Advertisement

“ವಿಶ್ವಾಸದಿಂದ ಮಾನವ ಸಂಬಂಧ ಸದೃಢ’

02:38 PM Mar 14, 2017 | Team Udayavani |

ಮಡಿಕೇರಿ:ದೇವ ವಿಶ್ವಾಸದಿಂದ ಮನುಷ್ಯನಿಗೆ ವಿಶಾಲ ಮನಸ್ಸು ಉಂಟಾಗುತ್ತದೆ ಮತ್ತು ಮಾನವ ಸಂಬಂಧಗಳು ಸದೃಢಗೊಳ್ಳುತ್ತವೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ ರಾಜ್ಯ ಸಲಹಾ ಸಮಿತಿ ಸದಸ್ಯ ಮಂಗಳೂರಿನ ಎಂ.ಎಚ್‌. ಮುಹಮ್ಮದ್‌ ಕುಂಞಿ ಅವರು ಅಭಿಪ್ರಾಯಪಟ್ಟಿದ್ದಾರೆ. 

Advertisement

ನಗರದ ಕಾವೇರಿ ಹಾಲ್‌ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ ಸ್ಥಾನೀಯ ಶಾಖೆ ಏರ್ಪಡಿಸಿದ್ದ “ನನ್ನ ಧರ್ಮದಲ್ಲಿ ದೇವರ ಕಲ್ಪನೆ’ ಎಂಬ ವಿಷಯದಲ್ಲಿ ಏರ್ಪಡಿಸಿದ್ದ ವಿಚಾರ ಗೋಷ್ಠಿಯಲ್ಲಿ ಅವರು ವಿಷಯ ಮಂಡನೆ ಮಾಡಿದರು.

ದೇವರು ಪ್ರಪಂಚದ ವ್ಯವಸ್ಥೆಗಳನ್ನೆಲ್ಲ ಮನುಷ್ಯನಿಗಾಗಿ ಸೃಷ್ಟಿಸಿರುತ್ತಾನೆ. ದೇವನಿಗೆ ವಿಧೇಯನಾಗುವುದು ಮನುಷ್ಯನ ಕರ್ತವ್ಯವಾಗಿದೆ. ದೇವವಿಶ್ವಾಸ ಹೊಂದಿದವನು ಎಲ್ಲ ಬಗೆಯ ಗುಲಾಮಗಿರಿಯಿಂದ ಮುಕ್ತನಾಗುತ್ತಾನೆ. ಅವನಿಗೆ ಜೀವನದ ಬಗೆಗಿನ ಭರವಸೆ ಹೆಚ್ಚಾಗುತ್ತದೆ. ಖಾಸಗೀ ಜೀವನದಲ್ಲಿ ಪರಿಶುದ್ಧತೆಯನ್ನು ಕಾಪಾಡದವನು ಸಾರ್ವಜನಿಕ ಬದುಕಿನಲ್ಲೂ ಪರಿಶುದ್ಧತೆಯನ್ನು ಕಾಪಾಡುವುದಿಲ್ಲ ಎಂದರು.

ಜೀವನದ ಪಾವಿತ್ರತೆಗೆ ಧರ್ಮವಿಶ್ವಾಸ ಅತಿ ಅಗತ್ಯ. ಎಲ್ಲ ಧರ್ಮೀಯರೂ ಸಹೋದರರೆಂಬುದು ಜಗತ್ತಿನ ವಾಸ್ತವಿಕತೆಯಾಗಿದೆ’ ಎಂದರು.

ಗೋಷ್ಠಿಯನ್ನು ಉದ್ಘಾಟಿಸಿದ ಮಡಿಕೇರಿ ಶಾಂತಿ ಚರ್ಚ್‌ನ ಸಭಾ ಪಾಲಕರಾದ ರೆ|ಫಾ| ಸುಧೀರ್‌ ರೋಬಿನ್ಸನ್‌ರವರು ಮಾತನಾಡಿ ನಂಬಿಕೆಗಳನ್ನು ಪರಸ್ಪರ ಗೌರವಿಸಬೇಕು. ಪರಸ್ಪರ ಪ್ರೀತಿಸುವುದರ ಮೂಲಕ ದೇವರನ್ನು ಅನುಭವಿಸಬೇಕು. ಪರಸ್ಪರ ಪ್ರೀತಿ ಗೌರವಗಳ ಮೂಲಕ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದರು. 

