ನವದೆಹಲಿ: ಇನ್ನು ಮುಂದೆ, ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಕೆಂದರೆ ಅವರ ಹೆತ್ತವರ ಅನುಮತಿಯನ್ನು ಡಿಜಿಲಾಕರ್ ಮೂಲಕವೇ ಪಡೆಯುವಂಥ ವ್ಯವಸ್ಥೆ ಜಾರಿಯಾಗಲಿದೆ. ಡಿಜಿಲಾಕರ್ ಮೂಲಕ ಹೆತ್ತವರು ಮತ್ತು ಮಕ್ಕಳ ಗುರುತನ್ನು ದೃಢೀಕರಿಸುವ ವ್ಯವಸ್ಥೆಯೊಂದನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಗೂಗಲ್‌ನ ಯೂಟ್ಯೂಬ್ ಕಿಡ್ಸ್‌ನಂಥ ಸಾಮಾಜಿಕ ಜಾಲತಾಣಗಳು ತಮ್ಮ ವೇದಿಕೆಗಳನ್ನು ಬಳಸಿಕೊಳ್ಳುವ ಹದಿಹರೆಯದ ಮಕ್ಕಳ ಪೋಷಕರ ದಾಖಲೆಗಳನ್ನು ನೇರವಾಗಿ ಡಿಜಿಲಾಕರ್‌ನಿಂದಲೇ ಸಂಗ್ರಹಿಸಿ, ದೃಢೀಕರಿಸಬಹುದು. ಜತೆಗೆ, ಹೆತ್ತವರ ಒಪ್ಪಿಗೆಯನ್ನೂ ಪಡೆಯಬಹುದು.
ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ(ಡಿಪಿಡಿಪಿ) ಕಾಯ್ದೆ, 2023ರ ಪ್ರಕಾರ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ 13ರಿಂದ 18ರೊಳಗಿನವರು ಇಂಟರ್ನೆಟ್, ಆ್ಯಪ್‌ಗಳಿಂದ ಯಾವುದೇ ಸೇವೆ ಪಡೆಯಬೇಕೆಂದರೆ ಅದಕ್ಕೆ ಪೋಷಕರ ಅನುಮತಿ ಅಗತ್ಯ ಎಂಬ ನಿಯಮವಿದೆ. ತಮ್ಮ ಮಕ್ಕಳಿಗೆ ಜಾಲತಾಣಗಳ ಸೇವೆ ಸಿಗಬೇಕೆಂದರೆ ಹೆತ್ತವರು ಒನ್ ಟೈಂ ಪಾಸ್‌ವರ್ಡ್ ಮೂಲಕ ಒಪ್ಪಿಗೆಯನ್ನು ನೀಡಬೇಕು.
ಅವರ ಒಪ್ಪಿಗೆಯನ್ನು “ಪೇರೆಂಟ್ಸ್ ಕನ್ಸೆಂಟ್ ಲೆಡ್ಜರ್’ನಲ್ಲಿ ದಾಖಲಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಒಂದು ಬಾರಿ ಪೋಷಕರು ಮತ್ತು ಮಕ್ಕಳ ಒಟಿಪಿ ಹೊಂದಿಕೆಯಾದರೆ, ನಂತರದಲ್ಲಿ ಡಿಜಿಲಾಕರ್ ಮೂಲಕ ಎಲ್ಲ ದಾಖಲೆಗಳ ದೃಢೀಕರಣ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ಯಾವುದೇ ಕ್ಷಣದಲ್ಲಾದರೂ ತಮ್ಮ ಒಪ್ಪಿಗೆಯನ್ನು ವಾಪಸ್ ಪಡೆಯುವ ಅವಕಾಶವೂ ಪೋಷಕರಿಗೆ ಇರುತ್ತದೆ ಎಂದೂ ಹೇಳಲಾಗಿದೆ.