Advertisement

ಶಾಸಕರ ಸಮ್ಮುಖದಲ್ಲಿ 2 ಗುಂಪುಗಳ ನಡುವೆ ಘರ್ಷಣೆ

09:10 PM Dec 28, 2019 | Team Udayavani |

ಗುಡಿಬಂಡೆ: ತಾಲೂಕಿನ ಗೆಗ್ಗಿಲರಾಳ್ಳಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ವೇಳೆ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಸಮ್ಮುಖದಲ್ಲಿ ಎರಡು ಗುಂಪುಗಳ ನಡುವೆ ಅವಾಚ್ಯ ಶಬ್ದಗಳ ನಿಂದನೆ, ಘರ್ಷಣೆ ನಡೆದಿರುವ ಘಟನೆ ಗೆಗ್ಗಿಲರಾಳ್ಳಹಳ್ಳಿಯಲ್ಲಿ ಶನಿವಾರ ನಡೆದಿದೆ.

Advertisement

ತಾಲೂಕಿನ ಸೋಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗೆಗ್ಗಿಲರಾಳ್ಳಹಳ್ಳಿಯಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಡಿ.28 ರಂದು ದಿನಾಂಕ ನಿಗದಿಯಾಗಿತ್ತು. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಘಟಕದ ಉದ್ಘಾಟನೆ ನೆರವೇರಿಸಿ ವಾಪಸ್ಸಾಗುವ ವೇಳೆ ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಪತಿ ಮಂಜುನಾಥ್‌ ಹಾಗೂ ತಾಪಂ ಅಧ್ಯಕ್ಷೆ ಪತಿ ಕೃಷ್ಣೇಗೌಡರ ನಡುವೆ ಹಳೆಯ ಕಾಮಗಾರಿಯೊಂದರ ವಿಚಾರಕ್ಕೆ ವಾಕ್ಸಮರ ಉಂಟಾಗಿದೆ.

ಇದೇ ವೇಳೆ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿದ್ದರೂ ಕೂಡ ತಾವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಶಾಸಕ ಸುಬ್ಬಾರೆಡ್ಡಿ ವಿರುದ್ಧ ಮಂಜುನಾಥ ದೂರಿದ್ದಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಮಂಜುನಾಥ ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.

ಹೊಡೆದಾಟ: ಶಾಸಕರಿಗೆ ಏಕವಚನದಲ್ಲಿ ಮಾತನಾಡಿದ್ದೀರಿ ಎಂದು ಮಂಜುನಾಥ ಮೇಲೆ ಶಾಸಕರ ಬೆಂಬಲಿಗರು ಹಾಗೂ ಮಂಜುನಾಥ ಪರವಾಗಿ ಕೆಲವರ ಮಧ್ಯೆ ಮಾತಿನ ಚಕಮಕಿ ನಡೆದು ಗಂಡಸರು, ಹೆಂಗಸರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸ್ವಲ್ಪ ಸಮಯದ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಗುಡಿಬಂಡೆ ಪೊಲೀಸರು ಗಲಾಟೆಯನ್ನು ಶಮನಗೊಳಿಸಿದರು.

ಗಲಾಟೆಗೆ ಕಾರಣ: ಗಲಾಟೆಗೆ ಮುಖ್ಯ ಕಾರಣ ಗೆಗ್ಗಿಲರಾಳ್ಳಹಳ್ಳಿ ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಗೆ ಕೇಬಲ್‌ ಗ್ರಾಮ ಪಂಚಾಯತಿ ಅಧ್ಯಕ್ಷೆ ಪತಿ ಮಂಜುನಾಥ್‌ ಅಳವಡಿಸಿದ್ದು, ಈ ಕೇಬಲ್‌ ಹಣವನ್ನು ತಾಪಂ ಅಧ್ಯಕ್ಷೆ ಪತಿ ಕೃಷ್ಣೇಗೌಡ ಬ್ಯಾಂಕ್‌ ಖಾತೆಗೆ 1.18 ಲಕ್ಷ ರೂ . ಜಮಾ ಆಗಿದೆ ಎನ್ನಲಾಗಿದೆ. ಇದರಲ್ಲಿ 68000 ರೂ. ಕೊಟ್ಟಿದ್ದು, ಉಳಿದ 50000 ರೂ. ನಮಗೆ ಕೊಡಿಸಬೇಕೆಂದು ಮಂಜುನಾಥ ಶಾಸಕರಿಗೆ ಕೇಳಿದರು.

