆರಳುವ ಪ್ಲ್ರಾಟ್‌ ಫಾರಂಗಳಲ್ಲಿ ಆಯಾ ಪ್ರದೇಶಗಳಿಗೆ ತೆರಳುವ ಬಸ್‌ಗಳ ಕುರಿತು ನಾಮಫ‌ಲಕ ಅಳವಡಿಸಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಪ್ರಯಾಣಿಕರು, ಮಹಿಳೆಯರು, ವೃದ್ಧರು ತಮ್ಮ ಊರುಗಳಿಗೆ ಹೋಗಲು ಪರದಾಡುವಂತಾಗಿದೆ. ಬಸ್‌ನಿಲ್ದಾಣದಲ್ಲಿ ಅತ್ತಿತ್ತ ಓಡಾಡಿ, ಮಾಹಿತಿ ಕೇಳಿ ಬಸ್‌ ಹತ್ತಿ ಪ್ರಯಾಣಿಸಬೇಕಾಗಿದೆ.

ಬಸ್‌ ಏರಿ ಇಳಿಯುವ ಧಾವಂತ
ನಿಲ್ದಾಣದಲ್ಲಿ ಮಾಹಿತಿ ಫ‌ಲಕಗಳಿಲ್ಲದ ಕಾರಣ ವಿವಿಧ ಪ್ರದೇಶಗಳಿಗೆ ತೆರಳುವ ಧಾವಂತದಲ್ಲಿರುವ ಪ್ರಯಾಣಿಕರು ಬೇರೆ ಬಸ್‌ಗಳನ್ನು ಏರಿ ಇಳಿಯುವ ಪ್ರಸಂಗಗಳು ನಡೆಯುತ್ತಿರುತ್ತವೆ. ತಮ್ಮ ಊರಿನ ಕಡೆ ಹೋಗೋದಿಲ್ಲ ಎಂಬ ಮಾಹಿತಿ ಗೊತ್ತಾಗುತ್ತಲೇ ಗಾಬರಿಯಿಂದ ಬಸ್‌ನಿಂದ ಕೆಳಗೆ ಇಳಿಯುತ್ತಾರೆ. ಇದು ಕೆಲವು ಬಾರಿ ಅವಘಡಗಳಿಗೆ ಅವಕಾಶ ಮಾಡಿಕೊಡುತ್ತದೆ. ಸೂಕ್ತ ನಾಮಫ‌ಲಕವಿಲ್ಲದೆ ಪ್ರಯಾಣಿಕರು ಗೊಂದಲಕ್ಕೆ ಈಡಾಗುತ್ತಿದ್ದಾರೆ.

ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿಲ್ಲ
2008ರಲ್ಲಿ ನಗರಸಭೆಯ ಅಂದಿನ ಬಿಜೆಪಿ ಆಡಳಿತದ ಸಂದರ್ಭದಲ್ಲಿ ಈ ಬಸ್‌ ನಿಲ್ದಾಣವನ್ನು ಬೆಂಗಳೂರಿನ ಖಾಸಗಿ ಜಾಹೀರಾತು ಸಂಸ್ಥೆಯೊಂದಕ್ಕೆ 40 ಲ.ರೂ.ವೆಚ್ಚದಲ್ಲಿ ಜಾಹೀರಾತು ಪ್ರದರ್ಶಿಸಲು ಅನೂಕೂಲವಾಗುವ ರೀತಿಯಲ್ಲಿ ನಿರ್ಮಿಸಿತ್ತು. ಆದರೆ ಸಂಸ್ಥೆ ಪ್ಲ್ರಾಟ್‌ಫಾರಂನಲ್ಲಿ ಅಳವಡಿಸಲು ಜಾಹೀರಾತುಗಳು ಸಿಗುತ್ತಿಲ್ಲ ಎಂಬ ಕಾರಣವೊಡ್ಡಿ ನಿರ್ವಹಣೆಯನ್ನೇ ಕೈ ಬಿಟ್ಟಿದೆ. 2011ರಲ್ಲಿ ಬಸ್‌ನಿಲ್ದಾಣ ಒಂದಷ್ಟು ಅಭಿವೃದ್ಧಿಪಡಿಸಿದ್ದು ಬಿಟ್ಟರೆ ಹೆಚ್ಚಿನ ಅಭಿವೃದ್ಧಿಯಾಗಿಲ್ಲ. ಈಗ ನಿಲ್ದಾಣವನ್ನು ನಗರಸಭೆ ನಿರ್ವಹಣೆ ಮಾಡುತ್ತಿದೆ.