Advertisement

ವಿಷಯ ಮಂಡನೆ ಮಾಡಿದ ಮತ್ತೂಬ್ಬ ಅತಿಥಿ “ಇಸ್ಕಾನ್‌’ ಅಧ್ಯಕ್ಷ ಸುಧೀರ್‌ ಚೈತನ್ಯ ದಾಸ್‌ “ದೇವವಿಶ್ವಾಸದ’   ಮೂಲಕ ಜೀವನಕ್ಕೆ ಶಿಷ್ಟಾಚಾರ ಮತ್ತು ಶಿಸ್ತು ಲಭಿಸುತ್ತದೆ. ಅನ್ಯಾಯದಿಂದ ಹಾಗೂ ಅನೀತಿಯಿಂದ ಜೀವನವನ್ನು ಮುಕ್ತಗೊಳಿಸುವುದು ದೇವವಿಶ್ವಾಸದ ಬೇಡಿಕೆಯಾಗಿದೆ. ಮನುಷ್ಯ ಭಗವಂತನ ಅಂಶವಾಗಿದೆ ಎಂದರು.

ದೇವವಿಶ್ವಾಸವು ಆತ್ಮಕ್ಕೂ ಪರಮಾತ್ಮಕ್ಕೂ ಸಂಬಂಧವನ್ನು ಕಲ್ಪಿಸುತ್ತದೆ. ಬಯಕೆ ಮತ್ತು ಬೇಡಿಕೆಗಳ ಮಧ್ಯೆ ವ್ಯತ್ಯಾಸವನ್ನು ತಿಳಿದು ಜ್ಞಾನದ ಮೂಲದಲ್ಲಿ ಬದುಕನ್ನು ಸಾಗಿಸಬೇಕು.”ಎಂದು ತಿಳಿ ಹೇಳಿದರು.  

ಜಮಾಅತೆ ಇಸ್ಲಮೀ ಹಿಂದ್‌ ಕರಾವಳಿ ವಲಯ ಸಂಚಾಲಕ ಯು. ಅಬ್ದುಸ್ಸಲಾಂ ಅಧ್ಯಕ್ಷೀಯ ಭಾಷಣ ಮಾಡಿದರು. “ದೇವರನ್ನು ನಿರಾಕರಿಸಿದಲ್ಲಿ ಅದರ ಪರಿಣಾಮ ನಮ್ಮ ಮೇಲೆಯೇ ಉಂಟಾಗುತ್ತದೆ’ ಎಂದು ಹೇಳಿದರು. 

ಪ್ರಾರಂಭದಲ್ಲಿ ಮಸ್ಜಿದುರ್ರಹ್ಮಾ ಖತೀಬ್‌ ಉಮರ್‌ ಮೌಲವಿ ಕುರ್‌ಆನ್‌ ಪಠಿಸಿದರು. ಜಮಾಅತೆ ಇಸ್ಲಾಮೀ ಹಿಂದ್‌ ಮಡಿಕೇರಿ ವರ್ತುಲ ಸಂಚಾಲಕ ಜಿ.ಹೆಚ್‌.ಮುಹಮ್ಮದ್‌ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. 

ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌, ಮಡಿಕೇರಿ ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾಂನಂದ, ಮದರ್‌ ಥೆರೆಸಾ ಪ್ರಶಸ್ತಿ ವಿಜೇತರಾದ ಜಯಶ್ರೀ ಅನಂತಶಯನ, ಜಿಲ್ಲಾ ಎ.ಪಿ.ಸಿ.ಆರ್‌. ಅಧ್ಯಕ್ಷ ಹಾಗೂ ವಕೀಲ ಕೆ.ಎಂ. ಕುಂಞಿ ಅಬ್ದುಲ್ಲ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್‌. ದೇವಯ್ಯ ಉಪಸ್ಥಿತರಿದ್ದರು. ಎಂ. ಅಬ್ದುಲ್ಲ ವಂದಿಸಿದರೆ, ಪಿ.ಕೆ. ಅಬ್ದುಲ ರೆಹೆಮಾನ್‌ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next