Advertisement

ಆಗ ಶಾಸಕರು ಕೃಷ್ಣೇಗೌಡರಿಂದ 50 ಸಾವಿರ ರೂ. ಮಂಜುನಾಥ್‌ಗೆ ಕೊಡಿಸಿ ಎಂದು ಎಡಬ್ಲೂಇಗೆ ತಿಳಿಸಿರುತ್ತಾರೆ. ಬಳಿಕ ಕೃಷ್ಣೇಗೌಡ ಮತ್ತು ಮಂಜುನಾಥ್‌ ಬೆಂಬಲಿಗರು ಗಲಾಟೆ ಮಾಡಿಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಂಜುನಾಥ್‌ ಹಾಗೂ ಕೃಷ್ಣೇಗೌಡರ ಮಧ್ಯೆ ಈ ಹಿಂದೆ ಉತ್ತಮ ಸಂಬಂಧ ಇದ್ದಾಗ ಕೊಳವೆಬಾವಿಗೆ ಕೇಬಲ್‌ ಅಳವಡಿಸಲಾಗಿತ್ತು. ಇದರ ಹಣವನ್ನು ಮಂಜುನಾಥ್‌ ಭರಿಸಿದ್ದರು ಎನ್ನಲಾಗಿದೆ.

ಜಾತಿ ನಿಂದನೆ ದೂರು: ನಿವೇಶನಗಳ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗ್ರಾಪಂ ಅಧ್ಯಕ್ಷೆ ಪತಿ ಮತ್ತು ಸಂಬಂಧಿರು ಜಾತಿ ನಿಂದನೆ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆ. ನಮಗೆ ನ್ಯಾಯ ನೀಡಿ ರಕ್ಷಣೆ ನೀಡಬೇಕೆಂದು ಮಂಜುನಾಥ್‌ ವಿರುದ್ಧ ಗೆಗ್ಗಿಲರಾಳ್ಳಿ ಲಕ್ಷ್ಮಮ್ಮ ಎಂಬುವರು ಗುಡಿಬಂಡೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರತಿ ದೂರು: ಈ ಬಗ್ಗೆ ಗ್ರಾಪಂ ಅಧ್ಯಕ್ಷೆ ರಜನಿ ಸಹ ನಮ್ಮ ಮೇಲೆ ಕೃಷ್ಣೇಗೌಡ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಪ್ರತಿ ದೂರನ್ನು ಗುಡಿಬಂಡೆ ಪೊಲೀಸ್‌ ಠಾಣೆಯಲ್ಲಿ ನೀಡಿದ್ದಾರೆ.

ರೌಡಿಸಂಗೆ ಹೆದರುವ ವ್ಯಕ್ತಿಯಲ್ಲ – ಸುಬ್ಬಾರೆಡ್ಡಿ: ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಸೋಮೇಶ್ವರ ಗ್ರಾಮದ ಹಾಲಿನ ಡೇರಿ ಕಟ್ಟಡ ಉದ್ಘಾಟನೆ ವೇಳೆ ನಾನು ಕ್ಷೇತ್ರದ ಉದ್ಧಾರಕ್ಕೆ ಬಡವರ ಕಲ್ಯಾಣಕ್ಕಾಗಿ ಶಾಸಕನಾಗಿರುವುದು. ನಿಮ್ಮ ಕೆಲಸಗಳನ್ನು ಮಾಡಿಕೊಡಲು ನಾನಿರುವುದು. ನಿಮ್ಮ ಸಮಸ್ಯೆಗಳನ್ನು ನೇರವಾಗಿ ಬಂದು ನನ್ನ ಬಳಿ ಹೇಳಿ.

ಗುಂಪಾಗಿ ಬರುವುದು, ರೌಡಿಸಂ ಮಾಡುವುದು ಸರಿಯಲ್ಲ. ರೌಡಿಸಂಗೆ ಹೆದರುವ ವ್ಯಕ್ತಿ ನಾನಲ್ಲ ಎಂದರು. ಅಭಿವೃದ್ಧಿ ವಿಚಾರಕ್ಕೆ ಕಾಲು ಬೇಕಾದರೂ ಹಿಡಿಯುತ್ತೇನೆ. ಆದರೆ ರೌಡಿಸಂ, ದೌರ್ಜನ್ಯಗಳನ್ನು ಎಲ್ಲಿ ಮಟ್ಟ ಹಾಕಬೇಕೊ ಅಲ್ಲಿಯೇ ಮಟ್ಟ ಹಾಕುತ್ತೇನೆ ಎಂದು ಗೆಗ್ಗಿಲರಾಳ್ಳಹಳ್ಳಿ ಬಳಿ ನಡೆದ ಘಟನೆಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next