Advertisement

ಮೇಲ್ದರ್ಜೆ ಕನಸು ನನೆಗುದಿಗೆ
ಸಿಟಿ ಬಸ್‌ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆಗಳು ಹಿಂದಿನಿಂದಲೂ ಇದೆ. ಪ್ರಮೋದ್‌ ಮಧ್ವರಾಜ್‌ ಸಚಿವರಾಗಿದ್ದ ಅವಧಿಯಲ್ಲಿ ಒಂದು ಭಾರಿ ಈ ವಿಚಾರ ಪ್ರಸ್ತಾಪಗೊಂಡಿತ್ತು. ನಗರಸಭೆ ಸದಸ್ಯರನ್ನೆಲ್ಲ ಕರೆದು ಸಭೆ ನಡೆಸಿದ್ದರು. ಈಗಿನ ಸಾರಿಗೆ ಬಸ್‌ ನಿಲ್ದಾಣ ಮತ್ತು ಸಿಟಿ ಬಸ್‌ ನಿಲ್ದಾಣ ಎರಡು ಜಾಗವನ್ನು ಸೇರಿಸಿ ಸುಸಜ್ಜಿತವಾಗಿ ಬಸ್‌ನಿಲ್ದಾಣ ನಿರ್ಮಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಅನಂತರದಲ್ಲಿ ಅದು ನೆನೆಗುದಿಗೆ ಬಿದ್ದಿದೆ. ಇದೀಗ ಮತ್ತೆ ಮೇಲ್ದರ್ಜೆಗೇರಿಸುವ ವಿಚಾರ ಮುನ್ನೆಲೆಗೆ ಬಂದಿದೆ. ಸ್ಥಳಿಯ ಸಂಘ-ಸಂಸ್ಥೆಗಳು, ನಗರಸಭೆ ಸದಸ್ಯರು ಬಸ್‌ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಶಾಸಕರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷರ ಮೇಲೆ ಒತ್ತಡ ತರುವ ಪ್ರಯತ್ನ ಆರಂಭಿಸಿದ್ದಾರೆ.

ದುರಸ್ತಿ ಭಾಗ್ಯ
ಬಸ್‌ನಿಲ್ದಾಣದಲ್ಲಿ ರಾತ್ರಿ 10.45ರ ತನಕವೂ ಬಸ್‌ ಓಡಾಟ ಇರುತ್ತದೆ. ರಾತ್ರಿ ಹೊತ್ತು ಮದ್ಯವ್ಯಸನಿಗಳು ಬಸ್‌ನಿಲ್ದಾಣದಲ್ಲಿ ಮಲಗಿರುತ್ತಾರೆ. ಹಗಲು ಹೊತ್ತಿನಲ್ಲಿಯೂ ಈ ದೃಶ್ಯ ಕಂಡುಬರುತ್ತದೆ. ಇದರಿಂದಾಗಿ ಬಸ್‌ ಕಾಯುವ ಹೆಣ್ಣುಮಕ್ಕಳು ಮುಜುಗರಕ್ಕೆ ಒಳಪಡುತ್ತಾರೆ. ರಾತ್ರಿ ಕಾವಲು ಸಿಬಂದಿಗಳು ಇಲ್ಲದೆ ನಿಲ್ದಾಣ ಶಿಥಿಲಗೊಂಡಿದೆ. ಈಗ ಮಳೆಯೂ ಆರಂಭಗೊಂಡಿದ್ದು, ನಿಲ್ದಾಣದ ಅವ್ಯವಸ್ಥೆ ಮನಗಂಡು ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸ್ವಯಂ ಸೇವಕರು, ನಗರಸಭೆ ಸದಸ್ಯರು, ಜನಪ್ರತಿನಿಧಿಗಳ ಸಹಕಾರದಲ್ಲಿ ಶಿಥಿಲಗೊಂಡ ನಿಲ್ದಾಣದ ಕೆಲ ಭಾಗವನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದಾರೆ. ಸುಸಜ್ಜಿತಗೊಳಿಸು ವತ್ತ ನಗರಸಭೆ, ಜನಪ್ರತಿನಿಧಿಗಳು ಗಮನಹರಿಸಬೇಕು ಎನ್ನುವುದು ಪ್ರಯಾ ಣಿಕರ ಅಭಿಪ್ರಾಯವಾಗಿದೆ.

ಸೂಕ್ತ ಕ್ರಮ
ಬಸ್‌ನಿಲ್ದಾಣದಲ್ಲಿ ಕೆಲವೊಂದಷ್ಟು ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಬೆಳಕಿನ ತೊಂದರೆಗೆ ಸಂಬಂಧಿಸಿ ಹೈಮಾಸ್ಟ್‌ ದೀಪಗಳನ್ನು ದುರಸ್ತಿಪಡಿಸಲಾಗಿದೆ. ಇನ್ನುಳಿದ ಸಮಸ್ಯೆ ಕುರಿತು ಪರಿಶೀಲನೆ ನಡೆಸಿ ಹಂತ ಹಂತವಾಗಿ ಬಗೆಹರಿಸಲು ಸೂಕ್ತ ಕ್ರಮ ವಹಿಸಲಾಗುವುದು
– ಆನಂದ ಕಲ್ಲೋಳಿಕರ್‌ ಪೌರಾಯುಕ್ತ, ಉಡುಪಿ ನಗರಸಭೆ

ಮಾಸ್ಟರ್‌ ಪ್ಲಾನ್‌ ಅಗತ್ಯ
ಸಿಟಿ ಬಸ್‌ ನಿಲ್ದಾಣದಲ್ಲಿ ನಾಮಫ‌ಲಕ, ನೀರು, ಬೆಳಕು ಇತ್ಯಾದಿ ಕೊರತೆಗಳನ್ನು ಸರಿಪಡಿಸಿ ಕೊಡುವುದಾಗಿ ನಗರಸಭೆ ಭರವಸೆ ನೀಡಿದೆ. ನಗರಸಭೆಗೆ ನಾವು ತೆರಿಗೆ ಕಟ್ಟುತ್ತೇವೆ. ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದರೆ ಉತ್ತಮ. ಆದರೆ ಈ ಪ್ರಸ್ತಾವ ಸರಕಾರದ ಮಟ್ಟದಲ್ಲಿ ಏನಾಗಿದೆ ಗೊತ್ತಿಲ್ಲ. ಇದಕ್ಕೆ ಸೂಕ್ತ ಮಾಸ್ಟರ್‌ ಪ್ಲಾನ್‌ ರೂಪಿಸಿದರೆ ಉತ್ತಮ.
– ಕುಯಿಲಾಡಿ ಸುರೇಶ್‌ ನಾಯಕ್‌ ಅಧ್ಯಕ್ಷ, ಸಿಟಿ ಬಸ್‌ ಮಾಲಕರ ಸಂಘ, ಉಡುಪಿ ಜಿಲ್ಲೆ

ಆಗಬೇಕಿದ್ದೇನು?
– ಶಿಥಿಲಗೊಂಡ ಬಸ್‌ ನಿಲ್ದಾಣದ ವಿವಿಧ ಭಾಗಗಳ ಶಾಶ್ವತ ದುರಸ್ತಿ.
– ಮಳೆ ಮತ್ತು ಗಾಳಿಗೆ ಸೋರದಂತೆ ಸೂಕ್ತ ರಕ್ಷಣೆಯ ಆಧುನಿಕ ಛಾವಣಿ ಹೊದಿಸುವುದು.
– ಬಸ್‌ ಸಂಚಾರದ ಬಗ್ಗೆ ಪ್ರತಿ ಪ್ಲ್ರಾಟ್‌ಫಾರಂನಲ್ಲಿ ಮಾಹಿತಿ ಫ‌ಲಕವನ್ನು ಅಳವಡಿಸಬೇಕು.
– ಸ್ತ್ರೀಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಬೇಕು.
– ವಿದ್ಯುತ್‌ ಕೈ ಕೊಟ್ಟಾಗ ಪರ್ಯಾಯ ದೀಪದ ವ್ಯವಸ್ಥೆ. ಪೂರ್ತಿ ಬೆಳಕಿನ ವ್ಯವಸ್ಥೆ.
– ರಾತ್ರಿ ಹೊತ್ತು ಪೊಲೀಸ್‌ ಕಾವಲು, ಗಸ್ತು.
– ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ.
– ಬಸ್‌ ನಿಲ್ದಾಣದೊಳಗೆ ಅನ್ಯ ವಾಹನ ಸಂಚಾರ ನಿರ್ಬಂಧಿಸುವುದು.
– ವೇಗವಾಗಿ ನಿಲ್ದಾಣದೊಳಗೆ ಬಸ್‌ಗಳು ನುಗ್ಗದಂತೆ ಪ್ರತ್ಯೇಕ ಆಗಮನ,ನಿರ್ಗಮನ ವ್ಯವಸ್ಥೆ.
– ಹಿಂದಿನ ಮತ್ತು ಮುಂದಿನ ಭಾಗದಲ್ಲಿ ಪ್ರತ್ಯೇಕ ನಾಮಫ‌ಲಕ ಅಳವಡಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next